ಉಡುಪಿ: ಡೇವಿಡ್ ಡಿಸೋಜ ಹತ್ಯೆ – ಕೋಟ್ಯಂತರ ರೂ. ಗುತ್ತಿಗೆ ವಿವಾದ, ಭೂಗತ ನಂಟು

ಉಡುಪಿ: ಮುದರಂಗಡಿ ಗ್ರಾ.ಪಂ. ಮಾಜಿ ಅಧ್ಯಕ್ಷ ಹಾಗೂ ಗುತ್ತಿಗೆದಾರ ಡೇವಿಡ್ ಡಿಸೋಜ ಹತ್ಯೆ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದ್ದು, ಕೋಟ್ಯಂತರ ರೂಪಾಯಿ ಮೌಲ್ಯದ ಯುಪಿಸಿಎಲ್‌ ಗುತ್ತಿಗೆ ಕಾಮಗಾರಿಯ ವಿವಾದವೇ ಹತ್ಯೆಗೆ ಪ್ರಮುಖ ಕಾರಣ ಎನ್ನುವುದು ತನಿಖೆಯಿಂದ ತಿಳಿದುಬಂದಿದೆ ಎಂದು ಜಿಲ್ಲಾ ಪೊಲೀಸ್‌ ಅಧೀಕ್ಷಕ ಹರಿರಾಂ ಶಂಕರ್‌ ತಿಳಿಸಿದ್ದಾರೆ.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಕರಣದ ಪ್ರಮುಖ ಆರೋಪಿ ಕಿಶೋರ್ ರಾಮ್ ಪೂಜಾರಿ ಯುಪಿಸಿಎಲ್‌ ವ್ಯಾಪ್ತಿಯ ಪೈಪ್‌ಲೈನ್‌ ಮತ್ತು ಕಾಂಕ್ರೀಟ್‌ ರಸ್ತೆ ಕಾಮಗಾರಿ ಪಡೆಯಲು ಬಯಸಿದ್ದ. ಆದರೆ ಗುತ್ತಿಗೆ ಡೇವಿಡ್ ಡಿಸೋಜ ಅವರಿಗೆ ದೊರೆತಿದ್ದರಿಂದ ದ್ವೇಷ ಬೆಳೆದು, ಹತ್ಯೆಗೆ ಸಂಚು ರೂಪಿಸಿದ್ದಾನೆ. ತನ್ನ ಸಹೋದರ ಹೇಮಂತ್ ಪೂಜಾರಿ ಮೂಲಕ ಸುಪಾರಿ ಹಂತಕರನ್ನು ಸಂಪರ್ಕಿಸಿದ್ದಾನೆ ಎಂದು ಹೇಳಿದರು.
ಡೇವಿಡ್ ಅವರಿಗೆ ಬೆದರಿಕೆ ಹಾಕಲು ಹೇಮಂತ್ ಪೂಜಾರಿ ಹೆಸರಿನಲ್ಲಿ ಇಂಟರ್‌ನೆಟ್‌ ಕರೆಗಳನ್ನು ಮಾಡಲಾಗಿತ್ತು. ಕಳೆದ 25 ವರ್ಷಗಳಿಂದ ತಲೆಮರೆಸಿಕೊಂಡಿರುವ ಹೇಮಂತ್ ಪೂಜಾರಿ ಪತ್ತೆಗೆ ಕಾರ್ಯಾಚರಣೆ ಮುಂದುವರಿದಿದೆ ಎಂದರು.
ಹತ್ಯೆ ಪ್ರಕರಣದಲ್ಲಿ ಬಂಧಿಸಲಾದ ಮುಂಬೈ ಮೂಲದ ಗ್ಯಾಂಗ್‌ಸ್ಟಾರ್‌ ಅನುಜ್ ಪಾಟೇಲ್‌ನನ್ನು ಉಡುಪಿಗೆ ಕರೆತರುತ್ತಿದ್ದ ವೇಳೆ ಹೆಬ್ರಿ ವ್ಯಾಪ್ತಿಯಲ್ಲಿ ಪೊಲೀಸರ ಮೇಲೆ ಹಲ್ಲೆ ನಡೆಸಿ, ಪಿಎಸ್‌ಐನ ಆಯುಧ ಕಸಿದು ಗುಂಡು ಹಾರಿಸಲು ಯತ್ನಿಸಿದ್ದಾನೆ. ಈ ವೇಳೆ ಆತ್ಮರಕ್ಷಣೆಗಾಗಿ ಪೊಲೀಸರು ಆತನ ಕಾಲಿಗೆ ಗುಂಡು ಹಾರಿಸಿದ್ದಾರೆ. ಗಾಯಗೊಂಡ ಆತನನ್ನು ಅಜ್ಜರಕಾಡು ಆಸ್ಪತ್ರೆಗೆ ದಾಖಲಿಸಲಾಗಿದೆ.
ಡೇವಿಡ್ ಹತ್ಯೆಗೆ ಉತ್ತರ ಪ್ರದೇಶದ ರಾಜು, ಮಹಾರಾಷ್ಟ್ರದ ಅನ್ಮೋಲ್ ರಸ್ತೋಗಿ ಹಾಗೂ ಬಿಹಾರದ ಜಿಯಾವುಲ್ ಅಲಿಯಾಸ್ ದೀಪಕ್‌ ಸೇರಿದಂತೆ ಮೂವರು ಶೂಟರ್‌ಗಳಿಗೆ ₹10 ಲಕ್ಷ ಸುಪಾರಿ ನೀಡಲಾಗಿತ್ತು. ಪ್ರಕರಣದಲ್ಲಿ ಹಣಕಾಸು ವಹಿವಾಟು ಹಾಗೂ ಇತರ ಆರೋಪಿಗಳ ಸಂಪರ್ಕದ ಕುರಿತು ತನಿಖೆ ಮುಂದುವರಿದಿದೆ.
ಹಂತಕರು ಬಳಸಿದ್ದ ಎರಡು ಬೈಕ್‌ಗಳಿಗೆ ನಕಲಿ ನಂಬರ್‌ ಪ್ಲೇಟ್‌ ಅಳವಡಿಸಿ, ಎಂಜಿನ್‌ ನಂಬರ್‌ ಕೂಡ ಬದಲಾಯಿಸಲಾಗಿತ್ತು. ಬೈಂದೂರಿನ ಲೋಕೇಶ್ ತೇಜು ಕೊಠಾರಿ ಬೈಕ್‌ಗಳನ್ನು ಒದಗಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.