ಅಯೋಧ್ಯೆಯಲ್ಲಿ ನಾಲ್ಕು ತಿಂಗಳೊಳಗೆ ಆಕಾಶದೆತ್ತರ ರಾಮಮಂದಿರ ನಿರ್ಮಾಣ: ಅಮಿತ್ ಶಾ

ನವದೆಹಲಿ: ಶ್ರೀರಾಮನ ಜನ್ಮಸ್ಥಳ ಅಯೋಧ್ಯೆಯಲ್ಲಿ ನಾಲ್ಕು ತಿಂಗಳೊಳಗೆ ಆಕಾಶದೆತ್ತರದ ರಾಮ ಮಂದಿರವನ್ನು ನಿರ್ಮಾಣ ಮಾಡಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ತಿಳಿಸಿದ್ದಾರೆ.
ಜಾರ್ಖಂಡ್ ನ ಪಾಕೂರ್ ನಲ್ಲಿ ಚುನಾವಣಾ ಪ್ರಚಾರ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಅಯೋಧ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಅಂತಿಮ ತೀರ್ಪನ್ನು ಪ್ರಕಟಿಸಿದೆ. ಅಲ್ಲಿ ರಾಮಮಂದಿರ ನಿರ್ಮಾಣ ಮಾಡಬೇಕೆಂಬುದು ಶತಮಾನಗಳಿಂದ ಪ್ರತಿಯೊಬ್ಬ ಭಾರತೀಯನ ಬೇಡಿಕೆಯಾಗಿತ್ತು. ಆದರೆ ಈ ಪ್ರಕರಣ ಕಾಂಗ್ರೆಸ್ ನಿಂದಾಗಿ ವಿಳಂಬವಾಯಿತು. ಅಯೋಧ್ಯೆ ವಿವಾದ ಪ್ರಕರಣವನ್ನು ಶೀಘ್ರವೇ ವಿಚಾರಣೆ ನಡೆಸಬೇಕಾದ ಅಗತ್ಯವಿಲ್ಲ ಎಂದು ಕಾಂಗ್ರೆಸ್ ಪರ ವಕೀಲ ಕಪಿಲ್ ಸಿಬಲ್ ಸುಪ್ರೀಂನಲ್ಲಿ ಮನವಿ ಮಾಡಿಕೊಂಡಿದ್ದರು ಎಂದು ಹೇಳಿದರು.
ನಾನೀಗ ಈ ಮೂಲಕ ಘೋಷಿಸುತ್ತಿದ್ದೇನೆ. ಸುಪ್ರೀಂಕೋರ್ಟ್ ರಾಮಮಂದಿರ ನಿರ್ಮಾಣ ಮಾಡಲು ಆದೇಶ ನೀಡಿದ ದಿನದಿಂದ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಕಾರ್ಯ ತ್ವರಿತವಾಗಿ ನಡೆಯುತ್ತಿದ್ದು, ನಾಲ್ಕು ತಿಂಗಳೊಳಗೆ ಪೂರ್ಣಗೊಳಿಸಲಿದ್ದೇವೆ ಎಂದರು.