ಬೆಂಗಳೂರು: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಸಿಸಿಬಿ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರ ಬಳಿ ಪತ್ತೆಯಾದ ಮೊಬೈಲ್ ಫೋನ್‌ನಲ್ಲಿ ಹಲವು ಕುತೂಹಲಕಾರಿ ಅಂಶಗಳು ಬೆಳಕಿಗೆ ಬಂದಿವೆ.
ಪತ್ತೆಯಾದ ಮೊಬೈಲ್‌ನಲ್ಲಿ ತಂದೆ ಎಚ್.ಡಿ. ರೇವಣ್ಣ ಅವರ ಮೊಬೈಲ್ ಸಂಖ್ಯೆಯನ್ನು ‘ಶಿವ’ ಎಂಬ ಹೆಸರಿನಲ್ಲಿ ಹಾಗೂ ತಾಯಿ ಭವಾನಿ ರೇವಣ್ಣ ಅವರ ಸಂಖ್ಯೆಯನ್ನು ‘ಪಾರ್ವತಿ’ ಎಂಬ ಹೆಸರಿನಲ್ಲಿ ಸೇವ್ ಮಾಡಿರುವುದು ತನಿಖೆಯಲ್ಲಿ ಪತ್ತೆಯಾಗಿದೆ ಎನ್ನಲಾಗಿದೆ.
ಇದಲ್ಲದೆ, ನೋಟ್‌ಬುಕ್‌ವೊಂದರಲ್ಲಿ ಸುಮಾರು 40 ಮೊಬೈಲ್ ಸಂಖ್ಯೆಗಳು ಹಾಗೂ ಹಲವು ಆಪ್ತರು ಮತ್ತು ಅಪರಿಚಿತ ವ್ಯಕ್ತಿಗಳ ಫೋನ್ ನಂಬರ್‌ಗಳನ್ನು ಬರೆದಿರುವುದು ಪತ್ತೆಯಾಗಿದೆ ಎಂದು ತಿಳಿದುಬಂದಿದೆ.
ಮೊಬೈಲ್ ಬಗ್ಗೆ ಪ್ರಜ್ವಲ್‌ರಿಂದ ವಿಭಿನ್ನ ಹೇಳಿಕೆ
ಸಿಸಿಬಿ ಪೊಲೀಸರು ಜೈಲಿನಲ್ಲಿ ದಾಳಿ ನಡೆಸಿದ ವೇಳೆ ಹಾಸಿಗೆ ಕೆಳಗೆ ಮೊಬೈಲ್ ಫೋನ್ ಪತ್ತೆಯಾಗಿತ್ತು. ಈ ವೇಳೆ ಪ್ರಜ್ವಲ್ ರೇವಣ್ಣ ಮೊದಲಿಗೆ ಅದು ತಮ್ಮದೇ ಮೊಬೈಲ್ ಎಂದು ಹೇಳಿಕೊಂಡಿದ್ದರು ಎನ್ನಲಾಗಿದೆ. ಬಳಿಕ ಪೊಲೀಸರು ಮೊಬೈಲ್‌ನ ಪಾಸ್‌ವರ್ಡ್ ತೆರೆಯುವಂತೆ ಸೂಚಿಸಿದಾಗ, ಅದು ತಮ್ಮ ಮೊಬೈಲ್ ಅಲ್ಲ ಎಂದು ಹೇಳಿಕೆ ಬದಲಿಸಿದ್ದಾರೆ.
ಮನೆಯವರೊಂದಿಗೆ ಮಾತನಾಡಲು ಕೆಲವೊಮ್ಮೆ ಈ ಮೊಬೈಲ್ ಬಳಸುತ್ತಿದ್ದೆ ಎಂದು ಪ್ರಜ್ವಲ್ ಪೊಲೀಸರಿಗೆ ತಿಳಿಸಿದ್ದರು ಎನ್ನಲಾಗಿದೆ. ಆದರೆ, ಜೈಲಿನೊಳಗೆ ಮೊಬೈಲ್ ತಂದುಕೊಟ್ಟವರು ಯಾರು ಎಂಬುದನ್ನು ಈವರೆಗೂ ಬಹಿರಂಗಪಡಿಸಿಲ್ಲ ಎಂದು ತಿಳಿದುಬಂದಿದೆ.
ಸದ್ಯ ಪತ್ತೆಯಾಗಿರುವ ಮೊಬೈಲ್ ಫೋನ್ ಹಾಗೂ ಪೆನ್‌ಡ್ರೈವ್ ಅನ್ನು ಪೊಲೀಸರು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ (ಎಫ್‌ಎಸ್‌ಎಲ್) ಕಳುಹಿಸಿದ್ದು, ಅಲ್ಲಿನ ಪರಿಶೀಲನಾ ವರದಿಗಾಗಿ ಕಾಯಲಾಗುತ್ತಿದೆ.
ಜೈಲು ಸಿಬ್ಬಂದಿ ವಿರುದ್ಧ ಕ್ರಮಕ್ಕೆ ಸಿದ್ಧತೆ
ಜೈಲಿನೊಳಗೆ ನಿಷೇಧಿತ ವಸ್ತುಗಳು ಪ್ರವೇಶಿಸಲು ಸಹಕರಿಸಿದ ಆರೋಪದ ಹಿನ್ನೆಲೆಯಲ್ಲಿ ಜೈಲಿನ ಹಿರಿಯ ಅಧಿಕಾರಿಗಳು ಹಾಗೂ ಸಿಬ್ಬಂದಿ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಡಿಜಿಪಿ ಅಲೋಕ್ ಕುಮಾರ್ ಮುಂದಾಗಿದ್ದಾರೆ ಎನ್ನಲಾಗಿದೆ.
ಈ ಸಂಬಂಧ ಜೈಲು ಸಿಬ್ಬಂದಿಗೆ ನೋಟಿಸ್ ಜಾರಿಯಾಗುವ ಸಾಧ್ಯತೆಯಿದ್ದು, ಪ್ರಜ್ವಲ್ ರೇವಣ್ಣ ಅವರಿಗೆ ಜೈಲಿನಲ್ಲಿ ನೀಡಲಾಗುತ್ತಿದ್ದ ವಿಶೇಷ ಸೌಲಭ್ಯಗಳ ಕುರಿತು ತನಿಖೆ ಮತ್ತಷ್ಟು ತೀವ್ರಗೊಂಡಿದೆ.















