ಬೆಂಗಳೂರು: ಒಂದು ಸಣ್ಣ ಕ್ಲಿಕ್, ಅಪರಿಚಿತ ಕರೆ ಅಥವಾ ದುಪ್ಪಟ್ಟು ಲಾಭದ ಆಮಿಷ… ಇಷ್ಟೇ ಸಾಕು, ಕಷ್ಟಪಟ್ಟು ಸಂಪಾದಿಸಿದ ಹಣ ಕ್ಷಣಮಾತ್ರದಲ್ಲಿ ಬ್ಯಾಂಕ್ ಖಾತೆಯಿಂದ ಮಾಯವಾಗಲು. ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಸೈಬರ್ ವಂಚಕರ ಹಾವಳಿ ಮುಂದುವರಿದಿದ್ದು, 2026ರ ಜುಲೈ ಅಂತ್ಯದವರೆಗೆ ಕೇವಲ ಏಳು ತಿಂಗಳಲ್ಲಿ 4,712 ಸೈಬರ್ ವಂಚನೆ ಪ್ರಕರಣಗಳು ದಾಖಲಾಗಿವೆ. ಈ ಅವಧಿಯಲ್ಲಿ ಸಾರ್ವಜನಿಕರು ಬರೋಬ್ಬರಿ ₹558 ಕೋಟಿಗೂ ಅಧಿಕ ಹಣ ಕಳೆದುಕೊಂಡಿದ್ದಾರೆ.
ಗೃಹ ಇಲಾಖೆಯ ಅಧಿಕೃತ ಅಂಕಿಅಂಶಗಳ ಪ್ರಕಾರ, ನಗರದಲ್ಲಿ ಪ್ರತಿದಿನ ಸರಾಸರಿ 22 ಸೈಬರ್ ವಂಚನೆ ಪ್ರಕರಣಗಳು ದಾಖಲಾಗುತ್ತಿದ್ದು, ದಿನವೊಂದಕ್ಕೆ ಸುಮಾರು ₹2.63 ಕೋಟಿ ವಂಚನೆಯಾಗುತ್ತಿದೆ. ಇಂಜಿನಿಯರ್ಗಳು, ವೈದ್ಯರು, ಶಿಕ್ಷಕರು, ಬ್ಯಾಂಕ್ ಸಿಬ್ಬಂದಿ, ಹಿರಿಯ ನಾಗರಿಕರು ಹಾಗೂ ಗೃಹಿಣಿಯರು ಸೇರಿದಂತೆ ವಿವಿಧ ವರ್ಗದ ಜನರು ಸೈಬರ್ ವಂಚಕರಿಗೆ ಬಲಿಯಾಗುತ್ತಿದ್ದಾರೆ.
30ಕ್ಕೂ ಹೆಚ್ಚು ರೀತಿಯಲ್ಲಿ ವಂಚನೆ
ಸೈಬರ್ ಅಪರಾಧಿಗಳು 30ಕ್ಕೂ ಹೆಚ್ಚು ಬಗೆಯ ತಂತ್ರಗಳನ್ನು ಬಳಸಿಕೊಂಡು ಜನರನ್ನು ವಂಚಿಸುತ್ತಿದ್ದಾರೆ. ಈ ಪೈಕಿ ಷೇರು ಮಾರುಕಟ್ಟೆ ಹೂಡಿಕೆ ವಂಚನೆ ಅತಿ ಹೆಚ್ಚು ಪ್ರಕರಣಗಳನ್ನು ಹೊಂದಿದ್ದು, ಒಟ್ಟು 903 ಪ್ರಕರಣಗಳು ದಾಖಲಾಗಿವೆ.
ಇನ್ನು ಆನ್ಲೈನ್ ಹಣ ವರ್ಗಾವಣೆ ವಂಚನೆ 656, ಒಟಿಪಿ ವಂಚನೆ 392, ಪಾರ್ಟ್ಟೈಂ ಉದ್ಯೋಗ ಮತ್ತು ಆನ್ಲೈನ್ ರಿವ್ಯೂ ಹೆಸರಿನ ವಂಚನೆ 385 ಹಾಗೂ ಕ್ರೆಡಿಟ್ ಕಾರ್ಡ್ ವಂಚನೆಗೆ ಸಂಬಂಧಿಸಿದ 234 ಪ್ರಕರಣಗಳು ದಾಖಲಾಗಿವೆ.
ಆರಂಭದಲ್ಲಿ ಕಡಿಮೆ ಮೊತ್ತ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ನೀಡುವುದಾಗಿ ನಂಬಿಸುವ ವಂಚಕರು, ಸಂತ್ರಸ್ತರ ವಿಶ್ವಾಸ ಗಳಿಸಿದ ಬಳಿಕ ದೊಡ್ಡ ಮೊತ್ತದ ಹಣ ಹೂಡಿಕೆ ಮಾಡುವಂತೆ ಪ್ರೇರೇಪಿಸಿ ವಂಚಿಸುತ್ತಿದ್ದಾರೆ ಎನ್ನಲಾಗಿದೆ.
‘ಗೋಲ್ಡನ್ ಅವರ್’ನಲ್ಲಿ ಪೊಲೀಸರ ಕಾರ್ಯಾಚರಣೆ
ಸೈಬರ್ ವಂಚನೆಗೊಳಗಾದ ತಕ್ಷಣ ಪೊಲೀಸರಿಗೆ ದೂರು ನೀಡುವುದು ಅತ್ಯಂತ ನಿರ್ಣಾಯಕವಾಗಿದೆ. ಸಂತ್ರಸ್ತರು ತಕ್ಷಣವೇ ಪೊಲೀಸರನ್ನು ಸಂಪರ್ಕಿಸಿದ ಹಿನ್ನೆಲೆಯಲ್ಲಿ ಬೆಂಗಳೂರು ಸೈಬರ್ ಕ್ರೈಂ ಪೊಲೀಸರು ಬ್ಯಾಂಕ್ಗಳೊಂದಿಗೆ ಸಮನ್ವಯ ಸಾಧಿಸಿ, ವಂಚಕರ ಖಾತೆಗಳಲ್ಲಿದ್ದ ₹191 ಕೋಟಿ ಹಣವನ್ನು ಫ್ರೀಜ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಕಾನೂನು ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಈ ಹಣವನ್ನು ಸಂತ್ರಸ್ತರಿಗೆ ಹಿಂತಿರುಗಿಸಲಾಗುತ್ತಿದೆ. ಕಳೆದ ಏಳು ತಿಂಗಳಲ್ಲಿ ವಂಚನೆಯಾದ ಒಟ್ಟು ಮೊತ್ತದಲ್ಲಿ ಸುಮಾರು ಶೇ.34ರಷ್ಟು ಹಣವನ್ನು ರಿಕವರ್ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಮೊದಲ 1-2 ಗಂಟೆ ಬಹಳ ಮುಖ್ಯ
ಸೈಬರ್ ವಂಚನೆ ನಡೆದ ಬಳಿಕದ ಮೊದಲ 1ರಿಂದ 2 ಗಂಟೆಗಳು ಅತ್ಯಂತ ಮಹತ್ವದ್ದಾಗಿದ್ದು, ಇದನ್ನೇ ‘ಗೋಲ್ಡನ್ ಅವರ್’ ಎಂದು ಕರೆಯಲಾಗುತ್ತದೆ. ಈ ಅವಧಿಯಲ್ಲಿ ಕೇಂದ್ರ ಸರ್ಕಾರದ ರಾಷ್ಟ್ರೀಯ ಸೈಬರ್ ಕ್ರೈಂ ಸಹಾಯವಾಣಿ 1930ಕ್ಕೆ ಕರೆ ಮಾಡಿ ದೂರು ದಾಖಲಿಸುವಂತೆ ಪೊಲೀಸರು ಸೂಚಿಸಿದ್ದಾರೆ.
ಅಪರಿಚಿತ ವ್ಯಕ್ತಿಗಳಿಂದ ಬರುವ ಕರೆ, ಸಂದೇಶ ಹಾಗೂ ಲಿಂಕ್ಗಳನ್ನು ಪರಿಶೀಲಿಸದೆ ನಂಬಬಾರದು. ಸಾಮಾಜಿಕ ಜಾಲತಾಣಗಳಲ್ಲಿ ಕಾಣಿಸಿಕೊಳ್ಳುವ ಅತಿಯಾದ ಲಾಭದ ಆಮಿಷದ ಜಾಹೀರಾತುಗಳಿಗೆ ಮರುಳಾಗಬೇಡಿ ಹಾಗೂ ಅಪರಿಚಿತ ಲಿಂಕ್ಗಳನ್ನು ಕ್ಲಿಕ್ ಮಾಡಬೇಡಿ ಎಂದು ಪೊಲೀಸರು ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದಾರೆ.















