ಮಣಿಪಾಲ: ಸೇವಾ ಚಟುವಟಿಕೆಗಳು, ಸಮಾಜಮುಖಿ ಯೋಜನೆಗಳು ಹಾಗೂ ಸದಸ್ಯರ ಸಕ್ರಿಯ ಪಾಲ್ಗೊಳ್ಳುವಿಕೆಯ ಮೂಲಕ ಗಮನ ಸೆಳೆದಿರುವ ರೋಟರಿ ಕ್ಲಬ್ ಮಣಿಪಾಲ ಟೌನ್, 2025-26ನೇ ಸಾಲಿನಲ್ಲಿ ಎರಡು ಪ್ರತಿಷ್ಠಿತ ಗೌರವಗಳೊಂದಿಗೆ ಒಟ್ಟು 26 ವಿವಿಧ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದೆ.
ರೋಟರಿ ಇಂಟರ್ನ್ಯಾಷನಲ್ ಡಿಸ್ಟ್ರಿಕ್ಟ್ 3182ರ ಡಿಸ್ಟ್ರಿಕ್ಟ್ ಅವಾರ್ಡ್ಸ್ 2025-26ರಲ್ಲಿ, ಮಣಿಪಾಲ ಟೌನ್ ಕ್ಲಬ್ ಸಣ್ಣ ಕ್ಲಬ್ಗಳ (40 ಸದಸ್ಯರು ) ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿದೆ. ಈ ಸಾಧನೆಗಾಗಿ ಕ್ಲಬ್ಗೆ ವಿಶೇಷ ಟ್ರೋಫಿಯನ್ನು ನೀಡಿ ಗೌರವಿಸಲಾಯಿತು.
ಇದರೊಂದಿಗೆ, ರೋಟರಿ ಇಂಟರ್ನ್ಯಾಷನಲ್ ವತಿಯಿಂದ ನೀಡಲಾಗುವ ಪ್ರತಿಷ್ಠಿತ ‘ಕ್ಲಬ್ ಎಕ್ಸಲೆನ್ಸ್ ಅವಾರ್ಡ್ 2025-26’ ಕೂಡ ರೋಟರಿ ಕ್ಲಬ್ ಮಣಿಪಾಲ ಟೌನ್ಗೆ ಲಭಿಸಿದೆ. ಸದಸ್ಯರಿಗೆ ಉತ್ತಮ ರೋಟರಿ ಅನುಭವವನ್ನು ಒದಗಿಸುವುದು, ರೋಟರಿಯ ಮೌಲ್ಯಗಳನ್ನು ಪರಿಣಾಮಕಾರಿಯಾಗಿ ಅಳವಡಿಸಿಕೊಳ್ಳುವುದು ಹಾಗೂ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುವ ಕ್ಲಬ್ಗಳನ್ನು ಗುರುತಿಸುವ ಉದ್ದೇಶದಿಂದ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ.
ಕ್ಲಬ್ ಅಧ್ಯಕ್ಷ ರೋ. ಡಾ. ದೀಪಕ್ ರಾಮ್ ಬಾಯಿರಿ ಹಾಗೂ ಕಾರ್ಯದರ್ಶಿ ರೋ. ಮೋಹನ್ ನಾಯಕ್ ಅವರ ನೇತೃತ್ವದಲ್ಲಿ ಶಿಕ್ಷಣ, ಆರೋಗ್ಯ, ಪರಿಸರ, ಸಮಾಜಸೇವೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಹಲವಾರು ಪರಿಣಾಮಕಾರಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಈ ಸೇವಾ ಚಟುವಟಿಕೆಗಳು ಮತ್ತು ಸದಸ್ಯರ ಸಕ್ರಿಯ ಭಾಗವಹಿಸುವಿಕೆಯೇ ಕ್ಲಬ್ನ ಈ ಗಮನಾರ್ಹ ಸಾಧನೆಗೆ ಪ್ರಮುಖ ಕಾರಣವಾಗಿದೆ.
ಜಿಲ್ಲಾ 3182ರ ಡಿಸ್ಟ್ರಿಕ್ಟ್ ಗವರ್ನರ್ ರೋ. ಕೆ. ಪಾಲಾಕ್ಷ, ಅಸಿಸ್ಟೆಂಟ್ ಗವರ್ನರ್ ರೋ. ಅಮಿತ್ ಅರವಿಂದ್, ವಲಯ ಸೇನಾನಿ ರೋ. ಡಾ. ಶ್ರೀಧರ್ ಡಿ. ಸೇರಿದಂತೆ ಜಿಲ್ಲಾ ಪದಾಧಿಕಾರಿಗಳ ಮಾರ್ಗದರ್ಶನ ಹಾಗೂ ಕ್ಲಬ್ನ ಎಲ್ಲ ಸದಸ್ಯರ ನಿರಂತರ ಸಹಕಾರವನ್ನು ಈ ಸಂದರ್ಭದಲ್ಲಿ ಸ್ಮರಿಸಲಾಗಿದೆ.
“ಪ್ರಶಸ್ತಿಗಳು ನಮ್ಮ ಸಾಧನೆಯ ಅಂತ್ಯವಲ್ಲ; ಸಮಾಜಮುಖಿ ಸೇವೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಮುಂದುವರಿಸಲು ಪ್ರೇರಣೆ ನೀಡುವ ಮೈಲುಗಲ್ಲುಗಳು. ಈ ಗೌರವಗಳು ರೋಟರಿ ಕ್ಲಬ್ ಮಣಿಪಾಲ ಟೌನ್ನ ಪ್ರತಿಯೊಬ್ಬ ಸದಸ್ಯರ ಪರಿಶ್ರಮ, ಬದ್ಧತೆ ಹಾಗೂ ತಂಡದ ಒಗ್ಗಟ್ಟಿಗೆ ಸಂದ ಗೌರವವಾಗಿದೆ” ಎಂದು ಕ್ಲಬ್ ಅಧ್ಯಕ್ಷ ರೋ. ಡಾ. ದೀಪಕ್ ರಾಮ್ ಬಾಯಿರಿ ತಿಳಿಸಿದ್ದಾರೆ.
ಈ ಪ್ರತಿಷ್ಠಿತ ಗೌರವಗಳು ಕ್ಲಬ್ನ ನಿರಂತರ ಸೇವಾ ಪರಂಪರೆಗೆ ಮತ್ತಷ್ಟು ಮೆರುಗು ನೀಡಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಜನಪರ, ಪರಿಣಾಮಕಾರಿ ಹಾಗೂ ಶಾಶ್ವತ ಸೇವಾ ಯೋಜನೆಗಳನ್ನು ಕೈಗೊಳ್ಳುವ ಸಂಕಲ್ಪವನ್ನು ಕ್ಲಬ್ ಸದಸ್ಯರು ವ್ಯಕ್ತಪಡಿಸಿದ್ದಾರೆ.















