ನವದೆಹಲಿ: ಟರ್ಬುಲೆನ್ಸ್ಗೆ ಸಿಲುಕಿ ವಿಮಾನ ತೀವ್ರವಾಗಿ ಕೆಳಕ್ಕೆ ಕುಸಿದಿದ್ದ ಘಟನೆ ಬೆನ್ನಲ್ಲೇ ಏರ್ ಇಂಡಿಯಾ ಮಹತ್ವದ ನಿರ್ಧಾರ ಕೈಗೊಂಡಿದೆ. ಸಂಸ್ಥೆಯ ಎಲ್ಲಾ ಪೈಲಟ್ಗಳಿಗೆ ಮಾದಕ ದ್ರವ್ಯ ಸೇವನೆ ಪರೀಕ್ಷೆ ನಡೆಸಲು ಏರ್ ಇಂಡಿಯಾ ನಿರ್ಧರಿಸಿದೆ.
ಪ್ರಯಾಣಿಕರ ಸುರಕ್ಷತೆ ಹಾಗೂ ವೈಮಾನಿಕ ಭದ್ರತೆಯನ್ನು ಗಮನದಲ್ಲಿಟ್ಟುಕೊಂಡು ಈ ಕ್ರಮ ಕೈಗೊಳ್ಳಲಾಗಿದೆ. ಏರ್ ಇಂಡಿಯಾ ಮತ್ತು ಏರ್ ಇಂಡಿಯಾ ಎಕ್ಸ್ಪ್ರೆಸ್ ಸಂಸ್ಥೆಗಳು ತಮ್ಮ ಪೈಲಟ್ಗಳಿಗೆ ಆಂತರಿಕ ಸಂದೇಶ ರವಾನಿಸಿದ್ದು, ವಿಮಾನಯಾನ ನಿಯಮಗಳ ಅಡಿಯಲ್ಲಿ ಅನುಮತಿಸದ ಯಾವುದೇ ಮಾದಕ ವಸ್ತು ಅಥವಾ ಔಷಧಗಳ ಸೇವನೆ ಕುರಿತು ಸ್ಕ್ರೀನಿಂಗ್ ನಡೆಸಲಾಗುವುದು ಎಂದು ತಿಳಿಸಿವೆ.
ಈ ಪರೀಕ್ಷೆಗಳು ಕಡ್ಡಾಯವಾಗಿದ್ದು, ಆಗಸ್ಟ್ 13ರಿಂದ ಆರಂಭವಾಗಲಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವರ್ಷಕ್ಕೆ ಶೇ.10 ಸಿಬ್ಬಂದಿಗೆ ಪರೀಕ್ಷೆ ಕಡ್ಡಾಯ
ವಿಮಾನಯಾನ ಸಚಿವಾಲಯದ ನಿಯಮಗಳ ಪ್ರಕಾರ, ವಿಮಾನಯಾನ ಸಂಸ್ಥೆಗಳು ಪ್ರತಿವರ್ಷ ತಮ್ಮ ಒಟ್ಟು ವಿಮಾನ ಸಿಬ್ಬಂದಿಯ ಕನಿಷ್ಠ ಶೇ.10ರಷ್ಟು ಮಂದಿಗೆ ಸೈಕೋಆಕ್ಟಿವ್ ಮಾದಕ ದ್ರವ್ಯ ಸೇವನೆ ಪರೀಕ್ಷೆ ನಡೆಸುವುದು ಕಡ್ಡಾಯವಾಗಿದೆ.
ವಿಮಾನಯಾನ ಕ್ಷೇತ್ರದ ಸುರಕ್ಷತಾ ಮಾನದಂಡಗಳನ್ನು ಮತ್ತಷ್ಟು ಬಲಪಡಿಸುವುದು ಹಾಗೂ ಪ್ರಯಾಣಿಕರು ಮತ್ತು ಇತರ ಪಾಲುದಾರರಲ್ಲಿ ವಿಶ್ವಾಸ ಮೂಡಿಸುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಏರ್ ಇಂಡಿಯಾ ತಿಳಿಸಿದೆ.
300 ಅಡಿ ಕೆಳಕ್ಕೆ ಕುಸಿದಿದ್ದ ವಿಮಾನ
ಆಗಸ್ಟ್ 4ರಂದು ಫುಕೆಟ್ನಿಂದ ದೆಹಲಿಗೆ ತೆರಳುತ್ತಿದ್ದ ಏರ್ ಇಂಡಿಯಾದ A320neo ವಿಮಾನವು ಹಾರಾಟದ ಮಧ್ಯೆ ತೀವ್ರ ಟರ್ಬುಲೆನ್ಸ್ಗೆ ಸಿಲುಕಿತ್ತು. ಈ ವೇಳೆ ವಿಮಾನವು ಏಕಾಏಕಿ ಸುಮಾರು 300 ಅಡಿ ಕೆಳಕ್ಕೆ ಕುಸಿದಿತ್ತು ಎನ್ನಲಾಗಿದೆ.
ಈ ಘಟನೆಯ ಬಳಿಕ ನಡೆಸಿದ ಪರೀಕ್ಷೆಯಲ್ಲಿ ವಿಮಾನದ ಕ್ಯಾಪ್ಟನ್ ಗಾಂಜಾ ಸೇವಿಸಿರುವುದು ದೃಢಪಟ್ಟಿತ್ತು ಎಂದು ವರದಿಯಾಗಿದೆ. ಈ ಹಿನ್ನೆಲೆಯಲ್ಲಿ ಏರ್ ಇಂಡಿಯಾ ತನ್ನ ಎಲ್ಲಾ ಪೈಲಟ್ಗಳಿಗೆ ಮಾದಕ ದ್ರವ್ಯ ಸೇವನೆ ಪರೀಕ್ಷೆ ನಡೆಸಲು ನಿರ್ಧರಿಸಿದೆ.















