ಜಾಗತಿಕ ವೇದಿಕೆಯಲ್ಲಿ ಫಾರ್ಮುಲಾ ಮಣಿಪಾಲ್‌ ಭರ್ಜರಿ ಸಾಧನೆ: ಸ್ವಿಟ್ಜರ್‌ಲ್ಯಾಂಡ್‌ನಲ್ಲಿ 11, ಪೋರ್ಚುಗಲ್‌ನಲ್ಲಿ 4 ನೇ ಸ್ಥಾನ ಪಡೆದು ಮಿಂಚಿದ ಫಾರ್ಮುಲಾ ಮಣಿಪಾಲ್‌

ಮಣಿಪಾಲ: ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್‌ನ ವಿದ್ಯಾರ್ಥಿಗಳ ನೇತೃತ್ವದ ಎಂಜಿನಿಯರಿಂಗ್ ಯೋಜನೆಯಾದ ಫಾರ್ಮುಲಾ ಮಣಿಪಾಲ್ ಜುಲೈ 2026ರಲ್ಲಿ ನಡೆದ ಅಂತರರಾಷ್ಟ್ರೀಯ ಫಾರ್ಮುಲಾ ಸ್ಟೂಡೆಂಟ್ ಸ್ಪರ್ಧೆಗಳಲ್ಲಿ ಗಮನಾರ್ಹ ಸಾಧನೆ ಮಾಡಿದೆ. ಫಾರ್ಮುಲಾ ಸ್ಟೂಡೆಂಟ್ ಸ್ವಿಟ್ಜರ್‌ಲ್ಯಾಂಡ್‌ನಲ್ಲಿ 11 ನೇ ಸ್ಥಾನಹಾಗೂಫಾರ್ಮುಲಾ ಸ್ಟೂಡೆಂಟ್ ಪೋರ್ಚುಗಲ್‌ನಲ್ಲಿ 4ನೇ ಸ್ಥಾನ ಪಡೆಯುವ ಮೂಲಕ ಜಾಗತಿಕ ಮಟ್ಟದಲ್ಲಿ ತನ್ನ ಸಾಮರ್ಥ್ಯವನ್ನು ಮತ್ತೊಮ್ಮೆ ಸಾಬೀತುಪಡಿಸಿದೆ.

ಗಮನಸೆಳೆದ ಅತ್ಯುತ್ತಮ ಪ್ರದರ್ಶನ:

ಜುಲೈನಲ್ಲಿ ಸ್ವಿಟ್ಜರ್‌ಲ್ಯಾಂಡ್ ಮತ್ತು ಪೋರ್ಚುಗಲ್‌ನಲ್ಲಿ ನಡೆದ ಸ್ಪರ್ಧೆಗಳಲ್ಲಿ ಫಾರ್ಮುಲಾ ಮಣಿಪಾಲ್ ತಂಡ ಭಾಗವಹಿಸಿತ್ತು. ಪೋರ್ಚುಗಲ್‌ನಲ್ಲಿ ನಡೆದ ಸ್ಪರ್ಧೆಯಲ್ಲಿ ಕಡ್ಡಾಯವಾಗಿರುವ ತಾಂತ್ರಿಕ ಪರಿಶೀಲನೆಯನ್ನು (Technical Inspection) ಯಶಸ್ವಿಯಾಗಿ ಪೂರ್ಣಗೊಳಿಸಿದ ಮೊದಲ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು.

ಇದರ ಬೆನ್ನಲ್ಲೇ ಆಕ್ಸಿಲರೇಷನ್ ಮತ್ತು ಸ್ಕಿಡ್‌ಪ್ಯಾಡ್ ವಿಭಾಗಗಳಲ್ಲಿ ತಂಡ ಮೊದಲ ಸ್ಥಾನ ಪಡೆದುಕೊಂಡಿತು. ವಾಹನದ ವೇಗ, ನಿಯಂತ್ರಣ, ನಿರ್ವಹಣೆ ಹಾಗೂ ಒಟ್ಟಾರೆ ಕಾರ್ಯಕ್ಷಮತೆಯನ್ನು ಪರೀಕ್ಷಿಸುವ ಈ ಎರಡೂ ವಿಭಾಗಗಳಲ್ಲಿ ತಂಡದ ಅತ್ಯುತ್ತಮ ಪ್ರದರ್ಶನ ಗಮನ ಸೆಳೆಯಿತು. ಅಲ್ಲದೆ, ಎಲೆಕ್ಟ್ರಿಕ್ ವಾಹನದೊಂದಿಗೆ ಸ್ಪರ್ಧೆಯ ನಾಲ್ಕೂ ಡೈನಾಮಿಕ್ ಈವೆಂಟ್‌ಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿರುವುದು ತಂಡದ ಪ್ರಮುಖ ಎಂಜಿನಿಯರಿಂಗ್ ಸಾಧನೆಯಾಗಿದೆ. ಅಂತರರಾಷ್ಟ್ರೀಯ ಮಟ್ಟದ ಕಠಿಣ ಸ್ಪರ್ಧೆಯಲ್ಲಿ ವಾಹನದ ಕಾರ್ಯಕ್ಷಮತೆ ಮತ್ತು ವಿಶ್ವಾಸಾರ್ಹತೆಯನ್ನು ಇದು ಸಾಬೀತುಪಡಿಸಿದೆ.

ಫಾರ್ಮುಲಾ ಮಣಿಪಾಲ್ ಸಾಧನೆ:

ಫಾರ್ಮುಲಾ ಮಣಿಪಾಲ್ ಸಂಪೂರ್ಣ ಎಲೆಕ್ಟ್ರಿಕ್ ತಂಡವಾಗಿ ಪರಿವರ್ತನೆಯಾದ ಬಳಿಕ ಇದು ಕೇವಲ ಎರಡನೇ ವರ್ಷ. ಇಷ್ಟು ಕಡಿಮೆ ಅವಧಿಯಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಎಲ್ಲಾ ಡೈನಾಮಿಕ್ ಈವೆಂಟ್‌ಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿರುವುದು ಗಮನಾರ್ಹ ಸಾಧನೆಯಾಗಿದೆ. ಎಲೆಕ್ಟ್ರಿಕ್ ಫಾರ್ಮುಲಾ ಸ್ಟೂಡೆಂಟ್ ಕಾರಿನ ತಾಂತ್ರಿಕ ಸಂಕೀರ್ಣತೆ ಹಾಗೂ ವಿಶ್ವಾಸಾರ್ಹತೆಯ ಸವಾಲುಗಳನ್ನು ಪರಿಗಣಿಸಿದರೆ ಈ ಸಾಧನೆಯ ಮಹತ್ವ ಮತ್ತಷ್ಟು ಹೆಚ್ಚಾಗಿದೆ.

ನಿರಂತರ ಸಾಧನೆಯ ಮೂಲಕ ಹೆಸರು:

ಜಾಗತಿಕ ವೇದಿಕೆಯಲ್ಲಿ ನಿರಂತರವಾಗಿ ತನ್ನ ಸಾಮರ್ಥ್ಯದ ಮಾನದಂಡವನ್ನು ಹೆಚ್ಚಿಸಿಕೊಳ್ಳುತ್ತಿರುವ ಫಾರ್ಮುಲಾ ಮಣಿಪಾಲ್, ಕಾರ್ಯಕ್ಷಮತೆ, ನಿಖರತೆ ಮತ್ತು ಎಂಜಿನಿಯರಿಂಗ್ ಶ್ರೇಷ್ಠತೆಯತ್ತ ಮುನ್ನಡೆಯುತ್ತಿದೆ. ವಿದ್ಯಾರ್ಥಿಗಳ ತಾಂತ್ರಿಕ ಪ್ರತಿಭೆ ಮತ್ತು ನಾವೀನ್ಯತೆಗೆ ವೇದಿಕೆಯಾಗಿರುವ ತಂಡದ ಈ ಪಯಣ ‘Engineered with Passion’ ಎಂಬ ಧ್ಯೇಯದೊಂದಿಗೆ ಮುಂದುವರಿಯುತ್ತಿದೆ.