ಉಡುಪಿ ಜಿಲ್ಲೆಯಲ್ಲಿ 97,706 ಮತದಾರರ ವಿವರಗಳಲ್ಲಿ ವ್ಯತ್ಯಾಸ: ನೋಟಿಸ್‌ಗೆ ಸಿದ್ಧತೆ- ಡಿಸಿ ಸ್ವರೂಪ ಟಿ.ಕೆ.

ಉಡುಪಿ: ಎನ್ಯುಮರೇಷನ್‌ ಹಂತದಲ್ಲಿ ಹಿಂದಿನ ಮತದಾರರ ಪಟ್ಟಿಯೊಂದಿಗೆ ಲಿಂಕ್ ಆಗದಿರುವ 31,903 ಪ್ರಕರಣಗಳು ಹಾಗೂ ಲಿಂಕೇಜ್‌ ಪೂರ್ಣಗೊಂಡ ಬಳಿಕದ ಪರಿಶೀಲನೆಯಲ್ಲಿ 65,803 ‘ಲಾಜಿಕಲ್‌ ಡಿಸ್ಕ್ರೆಪೆನ್ಸಿ (discrepancy) /ಅನಾಮಲಿಸ್‌ (anomalies) ಪ್ರಕರಣಗಳು ಜಿಲ್ಲೆಯಲ್ಲಿ ಪತ್ತೆಯಾಗಿವೆ ಎಂದು ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ತಿಳಿಸಿದ್ದಾರೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಹಿಂದಿನ ಮತದಾರರ ಪಟ್ಟಿಯೊಂದಿಗೆ ವಿವರಗಳು ಲಿಂಕ್ ಆಗದಿರುವ ಪ್ರಕರಣಗಳು ಹಾಗೂ ಲಿಂಕೇಜ್‌ ಬಳಿಕದ ಪರಿಶೀಲನೆಯಲ್ಲಿ ತಾರ್ಕಿಕ ವ್ಯತ್ಯಾಸ ಅಥವಾ ಇತರ ಅಸಂಗತತೆ ಕಂಡುಬಂದ ಪ್ರಕರಣಗಳನ್ನು ಗುರುತಿಸಿ, ಸಂಬಂಧಪಟ್ಟ ಚುನಾವಣಾ ನೋಂದಣಾಧಿಕಾರಿ (ERO) ನಿಯಮಾನುಸಾರ ನೋಟಿಸ್‌ ಜಾರಿಗೊಳಿಸಲಿದ್ದಾರೆ.
ಅಗತ್ಯವಿರುವ ಸಂದರ್ಭಗಳಲ್ಲಿ ERO ಸ್ವಯಂಪ್ರೇರಿತವಾಗಿಯೂ (ಸುಮೋಟೊ) ನೋಟಿಸ್‌ ಜಾರಿಗೊಳಿಸಲಿದ್ದು, ಸಂಬಂಧಪಟ್ಟ ಮತದಾರರಿಗೆ ತಮ್ಮ ಹಕ್ಕನ್ನು ಪ್ರತಿಪಾದಿಸಲು ಹಾಗೂ ಅಗತ್ಯ ದಾಖಲೆಗಳನ್ನು ಸಲ್ಲಿಸಲು ಅವಕಾಶ ಕಲ್ಪಿಸಲಾಗುತ್ತದೆ.
ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳಲ್ಲಿ 97,706 ಪ್ರಕರಣಗಳು ಗುರುತಿಸಲಾಗಿವೆ. 118–ಬೈಂದೂರು ಕ್ಷೇತ್ರದಲ್ಲಿ 3,891 ಲಿಂಕೇಜ್‌ ಆಗದ ಪ್ರಕರಣಗಳು ಹಾಗೂ 11,275 ಲಾಜಿಕಲ್‌ ಡಿಸ್ಕ್ರೆಪೆನ್ಸಿ/ಅನಾಮಲಿಸ್‌ ಪ್ರಕರಣಗಳಿದ್ದು, ಒಟ್ಟು 15,166 ಪ್ರಕರಣಗಳಿವೆ. 119–ಕುಂದಾಪುರದಲ್ಲಿ ಕ್ರಮವಾಗಿ 4,233 ಮತ್ತು 6,945 (ಒಟ್ಟು 11,178), 120–ಉಡುಪಿಯಲ್ಲಿ 13,255 ಮತ್ತು 23,499 (36,754), 121–ಕಾಪುವಿನಲ್ಲಿ 5,971 ಮತ್ತು 14,850 (20,821), 122–ಕಾರ್ಕಳದಲ್ಲಿ 4,553 ಮತ್ತು 9,234 (13,787) ಪ್ರಕರಣಗಳಿವೆ ಎಂದರು.
ಮತದಾರರಿಗೆ ಅನುಕೂಲವಾಗುವಂತೆ ಇಂತಹ ಪ್ರಕರಣಗಳ ವಿಚಾರಣೆ ನಡೆಸಲು ಹೆಚ್ಚುವರಿ ಸಹಾಯಕ ಚುನಾವಣಾ ನೋಂದಣಾಧಿಕಾರಿಗಳು (AERO) ಹಾಗೂ ಹೆಚ್ಚುವರಿ AEROಗಳನ್ನು ನೇಮಿಸಲಾಗಿದೆ. ನೋಟಿಸ್‌ಗೆ ಸಂಬಂಧಿಸಿದ ವಿಚಾರಣೆಯನ್ನು ಮತದಾರರಿಗೆ ಅನುಕೂಲವಾಗುವಂತೆ ಸಂಬಂಧಪಟ್ಟ ಗ್ರಾಮ ಪಂಚಾಯಿತಿ ಅಥವಾ ನಗರ ಪ್ರದೇಶದ ವಾರ್ಡ್‌ ವ್ಯಾಪ್ತಿಯಲ್ಲಿಯೇ ನಡೆಸಲು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.