ಕುಂದಾಪುರ ಆನಗಳ್ಳಿಯ ದತ್ತಾಶ್ರಮದಲ್ಲಿ ಪ್ರತಿಷ್ಠಾ ವರ್ಧಂತಿ: ಶ್ರೀ ನರ್ಮದಾ ಲಿಂಗಾ ಪ್ರತಿಷ್ಠಾ ಮಹೋತ್ಸವ

ಕುಂದಾಪುರ: ಕುಂದಾಪುರದ ತಾಲೂಕಿನ ಆನಗಳ್ಳಿಯ ಹೆಬ್ಬಾರಬೆಟ್ಟುವಿನ ಶ್ರೀ ದತ್ತಾಶ್ರಮ, ಶ್ರೀ ಆದಿ ಶಕ್ತಿ ಮಠದ ಪ್ರತಿಷ್ಠಾ ವರ್ಧಂತಿ ಹಾಗೂ ಶ್ರೀ ನರ್ಮಂದಾ ಲಿಂಗ ಪ್ರತಿಷ್ಠಾ ಮಹೋತ್ಸವ ಕಾರ್ಯಕ್ರಮ ಬುಧವಾರದಂದು ಋಷಿಮುನಿಗಳು ನಡೆದಾಡಿದ ಪುಣ್ಯಭೂಮಿಯಾದ ಹೆಬ್ಬಾರಬೆಟ್ಟುವಿನಲ್ಲಿ ನಡೆಯಿತು.

ಶ್ರಂಗೇರಿ ಗೌರಿಗದ್ದೆಯ ಶ್ರೀ ದತ್ತಾಶ್ರಮದ ಅವಧೂತ ಶ್ರೀ ವಿನಯ ಗುರೂಜಿ ಮತ್ತು ನಾಗಸಾಧುಗಳ ಪಂಥದ ರಾಷ್ಟ್ರೀಯಾ ಜೂನಾ ನವದೆಹಲಿ ಅಖಾಡದ ಉಪಾಧ್ಯಕ್ಷ ಅಗಸ್ತ್ಯಗಿರಿ ಮಹಾರಾಜ್ ಅವರಿಂದ ಬೆಳಿಗ್ಗೆನಿಂದಲೇ ನರ್ಮದಾ ಲಿಂಗದ ಪ್ರತಿಷ್ಠಾಪನೆ, ಅಭಿಷೇಕ, ದತ್ತಾಶ್ರಮ ವರ್ದಂತಿ ನಡೆಯಿತು.

ನರ್ಮಾದ ಲಿಂಗಕ್ಕೆ ಹಾಲು, ತುಪ್ಪ, ಜೇನು, ಸಿಯಾಳ, ನೀರು, ರಕ್ತಚಂದನ, ಅರಶಿನ-ಕುಂಕುಮ, ಭಸ್ಮ, ಸಕ್ಕರೆ, ಕಬ್ಬಿನ ಹಾಲು ಸೇರಿದಂತೆ ಪುಣ್ಯ ದ್ರವ್ಯಗಳಿಂದ ಅಭಿಷೇಕ ನೆರವೇರಿಸಲಾಯಿತು.ಈ ವೇಳೆ ನೆರೆದ ಭಕ್ತಸಾಗರವು ಹರಹರ ಮಹಾದೇವ ಘೋಷಣೆಯೊಂದಿಗೆ ಭಕ್ತಿ ಸಮರ್ಪಿಸಿದರು. ಶಂಕರನಾರಾಯಣ ಶ್ರೀಷ ಜೋಯಿಸ ಅವರ ನೇತ್ರತ್ವದಲ್ಲಿ ಕ್ಷೇತ್ರದಲ್ಲಿ ಆದಿವಾಸ ಹೋಮ, ದತ್ತಾಭಿಷೇಕ, ಶತ ರುದ್ರಾಭಿಷೇಕ, ಪವನ ಹೋಮ, ದುರ್ಗಾಷಟಿ ಹೋಮ ಮೊದಲಾದ ಧಾರ್ಮಿಕ ಕಾರ್ಯವೂ ನಡೆಯಿತು. ಮಧ್ಯಾಹ್ನ ನಡೆದ ಅನ್ನ ಸಂತರ್ಪಣೆಯಲ್ಲಿ ಏಳು ಸಾವಿರಕ್ಕೂ ಅಧಿಕ ಭಕ್ತರು ಪಾಲ್ಘೊಂಡರು.

ಈ ಸಂದರ್ಭದಲ್ಲಿ ಬಸ್ರೂರು ಮಹತೋಬಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಧರ್ಮದರ್ಶಿ ಅಪ್ಪಣ್ಣ ಹೆಗ್ಡೆ, ವಿದ್ವಾನ್ ತಟ್ಟವಟ್ಟು ವಾಸುದೇವ ಜೋಯಿಸ, ಬೈಂದೂರು ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ, ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ, ಉದ್ಯಮಿಗಳಾದ ಗುರ್ಮೆ ಸುರೇಶ್ ಶೆಟ್ಟಿ, ಯಶಪಾಲ್ ಸುವರ್ಣ, ಜಿ.ಪಂ ಸದಸ್ಯೆ ಗೀತಾಂಜಲಿ ಸುವರ್ಣ, ಚಂದ್ರ ಗೌಡ ಜಯಪುರ, ಆರ್.ಎಸ್.ಎಸ್. ಮುಖಂಡ ಸುಬ್ರಮಣ್ಯ ಹೊಳ್ಳ, ಆನಗಳ್ಳಿ ದತ್ತಾಶ್ರಮದ ಪ್ರವ್ರತ್ತಕರಾದ ಸುಭಾಷ್ ಪೂಜಾರಿ ಸಂಗಮ್, ಫರ್ಮಿನ್ ಎಸ್. ಪೂಜಾರಿ, ಯಶೋಧಾ ಎಸ್. ಪೂಜಾರಿ, ಹರೀಶ್ ತೋಳಾರ್ ಕೊಲ್ಲೂರು, ಸಂಗಮ್ ಫ್ರೆಂಡ್ಸ್ ಸಂಗಮ್, ಪ್ರಗತಿ ಯುವಕ ಮಂಡಲ ಆನಗಳ್ಳಿ, ಗೆಳೆಯರ ಬಳಗ ಆನಗಳ್ಳಿ ಸಂಘಟನೆಯವರು ಇದ್ದರು.


1,300 ಅಧಿಕ ಸಾಧುಸಂತರ ಸಮಾಗಮ
ಕಳೆದ ವರ್ಷ ಇದೇ ದಿನದಂದು ಶ್ರೀ ದತ್ತಾಶ್ರಮ ಉದ್ಘಾಟನೆ ನಡೆದಿತ್ತು. ಸಾವಿರಾರು ಮಂದಿ ಸಾಧುಸಂತರು ಆಗಮಿಸಿದ್ದರು. ಬುಧವಾರ ನಡೆಯುವ ಧಾರ್ಮಿಕ ಪ್ರಕ್ರಿಯೆಯಲ್ಲಿ ಪಾಲ್ಘೊಳ್ಲಲು ಯಾವುದೇ ಆಮಂತ್ರಣವೂ ಇಲ್ಲದೇ ಸ್ವಯಂಪ್ರೇರಿತರಾಗಿ ಸಾಧುಸಂತರು ಕ್ಷೇತ್ರಕ್ಕೆ ಆಗಮಿಸಿದ್ದರು. ನಾಗಾಸಾಧುಗಳು, ಸೀತಾರಾಮ ಪಂಥದ ಸಾಧುಗಳು, ಅಘೋರಿ ಬಾಬಾಗಳು, ಸಿದ್ಧರು ಸೇರಿದಂತೆ ೧೩೦೦ ಅಧಿಕ ಸಾಧುಸಂತರ ಸಮಾಗಮ ಕ್ಷೇತ್ರದಲ್ಲಿ ಧಾರ್ಮಿಕತೆಯನ್ನು ಇನ್ನಷ್ಟು ಹೆಚ್ಚಿಸಿತ್ತು.