
ಮಣಿಪಾಲ: ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (MAHE)ನ ಘಟಕವಾದ ಮಣಿಪಾಲ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (MIT)ಯ ಪ್ರಾಜೆಕ್ಟ್ ಡ್ರೋನ್‌ಏಡ್ ತಂಡವು ಯುನೈಟೆಡ್ ಕಿಂಗ್‌ಡಮ್‌ನಲ್ಲಿ ನಡೆದ UAS ಚಾಲೆಂಜ್ 2026ರಲ್ಲಿ ಗಮನಾರ್ಹ ಸಾಧನೆ ಮಾಡಿದೆ.
ಜೂನ್ 29ರಿಂದ ಜುಲೈ 2ರವರೆಗೆ ಯುಕೆಯ BMFA ಬಕ್‌ಮಿನ್‌ಸ್ಟರ್‌ನಲ್ಲಿ ನಡೆದ ಪ್ರತಿಷ್ಠಿತ ಅಂತರರಾಷ್ಟ್ರೀಯ ಸ್ಪರ್ಧೆಯಲ್ಲಿ ವಿಶ್ವದ 54 ವಿಶ್ವವಿದ್ಯಾಲಯಗಳ ತಂಡಗಳು ಭಾಗವಹಿಸಿದ್ದವು. ಈ ಪೈಪೋಟಿಯಲ್ಲಿ MIT, MAHE ಮಣಿಪಾಲವನ್ನು ಪ್ರತಿನಿಧಿಸಿದ ಪ್ರಾಜೆಕ್ಟ್ ಡ್ರೋನ್‌ಏಡ್ ತಂಡವು ಪ್ರಶಸ್ತಿ ಗೆದ್ದುಕೊಂಡಿದ್ದು, ಜಾಗತಿಕ ಮಟ್ಟದಲ್ಲಿ 22ನೇ ಸ್ಥಾನ ಹಾಗೂ ಏಷ್ಯಾದಲ್ಲಿ 6ನೇ ಸ್ಥಾನ ಪಡೆದುಕೊಂಡಿದೆ.
ಎಂಟು ಸದಸ್ಯರ ತಂಡದಲ್ಲಿ ಹರ್ಷ್ ಪೈ, ಕೆವಿನ್ ಸಿಬಿ, ದೇವಿಕಾ ರಾಜೀವ್, ಯುವರಾಜ್ ಸಿಂಗ್, ವೇದಾಂತ ಕೃಷ್ಣ, ಸೌರಜಿತ್ ಸಹಾ, ಸಾಹಿಲ್ ಸಿನ್ಹಾ ಮತ್ತು ಶ್ರೇಯಸ್ ಎಸ್. ಕುಮಾರ್ ಇದ್ದರು. ಇವರು ಸ್ಕೂಲ್ ಆಫ್ ಮೆಕ್ಯಾನಿಕಲ್ ಎಂಜಿನಿಯರಿಂಗ್, ಸ್ಕೂಲ್ ಆಫ್ ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ಹಾಗೂ ಸ್ಕೂಲ್ ಆಫ್ ಕಂಪ್ಯೂಟರ್ ಎಂಜಿನಿಯರಿಂಗ್ ವಿಭಾಗಗಳನ್ನು ಪ್ರತಿನಿಧಿಸಿದರು.
ಜಾಗತಿಕ ಮಟ್ಟದ ಸ್ಪರ್ಧೆಯಲ್ಲಿ ತಂಡದ ಪ್ರತಿಭೆ, ಸೃಜನಶೀಲತೆ, ಎಂಜಿನಿಯರಿಂಗ್ ಪರಿಣತಿ ಹಾಗೂ ಸಹಯೋಗದ ಮನೋಭಾವ ಗಮನ ಸೆಳೆಯಿತು.
ವಿಶೇಷವೆಂದರೆ, ಈ ವರ್ಷ ಪ್ರಶಸ್ತಿ ಗೆದ್ದ ಏಕೈಕ ಭಾರತೀಯ ತಂಡ ಎಂಬ ಹೆಗ್ಗಳಿಕೆಗೆ ಪ್ರಾಜೆಕ್ಟ್ ಡ್ರೋನ್‌ಏಡ್ ಪಾತ್ರವಾಗಿದೆ. ಐಐಟಿ ಬಾಂಬೆ, ಬ್ರಿಸ್ಟಲ್ ವಿಶ್ವವಿದ್ಯಾಲಯ, ಕ್ರಾನ್‌ಫೀಲ್ಡ್ ವಿಶ್ವವಿದ್ಯಾಲಯ, ಚಾಲ್ಮರ್ಸ್ ವಿಶ್ವವಿದ್ಯಾಲಯ ಸೇರಿದಂತೆ ಹಲವು ಪ್ರತಿಷ್ಠಿತ ಸಂಸ್ಥೆಗಳ ತಂಡಗಳೊಂದಿಗೆ ಸ್ಪರ್ಧಿಸಿ ಮಣಿಪಾಲದ ತಂಡ ಗಮನಾರ್ಹ ಸಾಧನೆ ಮಾಡಿದೆ.
ಇದೇ ವೇಳೆ ಯುಪಿವಿ, ವೇಲೆನ್ಸಿಯಾ ಸೇರಿದಂತೆ ವಿವಿಧ ಅಂತಾರಾಷ್ಟ್ರೀಯ ವಿಶ್ವವಿದ್ಯಾಲಯಗಳೊಂದಿಗೆ ಶೈಕ್ಷಣಿಕ ಹಾಗೂ ತಾಂತ್ರಿಕ ಸಂಪರ್ಕ ಬೆಳೆಸಿಕೊಳ್ಳುವ ಅವಕಾಶವೂ ತಂಡಕ್ಕೆ ದೊರೆತಿದೆ.ಮಣಿಪಾಲ MITಯ ಈ ಸಾಧನೆ ದೇಶದ ಗಮನ ಸೆಳೆದಿರುವುದು ವಿಶೇಷ.















