ಪತ್ರಕರ್ತರು ಆರೋಗ್ಯದ ಕಡೆ ಗಮನ ಹರಿಸಬೇಕು: ಡಾ. ಸುಶೀಲ್ ಜತ್ತನ್ನ

ಉಡುಪಿ: ಪತ್ರಕರ್ತರು ಸದಾ ಒತ್ತಡದಲ್ಲಿ ಕಾರ್ಯನಿರ್ವಹಿಸುವುದರಿಂದ ಆರೋಗ್ಯದ ಕಡೆಗೆ ಹೆಚ್ಚಿನ ಗಮನ ನೀಡಲು ಸಾಧ್ಯವಾಗುತ್ತಿಲ್ಲ. ಅಸಮರ್ಪಕ ಆಹಾರ ಪದ್ಧತಿ ಹಾಗೂ ವ್ಯಾಯಾಮದ ಕೊರತೆಯಿಂದ ಅನಾರೋಗ್ಯಕ್ಕೆ ತುತ್ತಾಗುವ ಸಾಧ್ಯತೆ ಇದೆ. ಹೀಗಾಗಿ ಪತ್ರಕರ್ತರಿಗೆ ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವುದು ಅಗತ್ಯ ಎಂದು ಲೋಂಬಾರ್ಡ್ ಮೆಮೋರಿಯಲ್ (ಮಿಷನ್) ಆಸ್ಪತ್ರೆಯ ನಿರ್ದೇಶಕ ಡಾ. ಸುಶೀಲ್ ಜತ್ತನ್ನ ಹೇಳಿದರು.

ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಅಮೃತ್ ಡಯಾಗ್ನಸ್ಟಿಕ್ ಸೆಂಟರ್ ಸಹಯೋಗದಲ್ಲಿ ಸಂಘದ ಸದಸ್ಯರಿಗಾಗಿ ಆಯೋಜಿಸಿರುವ ನಾಲ್ಕು ದಿನಗಳ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಮಂಗಳವಾರ ಉದ್ಘಾಟಿಸಿ ಅವರು ಮಾತನಾಡಿದರು.

ಜೀವನಶೈಲಿಯಲ್ಲಿ ಬದಲಾವಣೆ ಮಾಡಿಕೊಳ್ಳಬೇಕು. ನಿಯಮಿತವಾಗಿ ಆಹಾರ ಸೇವಿಸುವುದರ ಜತೆಗೆ ವ್ಯಾಯಾಮಕ್ಕೆ ಆದ್ಯತೆ ನೀಡಬೇಕು. ಇದರಿಂದ ಮಧುಮೇಹ, ರಕ್ತದೊತ್ತಡ ಸೇರಿದಂತೆ ಹಲವು ಕಾಯಿಲೆಗಳಿಂದ ದೂರವಿರಬಹುದು. ಪತ್ರಕರ್ತರು ಆರೋಗ್ಯದ ಬಗ್ಗೆ ಕಾಳಜಿ ವಹಿಸಿದರೆ ಇನ್ನಷ್ಟು ಉತ್ಸಾಹದಿಂದ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತದೆ ಎಂದರು.

ಅಮೃತ್ ಡಯಾಗ್ನಸ್ಟಿಕ್ ಸೆಂಟರ್‌ನ ಮುಖ್ಯಸ್ಥ ಸತೀಶ್ ನಾಯಕ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಾಮಾಜಿಕ ಕಾರ್ಯಕರ್ತ ನಿತ್ಯಾನಂದ ಒಳಕಾಡು, ಪತ್ರಿಕಾ ಭವನ ಸಮಿತಿ ಸಂಚಾಲಕ ಅಂಕಿತ್ ಶೆಟ್ಟಿ, ಜಿಲ್ಲಾ ಸಂಘದ ಕೋಶಾಧಿಕಾರಿ ಹರೀಶ್ ಕುಂದರ್ ಉಪಸ್ಥಿತರಿದ್ದರು.

ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಸುಬ್ರಹ್ಮಣ್ಯ ಜಿ. ಕುರ್ಯ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ನಝೀರ್ ಪೊಲ್ಯ ವಂದಿಸಿದರು. ಕಾಪು ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಪುಂಡಲೀಕ ಮರಾಠೆ ಕಾರ್ಯಕ್ರಮ ನಿರೂಪಿಸಿದರು.

ಶಿಬಿರವು ಆ.21ರವರೆಗೆ ನಡೆಯಲಿದ್ದು, ಸಂಘದ ಸದಸ್ಯರು ಗುರುತಿನ ಚೀಟಿ ತೋರಿಸಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬಹುದು.