ಕಾರ್ಕಳ: ಇಲ್ಲಿನ ಕೋರ್ಟ್ ರಸ್ತೆಯಲ್ಲಿರುವ ಕಾರ್ಕಳ ರೋಟರಿ ಬಾಲಭವನದಲ್ಲಿ ಏನೇ ಕಾರ್ಯಕ್ರಮಗಳಾದರೂ ಕಾರ್ಯಕ್ರಮಕ್ಕೆ ಬರುವವರು ಮುಖ್ಯ ರಸ್ತೆಯಲ್ಲಿಯೇ ಅಡ್ಡಾದಿಟ್ಟಿ ಪಾರ್ಕಿಂಗ್ ಮಾಡುತ್ತಿರುವ ಪರಿಣಾಮ ಸಾರ್ವಜನಿಕರಿಗೆ, ಸ್ಥಳೀಯರಿಗೆ ಇದೀಗ ಭಾರೀ ಸಮಸ್ಯೆಯಾಗುತ್ತಿದೆ. ಮುಖ್ಯವಾಗಿ ರಾತ್ರಿ ಸಮಯದಲ್ಲಿ ಸಭಾಭವನದಲ್ಲಿ ಯಾವುದೇ ಸಣ್ಣ ಪುಟ್ಟ ಕಾರ್ಯಕ್ರಮಗಳಾದರೂ ಯಾವುದೇ ನಾಗರಿಕ ಪ್ರಜ್ಞೆಯಿಲ್ಲದವಂತೆ, ಎಳ್ಳಷ್ಟೂ ಜವಾಬ್ದಾರಿ ಇಲ್ಲದವರಂತೆ ಸುಶಿಕ್ಷಿತರೇ ರಸ್ತೆಯಲ್ಲಿ ಕಾರುಗಳನ್ನು ನಿಲ್ಲಿಸುತ್ತಿರುವುದು ನಾಗರಿಕರ ಆಕ್ರೋಶಕ್ಕೆ ಕಾರಣವಾಗಿದೆ. ರಸ್ತೆಯ ಎರಡೂ ಬದಿಗಳಲ್ಲಿ ಮಾತ್ರವಲ್ಲದೇ ಇಲ್ಲಿನ ಜಂಕ್ಷನ್ ನ ನಡುವಿನಲ್ಲಿಯೂ ವಾಹನಗಳನ್ನು ಬೇಕಾಬಿಟ್ಟಿ ನಿಲ್ಲಿಸುತ್ತಿದ್ದಾರೆ. ಇದರ ಪರಿಣಾಮ, ಇರುವ ಸ್ವಲ್ಪ ಜಾಗದಲ್ಲಿಯೇ ಸಾರ್ವಜನಿಕರು ಕಷ್ಟಪಟ್ಟು ಹೋಗಬೇಕಾದ ಸ್ಥಿತಿ. ಕತ್ತಲಲ್ಲಿ ಯಾರು ಎಡವಿಬಿದ್ದರೂ ಇಲ್ಲಿ ಕೇಳುವವರಿಲ್ಲ. ಬೇರೆಯವರಿಗೆ ಶಿಸ್ತು ಭೋಧಿಸುವ ಇಂತಹ ಸಂಘ ಸಂಸ್ಥೆಗಳಿಗೆ ಕಾರುಗಳನ್ನು ರಸ್ತೆಯಲ್ಲಿ ನಿಲುಗಡೆ ಮಾಡಿ ಸಾರ್ವಜನಿಕರಿಗೆ ತೊಂದರೆ ಕೊಡಬಾರದು ಎನ್ನುವ ಕನಿಷ್ಠ ಪ್ರಜ್ಞೆಯೇ ಇಲ್ಲದಿರುವುದು ದೊಡ್ಡ ದುರಂತ.

ಕತ್ತಲಲ್ಲಿ ಅಪಘಾತ, ಹೊಣೆ ಯಾರು?
ಹೀಗೆ ಬೇಕಾಬಿಟ್ಟಿ ಕಾರುಗಳನ್ನು ರಸ್ತೆಯಲ್ಲಿ ನಿಲ್ಲಿಸಿದ ಪರಿಣಾಮ, ಕತ್ತಲಲ್ಲಿ ರಸ್ತೆಯ ನಡುವೆ ನಿಲ್ಲಿಸಿದ ಕಾರುಗಳನ್ನು ಕಾಣದೇ ಭುವನೇಂದ್ರ ಕಾಲೇಜು ಸಮೀಪದ ಹಿರಿಯ ನಾಗರಿಕರೊಬ್ಬರು ಡಿಕ್ಕಿ ಹೊಡೆದು ಗಾಯಗೊಂಡಿದ್ದಾರೆ. “ಇಲ್ಲಿ ನಿಲ್ಲಿಸಿದ ಕಾರುಗಳೆಲ್ಲವೂ ರೋಟರಿ ಕ್ಲಬ್ ನ ಸದಸ್ಯರದ್ದು ಮತ್ತು ಗಣ್ಯರದ್ದು. ಕನಿಷ್ಠ ನಾಗರಿಕ ಪ್ರಜ್ಞೆ ಇಲ್ಲದವರಂತೆ ರಸ್ತೆ ನಡುವೆ ಕಾರು ನಿಲ್ಲಿಸಿದರೂ ಸಾರ್ವಜನಿಕರು ಇವರಿಗೆ ಹೆದರಿ ಸುಮ್ಮನಿರಬೇಕಾದ ಸ್ಥಿತಿ. ನಮ್ಮ ಬಡಜನರ ಗೋಳನ್ನು ಕೇಳುವವರಿಲ್ಲ” ಎಂದು ಗಾಯಗೊಂಡ ಹಿರಿಯ ನಾಗರಿಕರು ಹೇಳುತ್ತಾರೆ.

ರಸ್ತೆ ದಾಟಲು ಬರುವ ದೊಡ್ಡ ದೊಡ್ಡ ಸಾರ್ವಜನಿಕ ವಾಹನಗಳಿಗೆ ಮುಂದಕ್ಕೆ ಹೋಗಲು ಚೂರು ಜಾಗ ಸಾಲದಷ್ಟು ಅಶಿಸ್ತಿನಿಂದ ಇಲ್ಲಿ ಕಾರು ಪಾರ್ಕಿಗ್ ಮಾಡಲಾಗುತ್ತದೆ. ಸಣ್ಣ ಪುಟ್ಟ ಕಾರಣಗಳಿಗೆ ಸಾರ್ವಜನಿಕರಿಂದ ದಂಡ ವಸೂಲಿ ಮಾಡುವ ಪೊಲೀಸ್ ಇಲಾಖೆ ಏನೂ ಕ್ರಮ ಕೈಗೊಳ್ಳದೇ ಇರುವುದು ದುರಂತ. ಈ ರಸ್ತೆಯಾಗಿ ದುರ್ಗಾ, ಭುವನೇಂದ್ರ ಕಾಲೇಜು, ಮೀಯ್ಯಾರು, ಸ್ವರಾಜ್ಯ ಮೈದಾನ, ರಾಮಸಮುದ್ರ, ಸೇರಿದಂತೆ ಹಲವಾರು ಸ್ಥಳಗಳಿಗೆ ದಿನನಿತ್ಯ ನೂರಾರು ಜನರು ಸಂಚರಿಸುತ್ತಾರೆ. ಇನ್ನಾದರೂ ಪೊಲೀಸ್ ಇಲಾಖೆ ಈ ಕುರಿತು ಗಮನಹರಿಸಿ ಸಭಾಭವನದರ ಮೇಲೆ ಕ್ರಮ ಜರುಗಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.















