ವಿಪತ್ತು ನಿರ್ವಹಣೆಗೆ ವಿದ್ಯಾರ್ಥಿಗಳಿಗೆ ತರಬೇತಿ: ಸಚೇತ್ ಸುವರ್ಣ

ಮೂಡುಬಿದಿರೆ: ಜೂನಿಯರ್ ರೆಡ್ ಕ್ರಾಸ್ ವಿದ್ಯಾರ್ಥಿಗಳಲ್ಲಿ ಸೇವಾ ಮನೋಭಾವ, ಸಾಮಾಜಿಕ ಕಾಳಜಿ ಹಾಗೂ ಮಾನವೀಯ ಮೌಲ್ಯಗಳನ್ನು ಬೆಳೆಸುವ ಪರಿಣಾಮಕಾರಿ ವೇದಿಕೆಯಾಗಿದೆ. ಬಾಲ್ಯದಲ್ಲೇ ನಿಸ್ವಾರ್ಥ ಸೇವೆ ಮತ್ತು ದೇಶಪ್ರೇಮದ ಗುಣಗಳನ್ನು ಬೆಳೆಸಲು ಇದು ಸಹಕಾರಿ ಎಂದು ದಕ್ಷಿಣ ಕನ್ನಡ ಜೂನಿಯರ್ ರೆಡ್ ಕ್ರಾಸ್ ಸಬ್ ಕಮಿಟಿಯ ನಿರ್ದೇಶಕ ಸಚೇತ್ ಸುವರ್ಣ ಹೇಳಿದರು.
ಆಳ್ವಾಸ್ ಪದವಿಪೂರ್ವ ಕಾಲೇಜಿನ ವತಿಯಿಂದ ಶಿವರಾಮ ಕಾರಂತ ವೇದಿಕೆಯಲ್ಲಿ ಆಯೋಜಿಸಿದ್ದ ಜೂನಿಯರ್ ರೆಡ್ ಕ್ರಾಸ್ ಘಟಕದ ಈ ವರ್ಷದ  ಶೈಕ್ಷಣಿಕ ಚಟುವಟಿಕೆಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನುದ್ದೇಶಿಸಿ ಅವರು ಮಾತನಾಡಿದರು. ರೆಡ್ ಕ್ರಾಸ್ ಸಂಸ್ಥೆಯ ಸ್ಥಾಪನೆಯ ಹಿನ್ನೆಲೆ, ಉದ್ದೇಶಗಳು ಹಾಗೂ ಮೂಲ ತತ್ವಗಳ ಕುರಿತು ವಿಡಿಯೋ ಪ್ರಾತ್ಯಕ್ಷಿಕೆಯ ಮೂಲಕ ಮಾಹಿತಿ ನೀಡಿದರು.  ತುರ್ತು ಸಂದರ್ಭಗಳಲ್ಲಿ ಪ್ರಥಮ ಚಿಕಿತ್ಸೆ ನೀಡುವುದು, ಬೆಂಕಿ ಅವಘಡ, ಪ್ರವಾಹ ಸೇರಿದಂತೆ ವಿವಿಧ ವಿಪತ್ತುಗಳನ್ನು ಎದುರಿಸುವುದು ಹಾಗೂ ಸಂಕಷ್ಟದಲ್ಲಿರುವವರಿಗೆ ನೆರವು ನೀಡುವ ಕುರಿತು ವಿದ್ಯಾರ್ಥಿಗಳಿಗೆ ತರಬೇತಿ ನೀಡಿದರು.
ಮಡಿಕೇರಿ, ಅಸ್ಸಾಂ ಹಾಗೂ ನೇಪಾಳದಲ್ಲಿ ಸಂಭವಿಸಿದ ಪ್ರಕೃತಿ ವಿಕೋಪಗಳ ಸಂದರ್ಭದಲ್ಲಿ ರೆಡ್ ಕ್ರಾಸ್ ಸ್ವಯಂಸೇವಕರು ನಿರ್ವಹಿಸಿದ ಪರಿಹಾರ ಕಾರ್ಯಗಳನ್ನು ಉದಾಹರಿಸಿದ ಅವರು, ವಿಪತ್ತಿನ ಸಂದರ್ಭದಲ್ಲಿ ತಕ್ಷಣ ಸ್ಪಂದಿಸುವ ತರಬೇತಿ ಪಡೆದ ಸ್ವಯಂಸೇವಕರ ಅಗತ್ಯವನ್ನು ವಿವರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ಆಳ್ವಾಸ್ ಪದವಿಪೂರ್ವ ಕಾಲೇಜಿನ ಉಪಪ್ರಾಂಶುಪಾಲೆ ಝಾನ್ಸಿ ಪಿ.ಎನ್. ಮಾತನಾಡಿ, ವಯನಾಡು ಹಾಗೂ ನೇಪಾಳದಲ್ಲಿ ಸಂಭವಿಸಿದ ಪ್ರಕೃತಿ ವಿಕೋಪಗಳಂತಹ ತುರ್ತು ಸಂದರ್ಭಗಳಲ್ಲಿ ಸ್ವಯಂಸೇವಾ ಸಂಘಟನೆಗಳು ವಹಿಸುವ ಪಾತ್ರ ಮಹತ್ವದ್ದಾಗಿದೆ ಎಂದರು. ಸರಿಯಾದ ಸಮಯದಲ್ಲಿ ಸರಿಯಾದ ರೀತಿಯಲ್ಲಿ ನೆರವು ನೀಡುವುದು ಜೀವ ರಕ್ಷಿಸುವಲ್ಲಿ ನಿರ್ಣಾಯಕವಾಗಿದ್ದು, ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಸೇವಾ ಮನೋಭಾವವನ್ನು ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಆಳ್ವಾಸ್ ಪದವಿಪೂರ್ವ ಕಾಲೇಜಿನ ವಾಣಿಜ್ಯ ವಿಭಾಗದ ಡೀನ್ ಪ್ರಶಾಂತ್ ಎಂ.ಡಿ. ಇದ್ದರು.  ಜೂನಿಯರ್ ರೆಡ್ ಕ್ರಾಸ್ ಘಟಕದ ಸಂಯೋಜಕಿ ಪೂರ್ಣಿಮಾ ಸ್ವಾಗತಿಸಿದರು. ರಿಯೋಲ ಕುಟಿನ್ನ ನಿರೂಪಿಸಿ,  ಸಪ್ತಮಿ ಕೋಟ್ಯಾನ್ ಉದ್ಘಾಟಕರನ್ನು ಪರಿಚಯಿಸಿ, ವೀಕ್ಷಾ ಕುಂದರ್ ವಂದಿಸಿದರು.