ಲಕ್ನೋ: ಅಯೋಧ್ಯೆ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ನೂತನ ಮುಖ್ಯ ಕಾರ್ಯನಿರ್ವಹಣಾಧಿಕಾರಿ (CEO) ಆಗಿ ಭಾರತೀಯ ವಾಯುಪಡೆಯ ನಿವೃತ್ತ ಏರ್ ಮಾರ್ಷಲ್ ಜೀತೇಂದ್ರ ಮಿಶ್ರಾ ಅವರನ್ನು ನೇಮಕ ಮಾಡಲಾಗಿದೆ.
ಆಪರೇಷನ್ ಸಿಂಧೂರ್ ಕಾರ್ಯಾಚರಣೆ ನಡೆದ ಸಂದರ್ಭದಲ್ಲಿ ಜೀತೇಂದ್ರ ಮಿಶ್ರಾ ಅವರು ಭಾರತೀಯ ವಾಯುಪಡೆಯ ಪಶ್ಚಿಮ ಕಮಾಂಡ್‌ನ ಮುಖ್ಯಸ್ಥರಾಗಿದ್ದರು. ಅನುಭವಿ ಯುದ್ಧ ವಿಮಾನ ಪೈಲಟ್ ಆಗಿರುವ ಅವರು ಭಾರತೀಯ ವಾಯುಪಡೆಯಲ್ಲಿ 38 ವರ್ಷಗಳಿಗೂ ಅಧಿಕ ಕಾಲ ಸೇವೆ ಸಲ್ಲಿಸಿದ್ದಾರೆ.
ಜೀತೇಂದ್ರ ಮಿಶ್ರಾ ಯಾರು?
ನಿವೃತ್ತ ಏರ್ ಮಾರ್ಷಲ್ ಜೀತೇಂದ್ರ ಮಿಶ್ರಾ ಅವರು ಭಾರತೀಯ ವಾಯುಪಡೆಯ ಹಿರಿಯ ಅಧಿಕಾರಿಗಳಲ್ಲಿ ಒಬ್ಬರಾಗಿದ್ದಾರೆ. ಪಶ್ಚಿಮ ವಾಯು ಕಮಾಂಡ್‌ನ ಏರ್ ಆಫೀಸರ್ ಕಮಾಂಡಿಂಗ್-ಇನ್-ಚೀಫ್ ಆಗಿಯೂ ಅವರು ಸೇವೆ ಸಲ್ಲಿಸಿದ್ದಾರೆ.
ತಮ್ಮ ಸುದೀರ್ಘ ಸೇವಾವಧಿಯಲ್ಲಿ ಫೈಟರ್ ಸ್ಕ್ವಾಡ್ರನ್‌ನ ಕಮಾಂಡಿಂಗ್ ಆಫೀಸರ್, ಏರ್‌ಕ್ರಾಫ್ಟ್ ಆ್ಯಂಡ್ ಸಿಸ್ಟಮ್ಸ್ ಟೆಸ್ಟಿಂಗ್ ಎಸ್ಟಾಬ್ಲಿಷ್‌ಮೆಂಟ್ (ASTE)ನ ಮುಖ್ಯ ಪರೀಕ್ಷಾ ಪೈಲಟ್, ಎರಡು ವಾಯುನೆಲೆಗಳ ಏರ್ ಆಫೀಸರ್ ಕಮಾಂಡಿಂಗ್ ಹಾಗೂ ವಾಯುಪಡೆ ಕಚೇರಿಯ ವಿವಿಧ ಪ್ರಮುಖ ಹುದ್ದೆಗಳನ್ನು ನಿರ್ವಹಿಸಿದ್ದಾರೆ.
ಇದರ ಜೊತೆಗೆ ಪ್ರಿನ್ಸಿಪಲ್ ಡೈರೆಕ್ಟರ್ (ASR), ಸಹಾಯಕ ವಾಯುಪಡೆ ಮುಖ್ಯಸ್ಥ (ಯೋಜನೆಗಳು), ASTE ಕಮಾಂಡೆಂಟ್ ಹಾಗೂ ಸಂಯೋಜಿತ ರಕ್ಷಣಾ ಸಿಬ್ಬಂದಿಯ ಉಪಮುಖ್ಯಸ್ಥ ಸೇರಿದಂತೆ ಹಲವು ಮಹತ್ವದ ಜವಾಬ್ದಾರಿಗಳನ್ನು ಅವರು ನಿಭಾಯಿಸಿದ್ದಾರೆ. ಅಯೋಧ್ಯೆ ಟ್ರಸ್ಟ್‌ನ ಸಿಇಒ ಹುದ್ದೆ ವಹಿಸಿಕೊಳ್ಳುವ ಮುನ್ನ ಅವರು ಸಂಯೋಜಿತ ರಕ್ಷಣಾ ಸಿಬ್ಬಂದಿಯ ಉಪಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿದ್ದರು.
ಸುದೀರ್ಘ ಹಾಗೂ ವಿಶಿಷ್ಟ ಸೇವೆಯನ್ನು ಗುರುತಿಸಿ ಜೀತೇಂದ್ರ ಮಿಶ್ರಾ ಅವರು ‘ಅತಿ ವಿಶಿಷ್ಟ ಸೇವಾ ಪದಕ’ (AVSM) ಮತ್ತು ‘ವಿಶಿಷ್ಟ ಸೇವಾ ಪದಕ’ (VSM) ಗೌರವಗಳಿಗೆ ಭಾಜನರಾಗಿದ್ದಾರೆ.
ಅನುಭವಿ ಸೇನಾ ಅಧಿಕಾರಿಯೊಬ್ಬರನ್ನು ಅಯೋಧ್ಯೆ ರಾಮಮಂದಿರ ಟ್ರಸ್ಟ್‌ನ ಆಡಳಿತಾತ್ಮಕ ಜವಾಬ್ದಾರಿಗೆ ನೇಮಕ ಮಾಡಿರುವುದು ಇದೀಗ ಗಮನ ಸೆಳೆದಿದೆ.















