ಅಕ್ರಮ ಸಾಲದ ಆ್ಯಪ್‌ಗಳು ಸೇರಿದಂತೆ 3,718 ಮೊಬೈಲ್ ಅಪ್ಲಿಕೇಶನ್‌ ಬ್ಯಾನ್!

ನವದೆಹಲಿ: ಬಳಕೆದಾರರನ್ನು ವಂಚಿಸುತ್ತಿದ್ದ ಆರೋಪದ ಹಿನ್ನೆಲೆಯಲ್ಲಿ ಅಕ್ರಮ ಸಾಲದ ಆ್ಯಪ್‌ಗಳು ಸೇರಿದಂತೆ 3,718 ಮೊಬೈಲ್ ಅಪ್ಲಿಕೇಶನ್‌ಗಳನ್ನು ಕೇಂದ್ರ ಸರ್ಕಾರ ನಿರ್ಬಂಧಿಸಿದೆ ಎಂದು ಗೃಹ ವ್ಯವಹಾರಗಳ ರಾಜ್ಯ ಸಚಿವ ಬಂಡಿ ಸಂಜಯ್ ಕುಮಾರ್ ಲೋಕಸಭೆಗೆ ತಿಳಿಸಿದ್ದಾರೆ.

ಈ ವರ್ಷದ ಜೂನ್ 30ರವರೆಗೆ ಭಾರತೀಯ ಸೈಬರ್ ಅಪರಾಧ ಸಮನ್ವಯ ಕೇಂದ್ರ (I4C) ಶಿಫಾರಸಿನ ಮೇರೆಗೆ ಮಾಹಿತಿ ತಂತ್ರಜ್ಞಾನ ಕಾಯ್ದೆ-2000ರ ಸೆಕ್ಷನ್ 69(A) ಹಾಗೂ 79(3)(b) ಅಡಿಯಲ್ಲಿ ಈ ಮೊಬೈಲ್ ಆ್ಯಪ್‌ಗಳನ್ನು ನಿರ್ಬಂಧಿಸಲಾಗಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.

ಇದರ ಜೊತೆಗೆ ವಿವಿಧ ಪೊಲೀಸ್ ಇಲಾಖೆಗಳು ವರದಿ ಮಾಡಿದ ಪ್ರಕರಣಗಳ ಆಧಾರದ ಮೇಲೆ 15.75 ಲಕ್ಷಕ್ಕೂ ಹೆಚ್ಚು ಸಿಮ್ ಕಾರ್ಡ್‌ಗಳು ಹಾಗೂ 5.77 ಲಕ್ಷ IMEI ಸಂಖ್ಯೆಗಳನ್ನೂ ಕೇಂದ್ರ ಸರ್ಕಾರ ನಿರ್ಬಂಧಿಸಿದೆ ಎಂದು ಅವರು ತಿಳಿಸಿದ್ದಾರೆ.

₹11,158 ಕೋಟಿ ವಂಚನೆ ತಪ್ಪಿಸಿದ ವ್ಯವಸ್ಥೆ

ಹಣಕಾಸು ಸೈಬರ್ ವಂಚನೆಗಳನ್ನು ತಕ್ಷಣ ವರದಿ ಮಾಡುವ ಉದ್ದೇಶದಿಂದ 2021ರಲ್ಲಿ ಆರಂಭಿಸಲಾದ I4C ನಿರ್ವಹಣೆಯ ‘ಸಿಟಿಜನ್ ಫೈನಾನ್ಷಿಯಲ್ ಸೈಬರ್ ಫ್ರಾಡ್ ರಿಪೋರ್ಟಿಂಗ್ ಆ್ಯಂಡ್ ಮ್ಯಾನೇಜ್‌ಮೆಂಟ್ ಸಿಸ್ಟಂ’ (CFCFRMS) ಮೂಲಕ ಇದುವರೆಗೆ ₹11,158 ಕೋಟಿಗೂ ಅಧಿಕ ಹಣವನ್ನು ಸೈಬರ್ ವಂಚನೆಯಿಂದ ಉಳಿಸಲಾಗಿದೆ ಎಂದು ಲೋಕಸಭೆಗೆ ತಿಳಿಸಲಾಗಿದೆ.

ಸೈಬರ್ ವಂಚನೆಗಳನ್ನು ತಡೆಯಲು ಕೇಂದ್ರ ಹಾಗೂ ರಾಜ್ಯ ಪೊಲೀಸ್ ಇಲಾಖೆಗಳ ಸಮನ್ವಯದೊಂದಿಗೆ ಹಲವು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಸಚಿವರು ತಿಳಿಸಿದ್ದಾರೆ.