ಐಎಎಸ್ ಅಧಿಕಾರಿ ಗ್ಯಾನೇಂದ್ರ ಕುಮಾರ್ ಮನೆ ಬಾಗಿಲು ಒಡೆದು ಇಡಿ ದಾಳಿ

ಬೆಂಗಳೂರು: ಕೆಪಿಎಸ್‌ಸಿ (KPSC) ಹಗರಣ ಸಂಬಂಧ ಫೋನ್ ಕರೆಗೆ ಪ್ರತಿಕ್ರಿಯಿಸದ ಹಿನ್ನೆಲೆ ಐಎಎಸ್ (IAS) ಅಧಿಕಾರಿ ಗ್ಯಾನೇಂದ್ರ ಕುಮಾರ್ (Gyanendra Kumar) ಅನುಪಸ್ಥಿತಿಯಲ್ಲಿ ಅವರ ಮನೆ ಮೇಲೆ ಇಡಿ (ED) ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಇಡಿ ಅಧಿಕಾರಿಗಳು ಗ್ಯಾನೇಂದ್ರ ಕುಮಾರ್ ಅವರ ನಿರಂತರ ಸಂಪರ್ಕಕ್ಕೆ ಯತ್ನಿಸಿದರೂ ಯಾವುದೇ ಪ್ರತಿಕ್ರಿಯೆ ಬಾರದ ಹಿನ್ನೆಲೆ ಜಯಮಹಲ್ ರಸ್ತೆಯಲ್ಲಿ ಇರುವ ಗ್ಯಾನೇಂದ್ರ ಕುಮಾರ್ ಮನೆಯ ಬಾಗಿಲು ಒಡೆದು ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. 

ಗ್ಯಾನೇಂದ್ರ ಕುಮಾರ್ ಅವರು ಕೆಪಿಎಸ್‌ಸಿಯಲ್ಲಿ ಎಕ್ಸಾಂ ಕಂಟ್ರೋಲರ್ ಆಗಿ ಕೆಲಸ ಮಾಡಿದ್ದರು. ಪಶುವೈದ್ಯಾಧಿಕಾರಿ ಪರೀಕ್ಷೆ, ಕೆಎಎಸ್ ಎಕ್ಸಾಂ ಅನ್ನು ಕೂಡ ನಡೆಸಿದ್ದರು. ಕೆಎಎಸ್ ಪರೀಕ್ಷೆ ಅಕ್ರಮ ಆರೋಪದ ಮೇಲೆ ಶಾಂತ ಹೊಸಮನಿ ವಿರುದ್ಧ ಎಫ್‌ಐಆರ್ ಆಗಿತ್ತು. ಇಡಿ ಕೂಡ ಶಾಂತ ಹೊಸಮನಿ ಅವರ ಮನೆ ಮೇಲೆ ದಾಳಿ ನಡೆಸಿತ್ತು. ಆದರೆ, ಈಗ ಗ್ಯಾನೇಂದ್ರ ಕುಮಾರ್ ನಾಪತ್ತೆ ಹಿಂದೆ ಸಾಕಷ್ಟು ಅನುಮಾನ ವ್ಯಕ್ತವಾಗಿದೆ.

ತರಾತುರಿಯಲ್ಲಿ ಏರ್ ಟಿಕೆಟ್ ಬುಕ್ ಮಾಡಿದ್ದ ಅಧಿಕಾರಿ ಆಗಸ್ಟ್ 20 ರಂದು ದೆಹಲಿಗೆ ತೆರಳಿದ್ದಾರೆ. ಅಂದು ಮಧ್ಯಾಹ್ನ 3 ಗಂಟೆಯ ಫ್ಲೈಟ್‌ಗೆ 1 ಗಂಟೆ 31 ನಿಮಿಷಕ್ಕೆ ಟಿಕೆಟ್ ಬುಕ್ಕಿಂಗ್ ಆಗಿದೆ. 

ಒಂದೂವರೆ ಗಂಟೆ ಮುಂಚಿತವಾಗಿ ಗ್ಯಾನೇಂದ್ರ ಕುಮಾರ್ 30,253 ರೂಪಾಯಿ ಹಣ ನೀಡಿ ತರಾತುರಿಯಲ್ಲಿ ಟಿಕೆಟ್ ಬುಕ್ಕಿಂಗ್ ಮಾಡಿದ್ದಾರೆ. ಹೆಚ್‌ಡಿಎಫ್‌ಸಿ ಕ್ರೆಡಿಟ್ ಕಾರ್ಡ್‌ನಲ್ಲಿ ಇಂಡಿಗೋ ಪ್ಲೈಟ್‌ಗೆ ಟಿಕೆಟ್ ಬುಕ್ ಮಾಡಿ ತೆರಳಿದ್ದು ಹಲವು ಪ್ರಶ್ನೆಗಳನ್ನು ಹುಟ್ಟು ಹಾಕಿತ್ತು.