ಮೂಡುಬಿದಿರೆ: ಹೊಸತನದ ಯೋಚನೆ, ಧೈರ್ಯದ ನಿರ್ಧಾರವೇ ಯಶಸ್ಸನ್ನು ನಿರ್ಧಾರಿಸುವ ಪ್ರಮುಖ ಅಂಶವಾಗಿದ್ದು, ವಿದ್ಯಾರ್ಥಿಗಳು ತಮ್ಮಲ್ಲಿರುವ ಉತ್ಸಾಹವನ್ನು ಸೃಜನಶೀಲ ಚಟುವಟಿಕೆಗಳ ಮೂಲಕ ಸಕಾರಾತ್ಮಕವಾಗಿ ಬಳಸಿಕೊಳ್ಳಬೇಕು ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಆಳ್ವ ಹೇಳಿದರು.
ಆಳ್ವಾಸ್ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಸೋಮವಾರ ನಡೆದ ಇನಾಮು ವಿದ್ಯಾರ್ಥಿ ವೇದಿಕೆಯ 2026-27ರ ಶೈಕ್ಷಣಿಕ ವರ್ಷದ ಚಟುವಟಿಕೆಳ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.
ವಿದ್ಯಾರ್ಥಿಗಳೇ ರೂಪಿಸಿ ನಡೆಸುವ ಅತ್ಯುತ್ತಮ ಕಾರ್ಯಕ್ರಮಗಳಲ್ಲಿ ಇನಾಮು ಕೂಡ ಒಂದಾಗಿದೆ. ವಿದ್ಯಾರ್ಥಿಗಳು ಒಟ್ಟಾಗಿ ಸೇರಿ ಹೊಸ ಆಲೋಚನೆಗಳೊಂದಿಗೆ ಕಾರ್ಯಕ್ರಮಗಳನ್ನು ರೂಪಿಸುತ್ತಿರುವುದು ಸಂತಸದ ವಿಚಾರ ಎಂದರು.
ನಮಗೆ ದೊರೆಯುತ್ತಿರುವ ಸೌಲಭ್ಯಗಳು ಮತ್ತು ಅವಕಾಶಗಳ ಮಹತ್ವವನ್ನು ಅರಿತುಕೊಳ್ಳಬೇಕು. ನಮ್ಮ ಪೋಷಕರು ಮಾಡುತ್ತಿರುವ ತ್ಯಾಗವನ್ನು ಅರ್ಥಮಾಡಿಕೊಂಡು, ಜೀವನದ ಗುರಿಯತ್ತ ಹೆಚ್ಚಿನ ಗಮನ ಹರಿಸಬೇಕು. ಸಮಾಜದಲ್ಲಿ ಸಮಸ್ಯೆಗಳು ಇರುವುದು ಸಹಜ. ಆದರೆ ಅವುಗಳನ್ನು ವಿಭಿನ್ನವಾಗಿ ಹಾಗೂ ಹೊಸ ರೀತಿಯಲ್ಲಿ ನೋಡುವ ಮತ್ತು ಪರಿಹಾರ ಕಂಡುಕೊಳ್ಳುವ ಚಿಂತನೆ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಹೊಸ ಆಲೋಚನೆಗಳಿಂದಲೇ ಕಂಪನಿಗಳು ಹಾಗೂ ಹೊಸ ಉದ್ಯಮಗಳು ಹುಟ್ಟಿಕೊಳ್ಳುತ್ತವೆ. ಆದ್ದರಿಂದ ಪ್ರತಿಯೊಬ್ಬ ವಿದ್ಯಾರ್ಥಿಯೂ ಸಾಂಪ್ರದಾಯಿಕ ಚಿಂತನೆಯಾಚೆಗೆ ಯೋಚಿಸುವ ಪ್ರಯತ್ನ ಮಾಡಬೇಕು. ಜೀವನದಲ್ಲಿ ಬೆಳೆಯುವುದು ಕಷ್ಟ ಎಂಬ ಭಾವನೆ ಹೊಂದಬಾರದು. ಯಶಸ್ಸಿನತ್ತ ಸಾಗಲು ಅಪಾಯವನ್ನು ಸ್ವೀಕರಿಸುವ ಧೈರ್ಯ ಅತ್ಯಂತ ಮುಖ್ಯ ಎಂದು ಹೇಳಿದರು.
ಯಶಸ್ವಿಯಾಗಲು ಅಸಾಧಾರಣ ಬುದ್ಧಿವಂತಿಕೆ ಅಥವಾ ವಿಶೇಷ ಪ್ರತಿಭೆ ಇರಲೇಬೇಕೆಂದಿಲ್ಲ. ಅಪಾಯವನ್ನು ಸ್ವೀಕರಿಸುವ ಧೈರ್ಯ ಮತ್ತು ಕಠಿಣ ಪರಿಶ್ರಮವಿದ್ದರೆ ಜೀವನದಲ್ಲಿ ಬೆಳೆಯಲು ಸಾಧ್ಯ. ವಿದ್ಯಾರ್ಥಿಗಳು ತಮ್ಮಲ್ಲಿರುವ ಉತ್ಸಾಹವನ್ನು ಮುಂದುವರಿಸಿಕೊAಡು ವಿವಿಧ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು ಎಂದರು.
ಆಳ್ವಾಸ್ ಕಾಲೇಜಿನ ಪ್ರಾಂಶುಪಾಲ ಡಾ. ಕುರಿಯನ್ ಮಾತನಾಡಿ, ಡಿಜಿಟಲ್ ಮತ್ತು ಕೃತಕ ಬುದ್ಧಿಮತ್ತೆಯ ಯುಗದಲ್ಲಿ ಓದುವ ಹಾಗೂ ಬರೆಯುವ ಅಭ್ಯಾಸವನ್ನು ವಿದ್ಯಾರ್ಥಿಗಳು ಕಾಪಾಡಿಕೊಳ್ಳಬೇಕು. ನಿರಂತರ ಓದುವ ಹವ್ಯಾಸವು ವ್ಯಕ್ತಿತ್ವ ರೂಪಿಸುವುದರ ಜೊತೆಗೆ ಭವಿಷ್ಯದ ಚಿಂತನಾ ಸಾಮರ್ಥ್ಯವನ್ನೂ ಬೆಳೆಸುತ್ತದೆ. ಡಿಜಿಟಲ್ ವೇದಿಕೆಗಳ ಅತಿಯಾದ ಅವಲಂಬನೆಯಿAದ ಮಾನವರ ಓದುವ ಮತ್ತು ಬರೆಯುವ ಸಾಮರ್ಥ್ಯ ಕುಂಠಿತವಾಗುವ ಸಾಧ್ಯತೆಯಿದ್ದು, ಇದು ಭವಿಷ್ಯಕ್ಕೆ ಹಾನಿಕಾರಕವಾಗಬಹುದು ಎಂದು ಎಚ್ಚರಿಸಿದರು.
ವಿದ್ಯಾರ್ಥಿ ಜೀವನದಲ್ಲಿ ನಡೆಯುವ ಸ್ಪರ್ಧೆಗಳು ಮತ್ತು ವಿವಿಧ ಚಟುವಟಿಕೆಗಳು ಭವಿಷ್ಯದಲ್ಲಿ ನಾಯಕತ್ವದ ಜವಾಬ್ದಾರಿಗಳನ್ನು ನಿರ್ವಹಿಸುವಾಗ ಅಗತ್ಯವಾದ ಅನುಭವ ಹಾಗೂ ಆತ್ಮವಿಶ್ವಾಸವನ್ನು ಬೆಳೆಸುತ್ತವೆ ಎಂದು ಅವರು ಹೇಳಿದರು.
ಕರ್ಯಕ್ರಮದಲ್ಲಿ ಆಳ್ವಾಸ್ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿ ಪ್ರವೇಶ ವಿಭಾಗದ ಮುಖ್ಯಸ್ಥ ಪದ್ಮರಾಜ್ ರೈ, ಇನಾಮು ವೇದಿಕೆಯ ಮುಖ್ಯ ಸಂಯೋಜಕ ಡಾ ಯೋಗೀಶ್ ಕೈರೋಡಿ, ಸಂಯೋಜಕರಾದ ಮನು ಡಿ.ಎಲ್. ಮತ್ತು ಚೈತ್ರ ರಾವ್, ವಿದ್ಯಾರ್ಥಿ ಸಂಯೋಜಕರಾದ ಶ್ರೇಯಸ್ ಎಸ್ ಶೆಟ್ಟಿ ಹಾಗೂ ಖ್ಯಾತಿ ಕಾಮತ್ ಉಪಸ್ಥಿತರಿದ್ದರು.
ಸಮೀಕ್ಷಾ ಸ್ವಾಗತಿಸಿ, ಅನ್ಫಲ್ ವಂದಿಸಿ, ಭೂಮಿಕಾ ಹಾಗೂ ಸಂಕೇತ ನಿಯಮಗಳನ್ನು ತಿಳಿಸಿ, ಅನೀಷಾ ಡಿಸೋಜಾ ನಿರೂಪಿಸಿದರು.















