ನ್ಯೂಯಾರ್ಕ್: ಕೋವಿಡ್ ಪೀಕ್ ಸಮಯದಲ್ಲಿ ಕೇವಲ ಮೂರು ನಿಮಿಷಗಳ Zoom ಕಾಲ್‌ನಲ್ಲಿ 900ಕ್ಕೂ ಹೆಚ್ಚು ಉದ್ಯೋಗಿಗಳನ್ನು ಏಕಾಏಕಿ ವಜಾಗೊಳಿಸಿ ಜಾಗತಿಕ ಮಟ್ಟದಲ್ಲಿ ಸುದ್ದಿಯಾಗಿದ್ದ ಭಾರತ ಮೂಲದ ಉದ್ಯಮಿ ವಿಶಾಲ್ ಗರ್ಗ್ ಅವರಿಗೆ ಇದೀಗ ಅವರದ್ದೇ ಕಂಪನಿ ಬಿಗ್ ಶಾಕ್ ನೀಡಿದೆ. ಅಮೆರಿಕದ ‘ಬೆಟರ್ ಹೋಮ್ & ಫೈನಾನ್ಸ್’ ಕಂಪನಿಯ ಸಿಇಒ ಆಗಿದ್ದ ವಿಶಾಲ್ ಗರ್ಗ್ ಅವರನ್ನು ಕಂಪನಿಯ ಆಡಳಿತ ಮಂಡಳಿಯೇ ಹುದ್ದೆಯಿಂದ ವಜಾಗೊಳಿಸಿದೆ.
ವಿಶಾಲ್ ಗರ್ಗ್ ಅವರ ನಿರ್ಧಾರ ಕೈಗೊಳ್ಳುವ ಸಾಮರ್ಥ್ಯ, ಸ್ವಭಾವ ಹಾಗೂ ನಂಬಿಕಾರ್ಹತೆಯ ಬಗ್ಗೆ ಗಂಭೀರ ಕಳವಳ ವ್ಯಕ್ತಪಡಿಸಿರುವ ಕಂಪನಿಯ ಆಡಳಿತ ಮಂಡಳಿ, ಅವರನ್ನು ಹುದ್ದೆಯಿಂದ ವಜಾಗೊಳಿಸಲು ಸರ್ವಾನುಮತದಿಂದ ನಿರ್ಧರಿಸಿದೆ.
ವಿಶಾಲ್ ಗರ್ಗ್ ಅವರ ನಾಯಕತ್ವದಲ್ಲಿ ಕಂಪನಿಯು 2022ರಿಂದ ಸುಮಾರು 1.5 ಬಿಲಿಯನ್ ಡಾಲರ್ (₹14,000 ಕೋಟಿಗೂ ಹೆಚ್ಚು) ನಿವ್ವಳ ನಷ್ಟ ಅನುಭವಿಸಿದೆ ಎನ್ನಲಾಗಿದೆ. ಇದೇ ಅವಧಿಯಲ್ಲಿ ಕಂಪನಿಯ ಷೇರು ಮೌಲ್ಯ ಶೇ.90ಕ್ಕೂ ಹೆಚ್ಚು ಕುಸಿತ ಕಂಡಿದೆ.
2021ರಲ್ಲಿ 900 ಉದ್ಯೋಗಿಗಳಿಗೆ ಗೇಟ್‌ಪಾಸ್
2021ರ ಡಿಸೆಂಬರ್‌ನಲ್ಲಿ ಕ್ರಿಸ್‌ಮಸ್‌ಗೆ ಕೆಲವೇ ದಿನಗಳ ಮುನ್ನ ವಿಶಾಲ್ ಗರ್ಗ್ ಕೇವಲ ಮೂರು ನಿಮಿಷಗಳ Zoom ವೆಬಿನಾರ್ ಮೂಲಕ 900ಕ್ಕೂ ಹೆಚ್ಚು ಉದ್ಯೋಗಿಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ವಜಾಗೊಳಿಸಿದ್ದರು. ಕೋವಿಡ್ ಕಾಲದಲ್ಲಿ ನಡೆದ ಈ ಸಾಮೂಹಿಕ ವಜಾ ಜಾಗತಿಕ ಮಟ್ಟದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು.
ಗರ್ಗ್ ಅವರೇ ಕರೆತಂದಿದ್ದ ವ್ಯಕ್ತಿಯಿಂದಲೇ ಉಚ್ಚಾಟನೆ
ಕಂಪನಿಯು ಇದೀಗ ಡೇನಿಯಲ್ ಲೂಯಿಸ್ ಅವರನ್ನು ಹಂಗಾಮಿ ಸಿಇಒ ಆಗಿ ನೇಮಿಸಿದೆ. ವಿಶೇಷವೆಂದರೆ, ಡೇನಿಯಲ್ ಲೂಯಿಸ್ ಅವರನ್ನು ಕಂಪನಿಯೊಳಗೆ ಕರೆತಂದಿದ್ದೇ ವಿಶಾಲ್ ಗರ್ಗ್ ಎನ್ನಲಾಗಿದೆ.
Zoom ಕಾಲ್‌ನಲ್ಲಿ ನಡೆದ ಸಾಮೂಹಿಕ ವಜಾ ಘಟನೆಯ ಬಳಿಕ ಕಂಪನಿಯ ಇಮೇಜ್‌ಗೆ ಹಾನಿಯಾದ ಸಂದರ್ಭದಲ್ಲಿ ಲೂಯಿಸ್ ಅವರು ಸಾರ್ವಜನಿಕವಾಗಿ ಕಂಪನಿಯ ಪರ ಸಕಾರಾತ್ಮಕವಾಗಿ ಮಾತನಾಡಿದ್ದರು. ಇದರಿಂದ ವಿಶಾಲ್ ಗರ್ಗ್ ಅವರ ವಿಶ್ವಾಸ ಗಳಿಸಿದ ಅವರು ಬಳಿಕ ನಿರ್ದೇಶಕರ ಮಂಡಳಿಗೂ ಸೇರ್ಪಡೆಯಾಗಿದ್ದರು.
ನಿರ್ದೇಶಕರ ಮಂಡಳಿಗೆ ನೇಮಕಗೊಂಡ ಕೇವಲ ಒಂದು ವಾರದಲ್ಲೇ ಲೂಯಿಸ್ ಅವರು ಇತರ ನಿರ್ದೇಶಕರನ್ನು ವಿಶಾಲ್ ಗರ್ಗ್ ಅವರನ್ನು ಉಚ್ಚಾಟಿಸುವಂತೆ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ವರದಿಯಾಗಿದೆ.
ಕಾನೂನು ಸಮರಕ್ಕೆ ಮುಂದಾದ ಗರ್ಗ್
ಇದೀಗ ತಮ್ಮನ್ನು ಸಿಇಒ ಹುದ್ದೆಯಿಂದ ವಜಾಗೊಳಿಸಿರುವುದನ್ನು ಪ್ರಶ್ನಿಸಿರುವ ವಿಶಾಲ್ ಗರ್ಗ್, ಪ್ರಸಿದ್ಧ ವಕೀಲರನ್ನು ನೇಮಿಸಿಕೊಂಡು ಕಂಪನಿಯ ವಿರುದ್ಧ ಕಾನೂನು ಸಮರ ಆರಂಭಿಸಿದ್ದಾರೆ ಎಂದು ತಿಳಿದುಬಂದಿದೆ.















