ಶ್ರೀಕೃಷ್ಣ ಸನ್ನಿಧಿಯಲ್ಲಿ 25 ಗಂಟೆಗಳ ನಿರಂತರ ದಾಸವಾಣಿ ಗಾಯನ

ಉಡುಪಿ: ಉಡುಪಿ ಶ್ರೀಕೃಷ್ಣ ಮಠದ ಬಳಿಯ ಗೀತಾಮಂದಿರದ ಶ್ರೀ ಪುತ್ತಿಗೆ ನೃಸಿಂಹ ಸಭಾಭವನದಲ್ಲಿ ವಿದುಷಿ ಸಂಗೀತ ಬಾಲಚಂದ್ರ ಅವರು 25 ಗಂಟೆಗಳ ನಿರಂತರ ದಾಸವಾಣಿ ಗಾಯನದ ಮೂಲಕ ವಿಶ್ವದಾಖಲೆ ನಿರ್ಮಿಸುವ ಸಂಕಲ್ಪದೊಂದಿಗೆ ಸಂಗೀತ ಸೇವೆ ಆರಂಭಿಸಿದರು.

ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್‌ನಲ್ಲಿ ದಾಖಲೆ ನಿರ್ಮಿಸುವ ಉದ್ದೇಶದಿಂದ ಅವರು ಹರಿದಾಸರ ಪದಗಳು ಹಾಗೂ ಕೀರ್ತನೆಗಳನ್ನು ಸತತ 25 ಗಂಟೆಗಳ ಕಾಲ ಗಾಯನ ಮಾಡಲಿದ್ದಾರೆ.

ವೇದವ್ಯಾಸ ಪುರಾಣಿಕ ಮತ್ತು ಗೀತಾ ಪುರಾಣಿಕ ದಂಪತಿಯ ಪುತ್ರಿಯಾದ ಸಂಗೀತ ಬಾಲಚಂದ್ರ ಅವರು ಬಾಲ್ಯದಿಂದಲೇ ಸಂಗೀತದಲ್ಲಿ ಆಸಕ್ತಿ ಬೆಳೆಸಿಕೊಂಡಿದ್ದು, ನಿರಂತರ ಸಾಧನೆಯ ಮೂಲಕ ಸಂಗೀತ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದಾರೆ. ತಮ್ಮ ಸಂಗೀತ ಸಾಧನೆಯನ್ನು ಶ್ರೀಕೃಷ್ಣನಿಗೆ ಸಮರ್ಪಿಸುವ ಭಕ್ತಿಭಾವದಿಂದ ಈ ಸಂಗೀತ ಯಜ್ಞವನ್ನು ಕೈಗೊಂಡಿದ್ದಾರೆ.

ಶಾಸಕ ಯಶ್‌ಪಾಲ್ ಸುವರ್ಣ ಅವರು ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.

ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್‌ನ ಏಷ್ಯಾ ಮುಖ್ಯಸ್ಥ ಡಾ. ಮನೀಷ್ ವಿಶ್ನೋಯಿ, ಗೋವಾ ರಾಜ್ಯದ ಜಿಎಸ್‌ಟಿ ಆಯುಕ್ತ ವಿಠೋಬ ಶೆಟ್ಟಿ, ಕಾರ್ಯಕ್ರಮದ ಪ್ರಾಯೋಜಕರಾದ ಭೀಮಾ ಜುವೆಲರ್ಸ್‌ನ ರಾಘವೇಂದ್ರ ಭಟ್ ಉಪಸ್ಥಿತರಿದ್ದರು.

ಶ್ರೀಮಠದ ದಿವಾನ ನಾಗರಾಜ ಆಚಾರ್ಯ, ಅಂತಾರಾಷ್ಟ್ರೀಯ ಕಾರ್ಯದರ್ಶಿ ಪ್ರಸನ್ನ ಆಚಾರ್ಯ, ಕಲಾ ಕಾರ್ಯದರ್ಶಿ ಕೆ.ವಿ. ರಮಣ್ ಸೇರಿದಂತೆ ಗಣ್ಯರು, ಸಂಗೀತಾಸಕ್ತರು ಹಾಗೂ ಭಕ್ತರು ಭಾಗವಹಿಸಿದ್ದರು.ಮುಂಬೈನಲ್ಲಿ ಚಾತುರ್ಮಾಸ್ಯ ವ್ರತದಲ್ಲಿರುವ ಪರಮಪೂಜ್ಯ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ವಿಡಿಯೊ ಸಂದೇಶದ ಮೂಲಕ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಶ್ರೀಕೃಷ್ಣನ ಸನ್ನಿಧಿಯಲ್ಲಿ ನಡೆಯುತ್ತಿರುವ ಸಂಗೀತ ಸೇವೆ ಯಶಸ್ವಿಯಾಗಿ ನೆರವೇರಿ ವಿಶ್ವದಾಖಲೆಯಾಗಿ ಮೂಡಿಬರಲಿ ಎಂದು ಆಶೀರ್ವದಿಸಿದರು.

ಸಂಗೀತ ಬಾಲಚಂದ್ರ ಅವರಿಗೆ ಕೀಬೋರ್ಡ್‌ನಲ್ಲಿ ಗುರುರಾಜ್, ಮೊಗಿ ಗುರುರಾಜ್ ಹಾಗೂ ರಜ್ಯಾ ಕರಿವೆಲ್ಲೂರ್, ರಿದಮ್ ಪ್ಯಾಡ್‌ನಲ್ಲಿ ಪ್ರಭಾಕರ ಅಮ್ಮಿಂಗೋಡ್ ಹಾಗೂ ವಾಮನ ಕೆ., ತಬಲಾದಲ್ಲಿ ದೀಕ್ಷಿತ್ ಕೊಡಂಚಾ ಹಾಗೂ ದೀಪಕ್ ರಾಜ್ ಉಲ್ಲಾಸು ಮತ್ತು ಕೊಳಲಿನಲ್ಲಿ ಸಂತೋಷ್ ವಿಟ್ಟಲ್ ಸಂಗೀತ ಸಹಕಾರ ನೀಡುತ್ತಿದ್ದಾರೆ.

ದಾಸಸಾಹಿತ್ಯ, ಕರ್ನಾಟಕ ಸಂಗೀತ ಹಾಗೂ ಶ್ರೀಕೃಷ್ಣ ಭಕ್ತಿಯ ಸಂಗಮವಾಗಿರುವ ಈ 25 ಗಂಟೆಗಳ ಸಂಗೀತ ಕಾರ್ಯಕ್ರಮವು ಉಡುಪಿಯ ಸಾಂಸ್ಕೃತಿಕ ಹಾಗೂ ಆಧ್ಯಾತ್ಮಿಕ ಕ್ಷೇತ್ರದಲ್ಲಿ ವಿಶಿಷ್ಟ ದಾಖಲೆಯಾಗುವ ನಿರೀಕ್ಷೆ ಮೂಡಿಸಿದೆ.