ಮೂರನೇ ದಿನಕ್ಕೆ ₹200 ಕೋಟಿ ಬಾಚಿದ ‘ಟಾಕ್ಸಿಕ್’ ಕನ್ನಡಕ್ಕಿಂತ ಹಿಂದಿಯಲ್ಲಿಯೇ ಜಾಸ್ತಿ ಗಳಿಕೆ!

ಬೆಂಗಳೂರು: ರಾಕಿಂಗ್‌ ಸ್ಟಾರ್ ಯಶ್‌ ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್’ ಚಿತ್ರದ ಬಾಕ್ಸ್‌ ಆಫೀಸ್‌ ಕಲೆಕ್ಷನ್ ಮೂರನೇ ದಿನಕ್ಕೆ ಭಾರತದಲ್ಲಿ ₹200 ಕೋಟಿಯ ಸಮೀಪ ತಲುಪಿದೆ. ಗೀತು ಮೋಹನ್‌ದಾಸ್ ನಿರ್ದೇಶನದ ಈ ಚಿತ್ರ ಮೂರನೇ ದಿನ ದೇಶಾದ್ಯಂತ 19,390 ಪ್ರದರ್ಶನಗಳಿಂದ ₹27.20 ಕೋಟಿ ಗಳಿಕೆ ಕಂಡಿದೆ.

ಶುಕ್ರವಾರ ಚಿತ್ರದ ಒಟ್ಟಾರೆ ಆಕ್ಯುಪೆನ್ಸಿ ಶೇ.25.5ರಷ್ಟಿತ್ತು. ಭಾಷಾವಾರು ಗಳಿಕೆಯಲ್ಲಿ ಹಿಂದಿ ಆವೃತ್ತಿ ಅಗ್ರಸ್ಥಾನದಲ್ಲಿದ್ದು, ₹19.15 ಕೋಟಿ ಗಳಿಸಿದೆ. ಕನ್ನಡ ಆವೃತ್ತಿ ₹5 ಕೋಟಿ, ತೆಲುಗು ₹1.50 ಕೋಟಿ, ತಮಿಳು ₹0.75 ಕೋಟಿ ಹಾಗೂ ಮಲಯಾಳಂ ಆವೃತ್ತಿ ₹0.20 ಕೋಟಿ ಗಳಿಸಿದೆ.

ವಿದೇಶಿ ಮಾರುಕಟ್ಟೆಯಲ್ಲೂ ಚಿತ್ರ ಉತ್ತಮ ಪ್ರದರ್ಶನ ಮುಂದುವರಿಸಿದ್ದು, ಮೂರನೇ ದಿನ ₹3.50 ಕೋಟಿ ಕಲೆಕ್ಷನ್ ಮಾಡಿದೆ. ಇದರೊಂದಿಗೆ ವಿದೇಶದಲ್ಲಿ ಚಿತ್ರದ ಒಟ್ಟು ಗಳಿಕೆ ₹23.25 ಕೋಟಿಗೆ ತಲುಪಿದೆ. ವಿಶ್ವಾದ್ಯಂತ ‘ಟಾಕ್ಸಿಕ್’ ಇದುವರೆಗೆ ₹221.35 ಕೋಟಿ ಗಳಿಸಿದೆ ಎನ್ನಲಾಗಿದೆ.

ದಿನದಿಂದ ದಿನಕ್ಕೆ ಕುಸಿದ ಗಳಿಕೆ

‘ಟಾಕ್ಸಿಕ್’ಗೆ ಭರ್ಜರಿ ಓಪನಿಂಗ್ ಸಿಕ್ಕಿದ್ದರೂ ಮೂರನೇ ದಿನದ ವೇಳೆಗೆ ಕಲೆಕ್ಷನ್‌ನಲ್ಲಿ ಗಮನಾರ್ಹ ಇಳಿಕೆ ಕಂಡುಬಂದಿದೆ. ಮೊದಲ ದಿನ ಚಿತ್ರ ₹101.10 ಕೋಟಿ ಗಳಿಕೆ ಮಾಡಿತ್ತು. ಎರಡನೇ ದಿನ ಈ ಮೊತ್ತ ₹37.65 ಕೋಟಿಗೆ ಇಳಿದರೆ, ಮೂರನೇ ದಿನ ₹27.20 ಕೋಟಿಗೆ ಕುಸಿದಿದೆ.

‘ಕೆಜಿಎಫ್ 2’ಗಿಂತ ₹122 ಕೋಟಿ ಹಿನ್ನಡೆ

ಯಶ್‌ ಅವರ ಹಿಂದಿನ ಬ್ಲಾಕ್‌ಬಸ್ಟರ್‌ ‘ಕೆಜಿಎಫ್: ಅಧ್ಯಾಯ 2’ ಮೂರು ದಿನಗಳಲ್ಲೇ ಭರ್ಜರಿ ಕಲೆಕ್ಷನ್ ಮಾಡಿತ್ತು. ಮೊದಲ ದಿನ ₹116 ಕೋಟಿ, ಎರಡನೇ ದಿನ ₹90.50 ಕೋಟಿ ಹಾಗೂ ಮೂರನೇ ದಿನ ₹82 ಕೋಟಿ ಗಳಿಸಿತ್ತು. ಇದರೊಂದಿಗೆ ಮೂರು ದಿನಗಳಲ್ಲಿ ಭಾರತದ ನಿವ್ವಳ ಗಳಿಕೆ ₹288.50 ಕೋಟಿ ತಲುಪಿತ್ತು.

ಇದಕ್ಕೆ ಹೋಲಿಸಿದರೆ, ಮೂರು ದಿನಗಳ ಬಳಿಕ ‘ಟಾಕ್ಸಿಕ್’ ಸುಮಾರು ₹122.55 ಕೋಟಿ ಹಿನ್ನಡೆಯಲ್ಲಿದೆ ಎನ್ನಲಾಗಿದೆ. ಆದಾಗ್ಯೂ, ಮುಂದಿನ ದಿನಗಳಲ್ಲಿ ಚಿತ್ರದ ಕಲೆಕ್ಷನ್ ಯಾವ ರೀತಿಯಲ್ಲಿ ಸಾಗಲಿದೆ ಎಂಬುದರ ಮೇಲೆ ಅಂತಿಮ ಬಾಕ್ಸ್‌ ಆಫೀಸ್‌ ಫಲಿತಾಂಶ ನಿರ್ಧಾರವಾಗಲಿದೆ.