ನವದೆಹಲಿ: ರಾಷ್ಟ್ರೀಯ ಕ್ರೀಡಾ ಪ್ರಶಸ್ತಿಗಳ ಪಟ್ಟಿಯನ್ನು ಕೇಂದ್ರ ಕ್ರೀಡಾ ಸಚಿವಾಲಯ ಪ್ರಕಟಿಸಿದ್ದು, ಈ ಬಾರಿ 17 ಕ್ರೀಡಾಪಟುಗಳಿಗೆ ಪ್ರತಿಷ್ಠಿತ ಅರ್ಜುನ ಪ್ರಶಸ್ತಿ ನೀಡಲು ಅಂತಿಮ ಅನುಮೋದನೆ ನೀಡಲಾಗಿದೆ. ಆಯ್ಕೆ ಸಮಿತಿ ಶಿಫಾರಸು ಮಾಡಿದ್ದ ಪಟ್ಟಿಯನ್ನು ಸುಮಾರು ಆರು ತಿಂಗಳ ಬಳಿಕ ಮರುಪರಿಶೀಲಿಸಿದ ಸಚಿವಾಲಯ, ಪ್ರಶಸ್ತಿಯ ಘನತೆ ಹಾಗೂ ಅರ್ಹತೆಯನ್ನು ಪರಿಗಣಿಸಿ 24 ಹೆಸರುಗಳ ಪೈಕಿ 17 ಮಂದಿಯನ್ನು ಅಂತಿಮಗೊಳಿಸಿದೆ.
ಇದೇ ವೇಳೆ, ಈ ಬಾರಿ ಮೇಜರ್ ಧ್ಯಾನ್‌ಚಂದ್ ಖೇಲ್ ರತ್ನ ಪ್ರಶಸ್ತಿಗೆ ಯಾವುದೇ ಕ್ರೀಡಾಪಟುವನ್ನು ಆಯ್ಕೆ ಮಾಡಲಾಗಿಲ್ಲ. ಖೇಲ್ ರತ್ನಕ್ಕೆ ಹಾಕಿ ಆಟಗಾರ ಹಾರ್ದಿಕ್ ಸಿಂಗ್ ಅವರ ಹೆಸರನ್ನು ಸುಪ್ರೀಂ ಕೋರ್ಟ್‌ನ ಮಾಜಿ ನ್ಯಾಯಮೂರ್ತಿ ಅರುಣ್ ಕುಮಾರ್ ಮಿಶ್ರಾ ನೇತೃತ್ವದ ಸಮಿತಿ ಶಿಫಾರಸು ಮಾಡಿತ್ತು. ಆದರೆ ಅಂತಿಮ ಪಟ್ಟಿಯಿಂದ ಅವರ ಹೆಸರನ್ನು ಕೈಬಿಡಲಾಗಿದೆ.
17 ಕ್ರೀಡಾಪಟುಗಳಿಗೆ ಅರ್ಜುನ ಪ್ರಶಸ್ತಿ
ಅರ್ಜುನ ಪ್ರಶಸ್ತಿಗೆ ಆಯ್ಕೆಯಾದ ಕ್ರೀಡಾಪಟುಗಳ ಪಟ್ಟಿ ಹೀಗಿದೆ:
- ತೇಜಸ್ವಿನ್ ಶಂಕರ್ – ಅಥ್ಲೆಟಿಕ್ಸ್
- ಪ್ರಿಯಾಂಕಾ ಗೋಸ್ವಾಮಿ – ಅಥ್ಲೆಟಿಕ್ಸ್
- ಮುಹಮ್ಮದ್ ಅಜ್ಮಲ್ – ಅಥ್ಲೆಟಿಕ್ಸ್
- ನರೇಂದರ್ – ಬಾಕ್ಸಿಂಗ್
- ವಿದಿತ್ ಗುಜರಾತಿ – ಚೆಸ್
- ದಿವ್ಯಾ ದೇಶಮುಖ್ – ಚೆಸ್
- ಧನುಷ್ ಶ್ರೀಕಾಂತ್ – ಕಿವುಡರ ಶೂಟಿಂಗ್
- ರಾಜ್‌ಕುಮಾರ್ ಪಾಲ್ – ಹಾಕಿ
- ಲಾಲ್ರೆಮ್ಸಿಯಾಮಿ – ಹಾಕಿ
- ಸುರ್ಜಿತ್ – ಕಬಡ್ಡಿ
- ಪೂಜಾ – ಕಬಡ್ಡಿ
- ರುದ್ರಾಂಶ್ ಖಂಡೇಲ್‌ವಾಲ್ – ಪ್ಯಾರಾ ಶೂಟಿಂಗ್
- ಏಕ್ತಾ ಭ್ಯಾನ್ – ಪ್ಯಾರಾ ಅಥ್ಲೆಟಿಕ್ಸ್
- ಅರವಿಂದ್ ಸಿಂಗ್ – ರೋಯಿಂಗ್
- ಅಖಿಲ್ ಶಿಯೋರಾನ್ – ಶೂಟಿಂಗ್
- ತ್ರೀಸಾ ಜೋಲಿ – ಬ್ಯಾಡ್ಮಿಂಟನ್
- ಗಾಯತ್ರಿ ಗೋಪಿಚಂದ್ – ಬ್ಯಾಡ್ಮಿಂಟನ್
ಜೀವಮಾನ ಸಾಧನೆಗೂ ಅರ್ಜುನ ಪ್ರಶಸ್ತಿ
ಫುಟ್‌ಬಾಲ್ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆ ಮಾಡಿದ ಐ. ಅರುಮೈನಾಯಗಂ ಅವರಿಗೆ ಅರ್ಜುನ ಪ್ರಶಸ್ತಿ (ಜೀವಮಾನ ಸಾಧನೆ) ನೀಡಲಾಗಿದೆ. ಅವರು 1962ರ ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನದ ಪದಕ ಗೆದ್ದ ಭಾರತೀಯ ಫುಟ್‌ಬಾಲ್ ತಂಡದ ಸದಸ್ಯರಾಗಿದ್ದರು.
ದ್ರೋಣಾಚಾರ್ಯ ಪ್ರಶಸ್ತಿಗೂ ಆಯ್ಕೆ
ತರಬೇತುದಾರರಿಗೆ ನೀಡಲಾಗುವ ದ್ರೋಣಾಚಾರ್ಯ ಪ್ರಶಸ್ತಿಯ ಸಾಮಾನ್ಯ ವಿಭಾಗದಲ್ಲಿ ಚೋಟೆ ಲಾಲ್ ಯಾದವ್ (ಬಾಕ್ಸಿಂಗ್), ಪರ್ವೀರ್ ಸಿಂಗ್ ಹಾಗೂ ನೇಹಾ ಚವಾಣ್ ಆಯ್ಕೆಯಾಗಿದ್ದಾರೆ.
ಜೀವಮಾನ ಸಾಧನೆ ವಿಭಾಗದಲ್ಲಿ ಧರ್ಮೇಂದ್ರ ಯಾದವ್ ಹಾಗೂ ವೀರೇಂದ್ರ ಕುಮಾರ್ ಅವರಿಗೆ ದ್ರೋಣಾಚಾರ್ಯ ಪ್ರಶಸ್ತಿ ನೀಡಲಾಗುತ್ತಿದೆ.
ಕ್ರಿಕೆಟಿಗರಿಗೆ ಮತ್ತೆ ನಿರಾಸೆ
1991ರಲ್ಲಿ ರಾಷ್ಟ್ರೀಯ ಕ್ರೀಡಾ ಪ್ರಶಸ್ತಿಗಳು ಆರಂಭವಾದ ಬಳಿಕ ಇದೇ ಮೊದಲ ಬಾರಿಗೆ ಪ್ರಶಸ್ತಿಗಳ ಘೋಷಣೆ ಅತ್ಯಂತ ತಡವಾಗಿ ನಡೆದಿದೆ ಎನ್ನಲಾಗಿದೆ. ಈ ಬಾರಿಯ ಪಟ್ಟಿಯಲ್ಲೂ ಯಾವುದೇ ಕ್ರಿಕೆಟಿಗರಿಗೆ ಸ್ಥಾನ ಸಿಕ್ಕಿಲ್ಲ. 2023ರಲ್ಲಿ ಮೊಹಮ್ಮದ್ ಶಮಿ ಅವರಿಗೆ ಅರ್ಜುನ ಪ್ರಶಸ್ತಿ ದೊರೆತ ಬಳಿಕ ಯಾವುದೇ ಕ್ರಿಕೆಟಿಗರು ಈ ಗೌರವಕ್ಕೆ ಆಯ್ಕೆಯಾಗಿಲ್ಲ.
ಖೇಲ್ ರತ್ನ ಪ್ರಶಸ್ತಿಯು ₹25 ಲಕ್ಷ ನಗದು ಬಹುಮಾನ ಹಾಗೂ ಸ್ಮರಣಿಕೆಯನ್ನು ಒಳಗೊಂಡಿದ್ದರೆ, ಅರ್ಜುನ ಪ್ರಶಸ್ತಿಗೆ ₹15 ಲಕ್ಷ ನಗದು ಬಹುಮಾನ ಮತ್ತು ಸ್ಮರಣಿಕೆ ನೀಡಲಾಗುತ್ತದೆ.















