ಉಡುಪಿ: ನಾಗರಪಂಚಮಿ ಹಬ್ಬದ ಆಸುಪಾಸಿನಲ್ಲಿ ಜಿಲ್ಲೆಯಲ್ಲಿ ಮಳೆ ಚುರುಕುಗೊಂಡಿದ್ದು, ಆಗಸ್ಟ್ ತಿಂಗಳಲ್ಲಿ ಕೊಂಚ ನೆಮ್ಮದಿ ತಂದಿದೆ. ಜಿಲ್ಲೆಯ ಹಲವೆಡೆ ಮಳೆಯ ಪರಿಣಾಮ ಸಣ್ಣಪುಟ್ಟ ಹಾನಿ ಸಂಭವಿಸಿದೆ.
ಹೆಬ್ರಿ ತಾಲೂಕಿನ ನಾಡ್ಪಾಲು ಗ್ರಾಮದ ಬ್ರಹ್ಮಸ್ಥಾನದ ಬಳಿಯ ಚಾಂತಾರು ಎಂಬಲ್ಲಿ ವಾಸ್ತವ್ಯದ ಮನೆಯ ಹಿಂಭಾಗದಲ್ಲಿ ಮಣ್ಣು ಕುಸಿತ ಸಂಭವಿಸಿದೆ. ಘಟನೆಯ ಮಾಹಿತಿ ತಿಳಿದು ಸ್ಥಳಕ್ಕೆ ಜಿಲ್ಲಾಧಿಕಾರಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಮಳೆ ಮುಂದುವರಿಯುತ್ತಿರುವ ಹಿನ್ನೆಲೆಯಲ್ಲಿ ಗುಡ್ಡ ಪ್ರದೇಶ ಹಾಗೂ ಮಣ್ಣು ಕುಸಿತ ಸಂಭವಿಸುವ ಸಾಧ್ಯತೆ ಇರುವ ಪ್ರದೇಶಗಳ ನಿವಾಸಿಗಳು ಮುನ್ನೆಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ.















