ದೆಹಲಿ: ಕೇಂದ್ರ ಸರ್ಕಾರದ ವಿರುದ್ಧ ದೇಶವ್ಯಾಪಿ ತೀವ್ರಗೊಂಡ ಪ್ರತಿಭಟನೆ

ದೆಹಲಿ: ದೇಶಾದ್ಯಂತ ನಡೆಯುತ್ತಿರುವ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಯು ಮಧ್ಯಾಹ್ನವಾಗುತ್ತಿದ್ದಂತೆ ಹಿಂಸಾತ್ಮಕ ರೂಪ ಪಡೆದುಕೊಂಡಿದೆ.

ಮಹಾರಾಷ್ಟ್ರ, ದೆಹಲಿ, ಗುಜರಾಜ್, ಅಸ್ಸಾಂ, ಉತ್ತರ ಪ್ರದೇಶ , ಕರ್ನಾಟಕದಲ್ಲೂ ಪೌರತ್ವ ತಿದ್ದುಪಡಿ ಕಾಯ್ದೆ ಹಾಗೂ ರಾಷ್ಟ್ರೀಯ ನಾಗರಿಕ ನೋಂದಣಿ ವಿರುದ್ಧ ಆಕ್ರೋಶದ ಜ್ವಾಲೆ ಹೊತ್ತಿ ಉರಿದಿದೆ. ದೆಹಲಿಯಂತೂ ಪ್ರತಿಭಟನೆ ಕಾವಿಗೆ ಅಕ್ಷರಶಃ ತತ್ತರಿಸಿ ಹೋಗಿದೆ.

ಉತ್ತರ ಪ್ರದೇಶದ ನಾನಾ ಕಡೆಗಳಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಹೋರಾಟ ತೀವ್ರಗೊಂಡಿದ್ದು, ಪೊಲೀಸ್ ಠಾಣೆಗೆ ಬೆಂಕಿ, ರಾಜ್ಯ ಸಾರಿಗೆ ಸಂಸ್ಥೆಯ ಬಸ್ ಗೆ  ಬೆಂಕಿ, ನಡುರಸ್ತೆಯಲ್ಲೇ ಬಸ್ ಹೊತ್ತಿ ಉರಿದಿದೆ. ಇನ್ನು, ಸಾಂಭಾಲ್ ಜಿಲ್ಲೆಯಲ್ಲಿ ಇಂಟರ್ ನೆಟ್ ಸೇವೆಯನ್ನು ಮುಂದಿನ ಆದೇಶ ಹೊರಡಿಸುವವರೆಗೂ ಬಂದ್ ಮಾಡಲಾಗಿದೆ. ಇನ್ನೊಂದೆಡೆ ಹಸನಗಂಜ್ ಬಳಿ ಟಾಟಾ ಒಮಿನಿ ಸೇರಿದಂತೆ ಹಲವು ವಾಹನಗಳಿಗೆ ಗುಂಪು ಬೆಂಕಿ ಹಚ್ಚಿ, ಪುಂಡಾಟ ಮೆರೆದಿದ್ದು, ಪರಿಸ್ಥಿತಿ ಕೈತಪ್ಪಿ ಹೋಗುತ್ತಿದ್ದಂತೆ ಎಚ್ಚೆತ್ತ ಪೊಲೀಸರು ಪ್ರತಿಭಟನಾಕಾರರ ಮೇಲೆ ಲಾಠಿಪ್ರಹಾರ ನಡೆಸಿದ್ದಾರೆ.

ಪೌರತ್ವ ಕಾಯ್ದೆ  ರಾಜ್ಯ ರಾಜಧಾನಿ ಬೆಂಗಳೂರಿನಲ್ಲೂ ಪ್ರತಿಭಟನೆ ಕಾವು ಪಡೆದುಕೊಂಡಿದ್ದು, ನಗರ ಟೌನ್ ಹಾಲ್ ಹಾಗೂ ಮೈಸೂರು ಬ್ಯಾಂಕ್ ವೃತ್ತದಲ್ಲಿ ನೂರಾರು ಮಂದಿ ಪ್ರತಿಭಟನಾಕಾರರು ನೆರೆದಿದ್ದಾರೆ. ಕೇಂದ್ರ ಸರ್ಕಾರದ ವಿರುದ್ಧ ಧಿಕ್ಕಾರ ಕೂಗುತ್ತಾ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನೂರಕ್ಕೂ ಹೆಚ್ಚು ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.