ಉಡುಪಿ: ಪ್ರಕರಣಗಳ ತನಿಖೆಯಲ್ಲಿ ವೈಜ್ಞಾನಿಕ ಸಾಕ್ಷ್ಯಗಳನ್ನು ಸಮರ್ಪಕವಾಗಿ ಸಂಗ್ರಹಿಸಿ, ಅವುಗಳನ್ನು ಪ್ರಕರಣದೊಂದಿಗೆ ಜೋಡಿಸಿ ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಡುವುದು ಅತ್ಯಂತ ಮುಖ್ಯ. ಇದರಿಂದ ಆರೋಪಿಗೆ ಶಿಕ್ಷೆ ಕೊಡಿಸುವುದರ ಜತೆಗೆ ಸಂತ್ರಸ್ತರಿಗೆ ನ್ಯಾಯ ಒದಗಿಸಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಫೊರೆನ್ಸಿಕ್ ಸೈನ್ಸ್ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಮಂಗಳೂರು ಪಶ್ಚಿಮ ವಲಯದ ಪೊಲೀಸ್ ಉಪ ಮಹಾ ನಿರೀಕ್ಷಕ (ಡಿಐಜಿ) ಚೇತನ್ ಆರ್. ಹೇಳಿದರು.
ಮಣಿಪಾಲ ಕೆಎಂಸಿಯ ಡಾ. ಟಿ.ಎಂ.ಎ. ಪೈ ಸಭಾಂಗಣದಲ್ಲಿ ನಡೆದ ಮಂಗಳೂರು ಪಶ್ಚಿಮ ವಲಯ ಮಟ್ಟದ ಎಂಟನೇ ಪೊಲೀಸ್ ಕರ್ತವ್ಯ ಕೂಟದ ಸಮಾರೋಪ ಸಮಾರಂಭದಲ್ಲಿ ವಿಜೇತರಿಗೆ ಬಹುಮಾನ ವಿತರಿಸಿ ಅವರು ಮಾತನಾಡಿದರು.

‘ಕಾನೂನು ಸುವ್ಯವಸ್ಥೆ ಕಾಪಾಡುವುದು ಹಾಗೂ ಅಪರಾಧ ಪತ್ತೆ ಮಾಡುವುದು ಪೊಲೀಸರ ಪ್ರಮುಖ ಕರ್ತವ್ಯ. ಪೊಲೀಸರು ಶೇ.100ರಷ್ಟು ಬದ್ಧತೆಯಿಂದ ಕರ್ತವ್ಯ ನಿರ್ವಹಿಸಿದರೆ ಸಮಾಜದಲ್ಲಿ ಶಾಂತಿ ನೆಲೆಸಲು ಸಾಧ್ಯ. ಇದರಿಂದ ದೇಶದ ಪ್ರಗತಿಗೂ ಸಹಕಾರಿಯಾಗುತ್ತದೆ’ ಎಂದರು.
ಶಾಂತಿ ನೆಲೆಸಿರುವ ಪ್ರದೇಶಗಳಲ್ಲಿ ದೊಡ್ಡ ಉದ್ಯಮಗಳು ಹೂಡಿಕೆ ಮಾಡಲು ಆಸಕ್ತಿ ತೋರುತ್ತವೆ. ಇದರಿಂದ ಉದ್ಯೋಗಾವಕಾಶಗಳು ಸೃಷ್ಟಿಯಾಗುತ್ತವೆ. ಉದ್ಯಮಿಗಳು ಹೂಡಿಕೆ ಮಾಡುವ ಮುನ್ನ ಅಲ್ಲಿನ ಕಾನೂನು ಸುವ್ಯವಸ್ಥೆ ಹಾಗೂ ಶಾಂತಿಯುತ ವಾತಾವರಣವನ್ನು ಗಮನಿಸುತ್ತಾರೆ. ಹೀಗಾಗಿ ಪೊಲೀಸ್ ಸಿಬ್ಬಂದಿಯಿಂದ ಹಿರಿಯ ಅಧಿಕಾರಿಗಳವರೆಗೆ ಎಲ್ಲರೂ ಜವಾಬ್ದಾರಿಯಿಂದ ಕರ್ತವ್ಯ ನಿರ್ವಹಿಸಬೇಕು ಎಂದು ತಿಳಿಸಿದರು.
ಅಪರಾಧಿಗೆ ಶಿಕ್ಷೆ ಕೊಡಿಸುವುದಷ್ಟೇ ಪೊಲೀಸರ ಉದ್ದೇಶವಲ್ಲ. ಇತರರು ಅಪರಾಧ ಎಸಗದಂತೆ ಸಮಾಜಕ್ಕೆ ಸಂದೇಶ ನೀಡುವುದೂ ಪೊಲೀಸ್ ಇಲಾಖೆಯ ಜವಾಬ್ದಾರಿಯಾಗಿದೆ ಎಂದು ಚೇತನ್ ಆರ್. ಹೇಳಿದರು.
ಮಣಿಪಾಲ ಸಹಕುಲಾಧಿಪತಿ ಡಾ. ಎಚ್.ಎಸ್. ಬಲ್ಲಾಳ್, ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಂ ಶಂಕರ್, ಮಂಗಳೂರು ವಲಯ ಅಭಿಯೋಜನೆ ಇಲಾಖೆಯ ಹಿರಿಯ ಕಾನೂನು ಅಧಿಕಾರಿ ಶಿವ ಪ್ರಸಾದ್ ಆಳ್ವ ಕೆ., ಮಂಗಳೂರು ಆರ್‌ಎಫ್‌ಎಸ್‌ಎಲ್ ಉಪನಿರ್ದೇಶಕಿ ಸುಜಾತಾ ಕೆ.ಎಂ. ಉಪಸ್ಥಿತರಿದ್ದರು.ಪಶ್ಚಿಮ ವಲಯ ಬೆರಳಚ್ಚು ಘಟಕದ ಪೊಲೀಸ್ ನಿರೀಕ್ಷಕ ಸೋಮಶೇಖರ್ ಸ್ವಾಗತಿಸಿದರು. ಶಿವಾನಂದ ಕಾರ್ಯಕ್ರಮ ನಿರೂಪಿಸಿದರು.















