ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್’ ಸಿನಿಮಾ ವಿಶ್ವಾದ್ಯಂತ ಭರ್ಜರಿ ಆರಂಭ ಕಂಡಿದೆ. ಬಿಡುಗಡೆಯಾದ ಮೊದಲ ದಿನವೇ ಚಿತ್ರ ₹140 ಕೋಟಿಗೂ ಅಧಿಕ ಗಳಿಕೆ ಕಂಡಿದೆ ಎಂದು ಅಂದಾಜಿಸಲಾಗಿದೆ.
ಭಾರತದಲ್ಲಿ ‘ಟಾಕ್ಸಿಕ್’ ಸುಮಾರು ₹120.75 ಕೋಟಿ ಹಾಗೂ ವಿದೇಶಿ ಮಾರುಕಟ್ಟೆಯಲ್ಲಿ ₹20 ಕೋಟಿ ಗಳಿಸಿದೆ ಎನ್ನಲಾಗಿದೆ. ಯಾವುದೇ ಪ್ರೀಮಿಯರ್ ಅಥವಾ ಸೆಲೆಬ್ರಿಟಿ ಶೋಗಳಿಲ್ಲದೆ ನೇರವಾಗಿ ಆರು ಭಾಷೆಗಳಲ್ಲಿ ತೆರೆಕಂಡ ಚಿತ್ರಕ್ಕೆ ಬಹುತೇಕ ಕಡೆ ಫ್ಯಾನ್ ಶೋಗಳು ಹೌಸ್‌ಫುಲ್ ಆಗಿವೆ.
ಈ ಮೂಲಕ 2026ರಲ್ಲಿ ಮೊದಲ ದಿನವೇ ₹100 ಕೋಟಿ ಕ್ಲಬ್ ಸೇರಿದ ಎರಡನೇ ಭಾರತೀಯ ಸಿನಿಮಾ ಎಂಬ ಹೆಗ್ಗಳಿಕೆಗೆ ‘ಟಾಕ್ಸಿಕ್’ ಪಾತ್ರವಾಗಿದೆ. ಮೊದಲ ದಿನ ₹146 ಕೋಟಿ ಗಳಿಸಿದ್ದ ‘ಧುರಂಧರ್ 2’ ಮೊದಲ ಸ್ಥಾನದಲ್ಲಿದ್ದರೆ, ‘ಟಾಕ್ಸಿಕ್’ ಎರಡನೇ ಸ್ಥಾನದಲ್ಲಿದೆ.
ಬೆಂಗಳೂರು ನಗರವೊಂದರಲ್ಲೇ 34 ಪ್ರಮುಖ ಕೇಂದ್ರಗಳಲ್ಲಿ ಚಿತ್ರಕ್ಕೆ ಹೌಸ್‌ಫುಲ್ ಓಪನಿಂಗ್ ಸಿಕ್ಕಿದೆ. ಮಲ್ಟಿಪ್ಲೆಕ್ಸ್‌ಗಳಲ್ಲೂ ಶೇ.55ಕ್ಕೂ ಅಧಿಕ ಪ್ರೇಕ್ಷಕರ ಹಾಜರಾತಿ ದಾಖಲಾಗಿದೆ ಎಂದು ವರದಿಯಾಗಿದೆ.
ಕನ್ನಡ ಚಿತ್ರರಂಗದಲ್ಲಿ ಈ ಹಿಂದೆ ಯಶ್ ಅಭಿನಯದ ‘ಕೆಜಿಎಫ್ 2’ ಇದೇ ರೀತಿಯ ಬಿಗ್ ಓಪನಿಂಗ್ ದಾಖಲಿಸಿತ್ತು. ಇದೀಗ ನಾಲ್ಕು ವರ್ಷಗಳ ಬಳಿಕ ಬೆಳ್ಳಿಪರದೆಗೆ ಮರಳಿರುವ ಯಶ್, ಮತ್ತೊಮ್ಮೆ ಭರ್ಜರಿ ಆರಂಭದ ಮೂಲಕ ಅಭಿಮಾನಿಗಳಲ್ಲಿ ಸಂಭ್ರಮ ಮೂಡಿಸಿದ್ದಾರೆ.















