ಕಾಲೇಜು ವಿದ್ಯಾರ್ಥಿ ಅಪಹರಣ, ಹಲ್ಲೆ ಆರೋಪ: ಖ್ಯಾತ ನಟ ದುನಿಯಾ ವಿಜಯ್ ಪುತ್ರನ ವಿರುದ್ಧ ಎಫ್‌ಐಆರ್

ಬೆಂಗಳೂರು: ಕಾಲೇಜು ವಿದ್ಯಾರ್ಥಿಯೊಬ್ಬನನ್ನು ಅಪಹರಿಸಿ ಕಾರಿನಲ್ಲೇ ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಆರೋಪದಡಿ ಸ್ಯಾಂಡಲ್‌ವುಡ್ ನಟ ದುನಿಯಾ ವಿಜಯ್ ಅವರ ಪುತ್ರ ಸಾಮ್ರಾಟ್ ವಿಜಯ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

ಹಲ್ಲೆಗೊಳಗಾದ ಮನೀಶ್ ಗೌಡ ನೀಡಿದ ದೂರಿನ ಆಧಾರದ ಮೇಲೆ ಕೆಂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಾಮ್ರಾಟ್ ವಿಜಯ್ ಸೇರಿದಂತೆ ಸಮೃದ್ಧ್ ಸಿಂಹ, ವಿಶ್ವಾಸ್ ಸುಚಿ, ಸ್ಕಂದ ವೆಂಕಟೇಶ್ ಹಾಗೂ ಸಮೀದ್ ವಿರುದ್ಧ ವಿವಿಧ ಸೆಕ್ಷನ್‌ಗಳಡಿ ಎಫ್‌ಐಆರ್ ದಾಖಲಿಸಲಾಗಿದೆ.

ಏನಿದು ಪ್ರಕರಣ?

ಬೆಂಗಳೂರಿನ ಪ್ರತಿಷ್ಠಿತ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ಸಾಮ್ರಾಟ್ ವಿಜಯ್ ಅವರು ಸೋಮವಾರ (ಆ.31) ಸ್ನೇಹಿತರೊಂದಿಗೆ ಕಾರಿನಲ್ಲಿ ತೆರಳುತ್ತಿದ್ದರು. ಈ ವೇಳೆ ಅದೇ ಕಾಲೇಜಿನ ವಿದ್ಯಾರ್ಥಿ ಮನೀಶ್ ಗೌಡ ಹಾಗೂ ಆತನ ಸ್ನೇಹಿತರು ಮತ್ತೊಂದು ಕಾರಿನಲ್ಲಿ ಸಾಮ್ರಾಟ್ ಅವರ ಕಾರನ್ನು ಓವರ್‌ಟೇಕ್ ಮಾಡಿ ರೇಗಿಸಿದ್ದಾರೆ ಎನ್ನಲಾಗಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಇಬ್ಬರ ನಡುವೆ ಕಿರಿಕ್ ಆರಂಭವಾಗಿದ್ದು, ಸಾಮ್ರಾಟ್ ವಿಜಯ್ ಮನೀಶ್ ವಿರುದ್ಧ ಆಕ್ರೋಶಗೊಂಡಿದ್ದರು ಎನ್ನಲಾಗಿದೆ.

ಮರುದಿನ ಅಂದರೆ ಮಂಗಳವಾರ (ಸೆ.1) ಮಧ್ಯಾಹ್ನ 12 ಗಂಟೆ ಸುಮಾರಿಗೆ ಕಾಲೇಜು ಆವರಣದಲ್ಲಿ ಮನೀಶ್ ಗೌಡ ತಮ್ಮ ಬೈಕ್ ಪಾರ್ಕ್ ಮಾಡುತ್ತಿದ್ದ ವೇಳೆ ಬಿಳಿ ಬಣ್ಣದ ಸಫಾರಿ ಕಾರಿನಲ್ಲಿ ಬಂದ ಸಾಮ್ರಾಟ್ ವಿಜಯ್ ಹಾಗೂ ಅವರ ಸ್ನೇಹಿತರು ಮನೀಶ್‌ನನ್ನು ಬಲವಂತವಾಗಿ ಕಾರಿನೊಳಗೆ ಎಳೆದುಕೊಂಡು ಹೋಗಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಬಳಿಕ ಪಟ್ಟಣಗೆರೆ ಮುಖ್ಯ ರಸ್ತೆಯತ್ತ ಕಾರನ್ನು ಚಲಾಯಿಸಿಕೊಂಡು ಹೋಗಿ, ಚಲಿಸುತ್ತಿದ್ದ ಕಾರಿನಲ್ಲೇ ಮನೀಶ್ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಸಾಮ್ರಾಟ್ ವಿಜಯ್, ಸಮೃದ್ಧ್ ಸಿಂಹ, ವಿಶ್ವಾಸ್, ವೆಂಕಟೇಶ್ ಹಾಗೂ ಸಮೀದ್ ಸೇರಿದಂತೆ ಕೆಲವರು ಮನೀಶ್ ಅವರ ಮುಖ, ಕುತ್ತಿಗೆ, ಎದೆ ಮತ್ತು ತಲೆಯ ಭಾಗಕ್ಕೆ ಹಲ್ಲೆ ನಡೆಸಿ, ಬಳಿಕ ನಡುರಸ್ತೆಯಲ್ಲಿ ಬಿಟ್ಟು ಪರಾರಿಯಾಗಿದ್ದಾರೆ ಎಂದು ಆರೋಪಿಸಲಾಗಿದೆ.

ಹಲ್ಲೆಯಿಂದ ಗಾಯಗೊಂಡ ಮನೀಶ್ ಗೌಡ ಕೆಂಗೇರಿ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದು, ಅಪಹರಣ ಹಾಗೂ ಹಲ್ಲೆ ಆರೋಪದಡಿ ಪ್ರಕರಣ ದಾಖಲಾಗಿದೆ. ಸದ್ಯ ಪೊಲೀಸರು ಪ್ರಕರಣದ ಕುರಿತು ತನಿಖೆ ಮುಂದುವರಿಸಿದ್ದಾರೆ.