ಉಡುಪಿ: ಡೇವಿಡ್ ಡಿಸೋಜಾ ಕೊಲೆ ಪ್ರಕರಣ – ಮತ್ತೋರ್ವ ಆರೋಪಿ ಮೇಲೆ ಪೊಲೀಸರಿಂದ ಫೈರಿಂಗ್; ಶೂಟರ್ ಗಳನ್ನು ಕಳುಹಿಸಿಕೊಟ್ಟಿದ್ದ ನಟೋರಿಯಸ್ ಗ್ಯಾಂಗ್‌ಸ್ಟರ್ ಅನುಜ್ ಪಾಟೀಲ್

ಉಡುಪಿ: ಕಾಪು ತಾಲೂಕು ಮುದರಂಗಡಿಯ ಸೈಂಟ್ ಕ್ಷೇವಿಯರ್ ಚರ್ಚ್ ಕಾಂಪ್ಲೆಕ್ಸ್‌ನಲ್ಲಿ ಪ್ರಿನ್ಸ್ ಎಂಟರ್‌ಪ್ರೈಸಸ್ ಮಾಲಕ ಡೇವಿಡ್ ಡಿಸೋಜಾ ಅವರನ್ನು ಪಿಸ್ತೂಲ್‌ನಿಂದ ಗುಂಡು ಹಾರಿಸಿ ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈನ ನಟೋರಿಯಸ್ ಗ್ಯಾಂಗ್‌ಸ್ಟರ್ ಅನುಜ್ ಪಾಟೀಲ್ (35) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಡೇವಿಡ್ ಡಿಸೋಜಾ ಕೊಲೆ ಪ್ರಕರಣದ ತನಿಖೆ ಮುಂದುವರಿದಿದ್ದು, ಮೂವರು ಶೂಟರ್‌ಗಳನ್ನು ಕಳುಹಿಸಿದ ಆರೋಪದ ಮೇರೆಗೆ ಬಿಹಾರದ ನಳಂದ ಜಿಲ್ಲೆಯ ಸಾರ್ಮರ್ ನಿವಾಸಿ ಕಮಲೇಶ್ವರ ಪಾಟೀಲ್ ಅವರ ಪುತ್ರ ಅನುಜ್ ಪಾಟೀಲ್‌ನನ್ನು ಸೋಮವಾರ ಬೆಳಿಗ್ಗೆ 6ರಿಂದ 6.30ರ ನಡುವೆ ಹೆಬ್ರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪೊಲೀಸರು ಬಂಧಿಸಿದ್ದಾರೆ.
ಆರೋಪಿಯನ್ನು ವಶಕ್ಕೆ ಪಡೆದು ಕರೆತರುತ್ತಿದ್ದ ಸಂದರ್ಭದಲ್ಲಿ ಆತ ಪೊಲೀಸರ ಮೇಲೆ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ. ಈ ವೇಳೆ ಕೊಲ್ಲೂರು ಠಾಣೆಯ ಪಿಎಸ್‌ಐ ವಿನಯ್ ಅವರ ಬಳಿಯಿದ್ದ ಆಯುಧವನ್ನು ಕಸಿದುಕೊಂಡು ಗುಂಡು ಹಾರಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಆತ್ಮರಕ್ಷಣೆಗಾಗಿ ಕುಂದಾಪುರ ಠಾಣೆಯ ಪಿಎಸ್‌ಐ ನಂಜ ನಾಯಕ್ ಅವರು ಅನುಜ್ ಪಾಟೀಲ್‌ನ ಕಾಲಿಗೆ ಗುಂಡು ಹಾರಿಸಿದ್ದಾರೆ. ಗಾಯಗೊಂಡ ಆರೋಪಿಯನ್ನು ಚಿಕಿತ್ಸೆಗಾಗಿ ಉಡುಪಿಯ ಅಜ್ಜರಕಾಡು ಆಸ್ಪತ್ರೆಗೆ ದಾಖಲಿಸಲಾಗಿದೆ.
ಮುಂಬೈನಲ್ಲಿ ಅಪರಾಧ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದ ಅನುಜ್ ಪಾಟೀಲ್ 2017ರಿಂದ ತಲೆಮರೆಸಿಕೊಂಡಿದ್ದ ಎನ್ನಲಾಗಿದೆ. ಆತನ ವಿರುದ್ಧ ಮಹಾರಾಷ್ಟ್ರದಲ್ಲಿ MCOCA ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
ಆರೋಪಿಯ ವಿರುದ್ಧ ಒಟ್ಟು 11 ಪ್ರಕರಣಗಳು ದಾಖಲಾಗಿವೆ. ಈ ಪೈಕಿ 10 ಪ್ರಕರಣಗಳು ಆರ್ಮ್ಸ್ ಆಕ್ಟ್‌ಗೆ ಸಂಬಂಧಿಸಿದವು. ಮಹಾರಾಷ್ಟ್ರದಲ್ಲಿ ನಾಲ್ಕು, ಗುಜರಾತ್‌ನಲ್ಲಿ ಐದು, ದಮನ್ ಮತ್ತು ದಿಯುನಲ್ಲಿ ಒಂದು ಹಾಗೂ ಕರ್ನಾಟಕದಲ್ಲಿ ಒಂದು ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಡೇವಿಡ್ ಡಿಸೋಜಾ ಕೊಲೆ ಪ್ರಕರಣದಲ್ಲಿ ಮೂವರು ಶೂಟರ್‌ಗಳನ್ನು ಕಳುಹಿಸಿದ ಆರೋಪದ ಹಿನ್ನೆಲೆಯಲ್ಲಿ ಅನುಜ್ ಪಾಟೀಲ್ ಬಂಧನವು ತನಿಖೆಯಲ್ಲಿ ಮಹತ್ವದ ಬೆಳವಣಿಗೆಯಾಗಿದೆ.