ಉಡುಪಿ: ಮಾತೃಭಾಷೆಯ ಮೇಲಿನ ಪ್ರೀತಿ ಹಾಗೂ ಆಡು ಭಾಷೆಯ ಮೇಲೆ ಅಭಿಮಾನ ಭಾಷಾ ಬೆಳವಣಿಗೆ ಪೂರಕ ಎಂದು ಮುಂಬೈ ಕನ್ನಡ ಸಂಘದ ಕಾರ್ಯಾಧ್ಯಕ್ಷೆ ರಜನಿ ವಿ. ಪೈ ಹೇಳಿದರು.
ಉಡುಪಿ ಶ್ರೀಕೃಷ್ಣಮಠ ಪರ್ಯಾಯ ಪಲಿಮಾರು ಮಠ, ಪುತ್ತೂರು ಸಾಹಿತ್ಯ ವೇದಿಕೆ ಮತ್ತು ಟೈಮ್ಸ್ ಆಫ್ ಕುಡ್ಲ ಹಾಗೂ ಕಥಾಬಿಂದು ಪ್ರಕಾಶನದ ಸಹಯೋಗದೊಂದಿಗೆ ಕೃಷ್ಣಮಠದ ರಾಜಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ವಿಶ್ವ ಬಹುಭಾಷಾ ಕವಿ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಲಿಪಿ ಇಲ್ಲದೇ ಭಾಷೆ, ಸಾಹಿತ್ಯ ಬೆಳೆಯುವುದಿಲ್ಲ ಎನ್ನುವುದು ಕೇವಲ ಭ್ರಮೆ. ಕೊಂಕಣಿ ಭಾಷೆಗೆ ಲಿಪಿ ಇಲ್ಲ. ಆದರೂ ಅದು ದೊಡ್ಡಮಟ್ಟದಲ್ಲಿ ಬೆಳೆದಿದೆ. ನಾವು ಭಾಷೆಯ ಮೇಲೆ ಪ್ರೀತಿ, ಅಭಿಮಾನ ಹೊಂದಬೇಕು. ಇದರಿಂದ ಭಾಷೆ ಬೆಳೆಯುವುದರ ಜತೆಗೆ ನಾವು ಬೆಳೆಯುತ್ತೇವೆ ಎಂದರು.
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸದಸ್ಯ, ಅಳುಪ ರಾಜವಂಶಸ್ಥ ಡಾ. ಆಕಾಶ್‌ರಾಜ್ ಮಾತನಾಡಿ, ಜನರ ಭಾವನೆ ಹಾಗೂ ರಾಜಕೀಯ ನಾಯಕರು ಇಚ್ಛಾಶಕ್ತಿ ತೋರಿದರೆ ತುಳು ಭಾಷೆಯನ್ನು ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರಿಸಬಹುದು. ಆದರೆ ಸದ್ಯ ಈ ನಿಟ್ಟಿನಲ್ಲಿ ಜನರ ಭಾವನಾತ್ಮಕತೆ ಹಾಗೂ ರಾಜಕೀಯ ನಾಯಕರ ಇಚ್ಛಾಶಕ್ತಿ ಕೊರತೆ ಎದ್ದು ಕಾಣುತ್ತದೆ ಎಂದರು.
ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರ್ಪಡೆಗೊಂಡ 22 ಭಾಷೆಗಳಲ್ಲಿ 18 ಉತ್ತರ ಭಾರತ ಹಾಗೂ 4 ದಕ್ಷಿಣ ಭಾರತ ಭಾಷೆಗಳಾಗಿವೆ. ಆದರೆ ಈ ಭಾಷೆಗಳಿಗಿಂತ ಪ್ರಾಚೀನವಾದ ತುಳುವಿಗೆ ಸೂಕ್ತ ಸ್ಥಾನಮಾನ ಸಿಕ್ಕಿಲ್ಲ. ತುಳುವಿಗೆ ಲಿಪಿ ಇದೆ. ಇದಕ್ಕೆ ಪೂರಕವಾಗಿರುವ ಸಾಕಷ್ಟು ದಾಖಲೆ, ಶಾಸನಗಳಿವೆ. ಆದರೂ ತುಳುವಿಗೆ ಸ್ಥಾನಮಾನ ಸಿಗದಿರುವುದು ದುರದೃಷ್ಟಕರ ಎಂದು ಬೇಸರ ವ್ಯಕ್ತಪಡಿಸಿದರು.
ತುಳು ವರ್ಲ್ಡ್ ಅಧ್ಯಕ್ಷ ಡಾ. ರಾಜೇಶ್ ಆಳ್ವ ಬದಿಯಡ್ಕ ಮಾತನಾಡಿ, ತುಳು ಎಂದರೆ ಅದು ಭಾಷೆ ಮಾತ್ರವಲ್ಲ, ನಮ್ಮ ಸಂಸ್ಕೃತಿಯ ಪ್ರತೀಕ. ಭಾಷೆಗಳ ನಡುವೆ ಸ್ಪರ್ಧೆ, ಸಂಕುಚಿತ ಭಾವನೆ ಬೇಡ. ಭಾಷಾ ವೈವಿಧ್ಯತೆಯೊಂದಿಗೆ ಏಕತೆ ಇರಲಿ ಎಂದು ಅಭಿಪ್ರಾಯಪಟ್ಟರು.
ಪರ್ಯಾಯ ಪಲಿಮಾರು ಮಠದ ವಿದ್ಯಾಧೀಶ ಸ್ವಾಮೀಜಿ ಸಮ್ಮೇಳನ ಉದ್ಘಾಟಿಸಿ ಆಶೀರ್ವಚನ ನೀಡಿದರು. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸದಸ್ಯೆ ತಾರಾ ಉಮೇಶ್ ಆಚಾರ್ಯ, ಆದಿಭಾಸ್ಕರ್ ಕರಂಬಳ್ಳಿ ಹಾಗೂ ಡಾ. ಆಕಾಶ್‌ರಾಜ್ ಅವರನ್ನು ಸನ್ಮಾನಿಸಲಾಯಿತು.
ಸಾಹಿತಿ ರೇವಣ್ಣ ಬಳ್ಳಾರಿ, ಸಾಹಿತಿ ಶಾಂತಾ ಕುಂಟಿನಿ, ಕಾದಂಬರಿಕಾರ ಕೌಂಡಿನ್ಯ, ಉದ್ಯಮಿಗಳಾದ ಹಫೀಜ್ ರೆಹಮಾನ್, ದಿವಾಕರ ಸನಿಲ್, ರಾಮಕೃಷ್ಣ ನಾಯಕ್, ಉಪಸ್ಥಿತರಿದ್ದರು.
ಲೇಖಕ ಪಿ.ವಿ. ಪ್ರದೀಪ್ ಕುಮಾರ್ ಸ್ವಾಗತಿಸಿದರು. ಪುತ್ತೂರು ಸಾಹಿತ್ಯ ವೇದಿಕೆ ಸ್ಥಾಪಕಾಧ್ಯಕ್ಷ ಗೋಪಾಲ ಕೃಷ್ಣ ಭಟ್ ಕಟ್ಟತ್ತಿಲ ಪ್ರಾಸ್ತಾವಿಕವಾಗಿ ಮಾತನಾಡಿದರು.
ಶ್ರೀಕೃಷ್ಣ ಶಾಸ್ತ್ರೀ ಪುತ್ತೂರು ವಂದಿಸಿದರು. ಯಶೋಧಾ ಕೇಶವ ಕಾರ್ಯಕ್ರಮ ನಿರೂಪಿಸಿದರು.
ತುಳು ಭಾಷೆಯ ಮಾನ್ಯತೆಗೆ ಸಹಕರಿಸಿ:
ತುಳುವವರು ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಕನ್ನಡ ಭಾಷೆಯನ್ನು ಬೆಳೆಸಿದ್ದಾರೆ. ನಮ್ಮ ನಡುವೆ ಸಹೋದರತ್ವದ ಭಾವನೆ ಇದೆ. ಆದರೆ ತುಳುವರು ಕನ್ನಡವನ್ನು ಬೆಳೆಸಿದಷ್ಟು ಕನ್ನಡಿಗರು ತುಳು ಭಾಷೆಯನ್ನು ಬೆಳೆಸಿಲ್ಲ. ಈ ಸಲುವಾಗಿ 2020ರಲ್ಲಿ ನಡೆಯುವ ಜನಗಣತಿ ವೇಳೆ ತುಳು ಮಾತೃಭಾಷಿಗರು ಭಾಷಾ ವಿಭಾಗದಲ್ಲಿ ತುಳು ಎಂದು ನಮೂದಿಸಬೇಕು. ಇತರರು ವ್ಯವಹಾರಿಕ ಭಾಷೆಯನ್ನಾಗಿ ತುಳು ಭಾಷೆಯೆಂದು ಉಲ್ಲೇಖ ಮಾಡಬೇಕೆಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸದಸ್ಯ ಡಾ. ಆಕಾಶ್‌ರಾಜ್ ಸಲಹೆ ನೀಡಿದರು.