ಮಂಗಳೂರು: ಆಹಾರ ಸುರಕ್ಷತೆ ಹಾಗೂ ನಕಲಿ ಔಷಧಿಗಳ ಮೇಲೆ ನಿರಂತರ ನಿಗಾ ಇರಿಸಲು ಜಿಲ್ಲಾ ಮತ್ತು ತಾಲ್ಲೂಕು ಮಟ್ಟದಲ್ಲಿ ‘ವಾಚ್ ಟೀಮ್’ಗಳನ್ನು ರಚಿಸುವ ಕುರಿತು ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್ ತಿಳಿಸಿದ್ದಾರೆ.
ಶನಿವಾರ ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಸುರಕ್ಷಿತ ಆಹಾರ ಹಾಗೂ ನಕಲಿ ಔಷಧಿಗಳ ಕುರಿತು ಸಾರ್ವಜನಿಕರು ಸುಲಭವಾಗಿ ದೂರು ಸಲ್ಲಿಸಲು ಕ್ಯೂಆರ್ ಕೋಡ್ ವ್ಯವಸ್ಥೆ ಜಾರಿಗೆ ತರಲಾಗಿದೆ. ರಾಜ್ಯದ ಪ್ರತಿ ಹೋಟೆಲ್ ಹಾಗೂ ಔಷಧ ಮಳಿಗೆಗಳ ಮುಂಭಾಗದಲ್ಲಿ ಕ್ಯೂಆರ್ ಕೋಡ್ ಪ್ರದರ್ಶಿಸುವಂತೆ ಸೂಚನೆ ನೀಡಲಾಗುವುದು ಎಂದರು.
ಕ್ಯೂಆರ್ ಕೋಡ್ ಜಾರಿಗೊಳಿಸಿದ ಎರಡು ದಿನಗಳಲ್ಲೇ 400ಕ್ಕೂ ಹೆಚ್ಚು ದೂರುಗಳು ಬಂದಿವೆ. ದೂರುಗಳ ಆಧಾರದ ಮೇಲೆ ಆಹಾರ ಸುರಕ್ಷತಾ ಅಧಿಕಾರಿಗಳು ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ ಎಂದು ಖಾದರ್ ಹೇಳಿದರು.
ಪ್ರಸ್ತುತ ಅಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ಈ ಕಾರ್ಯವನ್ನು ನಿರ್ವಹಿಸುತ್ತಿದ್ದರೂ, ಈ ವ್ಯವಸ್ಥೆಯನ್ನು ಮತ್ತಷ್ಟು ವ್ಯಾಪಕವಾಗಿ ಜಾರಿಗೆ ತರುವ ಅಗತ್ಯವಿದೆ. ಜತೆಗೆ ಸಾರ್ವಜನಿಕರಲ್ಲಿ ಆಹಾರ ಸುರಕ್ಷತೆ ಮತ್ತು ನಕಲಿ ಔಷಧಿಗಳ ಕುರಿತು ನಿರಂತರ ಜಾಗೃತಿ ಮೂಡಿಸಬೇಕಿದೆ ಎಂದು ಅವರು ಹೇಳಿದರು.
ಈ ಹಿನ್ನೆಲೆಯಲ್ಲಿ ನಿವೃತ್ತ ಅಧಿಕಾರಿಗಳು, ನಿವೃತ್ತ ಪ್ರಾಧ್ಯಾಪಕರು, ತಜ್ಞರು ಹಾಗೂ ಸಾಮಾಜಿಕ ಸೇವೆಯಲ್ಲಿ ಆಸಕ್ತಿ ಹೊಂದಿರುವ ಹಿರಿಯ ನಾಗರಿಕರನ್ನು ಒಳಗೊಂಡ ‘ವಾಚ್ ಟೀಮ್’ಗಳನ್ನು ರಚಿಸುವ ಬಗ್ಗೆ ಸರ್ಕಾರ ಪರಿಶೀಲಿಸುತ್ತಿದೆ. ತಂಡಗಳಿಗೆ ನಿರ್ದಿಷ್ಟ ಅಧಿಕಾರ ನೀಡುವ ಸಾಧ್ಯತೆಯೂ ಇದೆ. ಈ ಕುರಿತು ಕಾನೂನು ನಿಬಂಧನೆಗಳನ್ನು ಪರಿಶೀಲಿಸಿದ ಬಳಿಕ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸಚಿವರು ತಿಳಿಸಿದರು.
ನಕಲಿ ಔಷಧಿಗಳ ಜಾಲ ಕರ್ನಾಟಕಕ್ಕೆ ಮಾತ್ರ ಸೀಮಿತವಾಗಿಲ್ಲ ಎಂದ ಅವರು, ಇತರ ರಾಜ್ಯಗಳಲ್ಲಿ ತಯಾರಿಸಲಾದ ನಕಲಿ ಔಷಧಿಗಳನ್ನು ಕರ್ನಾಟಕಕ್ಕೆ ತರಲಾಗುತ್ತಿರುವ ಸಾಧ್ಯತೆಯಿದೆ ಎಂದು ಹೇಳಿದರು.
ಬಿಡದಿ ಸಮೀಪ ಪತ್ತೆಯಾದ ನಕಲಿ ಔಷಧ ತಯಾರಿಕಾ ದಂಧೆಯನ್ನು ಉಲ್ಲೇಖಿಸಿದ ಖಾದರ್, ಪ್ರಕರಣದ ಸಮಗ್ರ ತನಿಖೆಗಾಗಿ ವಿಶೇಷ ತನಿಖಾ ತಂಡ (ಎಸ್ಐಟಿ) ರಚಿಸಲಾಗಿದೆ ಎಂದು ತಿಳಿಸಿದರು.















