ಉದ್ಯಾವರ: ಚರಂಡಿಗೆ ಸ್ಲ್ಯಾಬ್ ಇಲ್ಲದೆ ಅಪಾಯ: ವಾಹನ ಸವಾರರ ಪರದಾಟ

ಉಡುಪಿ: ಉದ್ಯಾವರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಂಪಿಗೆನಗರ ಮುಖ್ಯ ರಸ್ತೆಯ ಬದಿಯ ಚರಂಡಿಗೆ ಅಳವಡಿಸಿದ್ದ ಸ್ಲ್ಯಾಬ್‌ಗಳನ್ನು ತೆರವುಗೊಳಿಸಿರುವುದರಿಂದ ವಾಹನ ಸವಾರರು ಹಾಗೂ ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿದೆ.

ಈ ರಸ್ತೆಯಲ್ಲಿರುವ ಕಟ್ಟಡದಲ್ಲಿ ಮೆಸ್ಕಾಂ ಕಚೇರಿ ಕಾರ್ಯನಿರ್ವಹಿಸುತ್ತಿದ್ದು, ಪ್ರತಿದಿನ ನೂರಾರು ಗ್ರಾಹಕರು ಆಗಮಿಸುತ್ತಾರೆ. ಚರಂಡಿ ತೆರೆದಿರುವ ಬಗ್ಗೆ ಅರಿವಿಲ್ಲದೆ ಹಲವು ವಾಹನಗಳು ಹೊಂಡಕ್ಕೆ ಬಿದ್ದು ಸವಾರರಿಗೆ ತೊಂದರೆಯಾಗುತ್ತಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಮಲ್ಪೆಯಿಂದ ಉದ್ಯಾವರ ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಯಾಗಿರುವುದರಿಂದ ಪ್ರತಿದಿನ ಸಾವಿರಾರು ವಾಹನಗಳು ಸಂಚರಿಸುತ್ತವೆ. ರಸ್ತೆಯ ಬದಿಯಲ್ಲಿ ಹುಲ್ಲು ಬೆಳೆದು ನಿಂತಿರುವುದು ಹಾಗೂ ಚರಂಡಿಯ ಮೇಲಿನ ಸ್ಲ್ಯಾಬ್‌ಗಳನ್ನು ತೆರವುಗೊಳಿಸಿರುವುದರಿಂದ ರಸ್ತೆ ಮತ್ತು ಚರಂಡಿಯ ಗಡಿ ಗುರುತಿಸುವುದೇ ಕಷ್ಟವಾಗಿದೆ.

ರಸ್ತೆಯ ಬದಿಯ ತೆರೆದ ಚರಂಡಿಯಿಂದ ಯಾವುದೇ ಸಂದರ್ಭದಲ್ಲಿ ಅಪಘಾತ ಸಂಭವಿಸುವ ಸಾಧ್ಯತೆ ಇದ್ದು, ಪಂಚಾಯಿತಿ ಕೂಡಲೇ ಸ್ಥಳ ಪರಿಶೀಲಿಸಿ ಚರಂಡಿಗೆ ಸ್ಲ್ಯಾಬ್ ಅಳವಡಿಸಿ ಸಮಸ್ಯೆ ಪರಿಹರಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.