ಉಡುಪಿ: ಕ್ಷುಲ್ಲಕ ಕಾರಣಕ್ಕೆ ಜಗಳವಾಡಿದ ಮಗನೊಬ್ಬ ತಂದೆ–ತಾಯಿಯನ್ನು ಸುತ್ತಿಗೆಯಿಂದ ಹೊಡೆದು ಹತ್ಯೆ ಮಾಡಿದ ಘಟನೆ ಬ್ರಹ್ಮಾವರದ ಗಾಂಧಿನಗರದಲ್ಲಿ ಭಾನುವಾರ ರಾತ್ರಿ ನಡೆದಿದೆ.
ಗಾಂಧಿನಗರ ನಿವಾಸಿಗಳಾದ ಮೆಹಬೂಬ್ ಅಲಿ ಹಾಗೂ ಅವರ ಪತ್ನಿ ಶಂಶಾದ್ ಬೇಗಂ ಹತ್ಯೆಗೀಡಾದವರು. ಅವರ ಪುತ್ರ ಶಾಹಿದ್ ಅಲಿ (31) ಕೊಲೆ ಆರೋಪಿಯಾಗಿದ್ದು, ಬ್ರಹ್ಮಾವರ ಪೊಲೀಸರು ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಮೆಹಬೂಬ್ ಅಲಿ ಲಾರಿ ಚಾಲಕರಾಗಿ ಕೆಲಸ ಮಾಡುತ್ತಿದ್ದರು. ಶಾಹಿದ್ ಅಲಿ ಫುಡ್ ಡೆಲಿವರಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ. ಭಾನುವಾರ ರಾತ್ರಿ ಕ್ಷುಲ್ಲಕ ವಿಚಾರಕ್ಕೆ ತಂದೆ–ತಾಯಿಯೊಂದಿಗೆ ಜಗಳವಾಡಿದ ಶಾಹಿದ್, ಸುತ್ತಿಗೆಯಿಂದ ಇಬ್ಬರ ಮೇಲೂ ಹಲ್ಲೆ ನಡೆಸಿ ಹತ್ಯೆ ಮಾಡಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಹತ್ಯೆಯ ಬಳಿಕ ಶಾಹಿದ್ನೇ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಮಾಹಿತಿ ಆಧರಿಸಿ ಸ್ಥಳಕ್ಕೆ ತೆರಳಿದ ಪೊಲೀಸರು ಆತನನ್ನು ವಶಕ್ಕೆ ಪಡೆದಿದ್ದಾರೆ. ಹತ್ಯೆಗೆ ನಿಖರ ಕಾರಣವೇನು ಎಂಬುದು ಪೊಲೀಸ್ ತನಿಖೆಯಿಂದ ತಿಳಿದು ಬರಬೇಕಿದೆ.















