ಉಡುಪಿ: ತುಳುಕೂಟದಿಂದ ಆಟಿಯ ಕಷಾಯ ವಿತರಣೆ

ಉಡುಪಿ: ತುಳುಕೂಟ ಉಡುಪಿ, ಲಯನ್ಸ್ ಹಾಗೂ ಲಿಯೋ ಕ್ಲಬ್ ಉಡುಪಿ–ಇಂದ್ರಾಳಿ ಇದರ ಸಹಯೋಗದಲ್ಲಿ ಆಟಿಯ ಕಷಾಯ ವಿತರಣೆ ಕಾರ್ಯಕ್ರಮ ಬುಧವಾರ ಇಂದ್ರಾಳಿ ರೈಲ್ವೆ ನಿಲ್ದಾಣ ರಸ್ತೆಯಲ್ಲಿರುವ ಲಯನ್ಸ್ ಭವನದಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ನೂರಾರು ಮಂದಿಗೆ ಆಟಿ ಕಷಾಯ ವಿತರಿಸಲಾಯಿತು.

ತುಳುಕೂಟದ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ಮಾತನಾಡಿ, ಪ್ರಕೃತಿ ಔಷಧೀಯ ಗುಣಗಳನ್ನು ಹೊಂದಿರುವ ಹಲವು ಗಿಡಮರಗಳನ್ನು ನಮಗೆ ನೀಡಿದೆ. ಹಾಲೆ ಮರದಲ್ಲಿಯೂ ಔಷಧೀಯ ಗುಣಗಳಿವೆ ಎಂಬ ನಂಬಿಕೆ ಪೂರ್ವಜರಲ್ಲಿತ್ತು.

ಹೀಗಾಗಿ ಆಟಿ ಅಮಾವಾಸ್ಯೆಯಂದು ಹಾಲೆ ಮರದ ತೊಗಟೆಯಿಂದ ತಯಾರಿಸಿದ ಕಷಾಯ ಸೇವಿಸುವ ಸಂಪ್ರದಾಯ ಅನಾದಿ ಕಾಲದಿಂದಲೂ ನಡೆದುಕೊಂಡು ಬಂದಿದೆ ಎಂದರು.

ಮಳೆಗಾಲದಲ್ಲಿ ದೇಹವನ್ನು ಆರೋಗ್ಯಕರವಾಗಿರಿಸಿಕೊಳ್ಳುವ ಉದ್ದೇಶದಿಂದ ಹಿರಿಯರು ಈ ಆಚರಣೆಯನ್ನು ರೂಢಿಸಿಕೊಂಡು ಬಂದಿದ್ದಾರೆ. ಇಂತಹ ಸಾಂಪ್ರದಾಯಿಕ ಆಚರಣೆಗಳನ್ನು ಮುಂದಿನ ಪೀಳಿಗೆಗೂ ಪರಿಚಯಿಸುವ ಅಗತ್ಯವಿದೆ ಎಂದು ಅವರು ಹೇಳಿದರು.