ಉಡುಪಿ: ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ಕಾರ್ಕಳ ತಾಲ್ಲೂಕಿನಲ್ಲಿ ಆಯೋಜಿಸಲಾಗಿದ್ದ ಅಖಂಡ ಭಾರತ ಸಂಕಲ್ಪ ದಿನ ಕಾರ್ಯಕ್ರಮಕ್ಕೆ ಮುಖ್ಯ ಭಾಷಣಕಾರರಾಗಿ ಆಗಮಿಸಬೇಕಿದ್ದ ಸಾಮಾಜಿಕ ಸಂಘಟನೆಯ ಕಾರ್ಯಕರ್ತರಿಗೆ ಉಡುಪಿ ಜಿಲ್ಲೆ ಪ್ರವೇಶ ನಿರ್ಬಂಧ ವಿಧಿಸಿರುವ ಜಿಲ್ಲಾಡಳಿತದ ಕ್ರಮವನ್ನು ಹಿಂದೂ ಜಾಗರಣ ವೇದಿಕೆ ಖಂಡಿಸಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ವೇದಿಕೆಯ ಪ್ರಾಂತ ಸಹ ಸಂಚಾಲಕ ಮಹೇಶ್ ಕಡಗದಾಳು, ‘ವಾಕ್ ಸ್ವಾತಂತ್ರ್ಯವನ್ನು ದಮನಿಸುವ ರಾಜ್ಯ ಕಾಂಗ್ರೆಸ್ ಸರ್ಕಾರದ ಮಾನಸಿಕತೆ ಬ್ರಿಟಿಷರ ಮಾನಸಿಕತೆಯನ್ನು ಬಿಂಬಿಸುವಂತಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
‘ಇಂತಹ ಯಾವುದೇ ಬೆದರಿಕೆಗೆ ಹಿಂದೂ ಜಾಗರಣ ವೇದಿಕೆ ಬಗ್ಗುವುದಿಲ್ಲ. ದೇಶದ ಕಾನೂನು ಹಾಗೂ ಸಂವಿಧಾನದ ಆಶಯಗಳಡಿ ಸಾಮಾಜಿಕ ಚಟುವಟಿಕೆಗಳನ್ನು ನಡೆಸುತ್ತಿರುವ ಸಂಘಟನೆಯಾಗಿದೆ.
ಕಾರ್ಯಕರ್ತರಿಗೆ ಮಾನಸಿಕ ಕಿರುಕುಳ ನೀಡಿದರೆ ಜಿಲ್ಲೆಯಾದ್ಯಂತ ಹೋರಾಟ ನಡೆಸಲಾಗುವುದು’ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.















