ಉಡುಪಿ: ತುಳುನಾಡಿನ ಸಾಂಪ್ರದಾಯಿಕ ಆಚರಣೆಗಳಲ್ಲಿ ವಿಶೇಷ ಸ್ಥಾನ ಪಡೆದಿರುವ ಆಟಿ ಅಮಾವಾಸ್ಯೆಯ ಅಂಗವಾಗಿ ಉಡುಪಿ ಜಿಲ್ಲೆಯ ವಿವಿಧೆಡೆ ಬುಧವಾರ ಹಾಲೆ ಮರದ ಕಷಾಯ ಸೇವಿಸುವ ಸಂಪ್ರದಾಯ ನಡೆಯಿತು.
ತುಳುನಾಡಿನಲ್ಲಿ ಆಟಿ ತಿಂಗಳಿಗೆ ವಿಶೇಷ ಮಹತ್ವವಿದ್ದು, ಅದರಲ್ಲೂ ಆಟಿ ಅಮಾವಾಸ್ಯೆಯಂದು ಹಾಲೆ ಮರದ ತೊಗಟೆಯಿಂದ ತಯಾರಿಸಿದ ಕಷಾಯ ಸೇವಿಸುವುದು ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಆಚರಣೆಯಾಗಿದೆ. ಮನೆಯ ಹಿರಿಯರು ನಸುಕಿನಲ್ಲೇ ಹಾಲೆ ಮರದ ತೊಗಟೆಯನ್ನು ಸಂಗ್ರಹಿಸಿ, ಅದನ್ನು ಕಲ್ಲಿನಲ್ಲಿ ಅರೆದು ರಸ ತೆಗೆದು ಕಷಾಯ ತಯಾರಿಸಿ ಮನೆಯ ಸದಸ್ಯರಿಗೆ ಕುಡಿಸುತ್ತಾರೆ.
ಕಷಾಯ ಸೇವಿಸಿದ ಬಳಿಕ ಮೆಂತ್ಯೆಗಂಜಿ ಸೇವಿಸುವುದು ಕೂಡ ಸಂಪ್ರದಾಯವಾಗಿದೆ.
ಆಟಿ ತಿಂಗಳಲ್ಲಿ ಮಳೆಗಾಲದ ವಾತಾವರಣದಿಂದ ರೋಗರುಜಿನಗಳು ಹೆಚ್ಚಾಗುವ ಸಾಧ್ಯತೆ ಇದ್ದು, ಈ ಸಂದರ್ಭದಲ್ಲಿ ದೇಹದ ರೋಗನಿರೋಧಕ ಶಕ್ತಿ ಕುಂದುತ್ತದೆ ಎಂಬ ನಂಬಿಕೆ ಇದೆ. ಹೀಗಾಗಿ ನಮ್ಮ ಹಿರಿಯರು ಹಾಲೆ ಮರದ ತೊಗಟೆಯ ಕಷಾಯವನ್ನು ಔಷಧೀಯ ಗುಣ ಹೊಂದಿರುವ ಪಾನೀಯವಾಗಿ ಪರಿಗಣಿಸಿ ಸೇವಿಸುತ್ತಿದ್ದರು.
ಹಿರಿಯರ ಆರೋಗ್ಯ ಪರಂಪರೆ:
ಆಟಿ ಅಮಾವಾಸ್ಯೆಯ ಆಚರಣೆಯ ಕುರಿತು ಜಾನಪದ ವಿದ್ವಾಂಸ ಬನ್ನಂಜೆ ಬಾಬು ಅಮೀನ್ ಮಾತನಾಡಿ, “ಇದು ಹಿಂದಿನಿಂದ ನಡೆದುಕೊಂಡು ಬಂದಿರುವ ನಮ್ಮ ಸಂಸ್ಕೃತಿಯ ಒಂದು ಭಾಗ. ಹಿಂದಿನ ಕಾಲದಲ್ಲಿ ಮಳೆಗಾಲದಲ್ಲಿ ರೋಗರುಜಿನಗಳು ಹೆಚ್ಚಾಗುತ್ತಿದ್ದುದರಿಂದ ಆರೋಗ್ಯ ಕಾಪಾಡಿಕೊಳ್ಳಲು ಪ್ರಕೃತಿಯಲ್ಲೇ ದೊರೆಯುತ್ತಿದ್ದ ಔಷಧೀಯ ಸಸ್ಯಗಳನ್ನು ಬಳಸುತ್ತಿದ್ದರು. ಹಾಲೆ ಮರದ ತೊಗಟೆಯ ಕಷಾಯ ಸೇವನೆಯೂ ಅಂತಹ ಆರೋಗ್ಯ ಪರಂಪರೆಯಲ್ಲೊಂದು.
ಇಂದಿನ ಪೀಳಿಗೆಗೆ ಇದರ ಸಾಂಸ್ಕೃತಿಕ ಮಹತ್ವವನ್ನು ಪರಿಚಯಿಸುವ ಕೆಲಸವಾಗಬೇಕು ಎಂದರು.ಹಾಲೆ ಮರದ ತೊಗಟೆಯನ್ನು ಬ್ರಾಹ್ಮೀ ಮುಹೂರ್ತದಲ್ಲಿ ಸಂಗ್ರಹಿಸುವುದು ಆಚರಣೆಯ ಮತ್ತೊಂದು ವಿಶೇಷ. ಸೂರ್ಯೋದಯಕ್ಕೂ ಮುನ್ನ ತೊಗಟೆ ತೆಗೆದರೆ ಅದರ ರಸ ಹೆಚ್ಚು ಲಭಿಸುತ್ತದೆ ಎಂಬುದು ಹಿರಿಯರ ನಂಬಿಕೆ. ತೊಗಟೆಯನ್ನು ತೊಳೆದು ಕಲ್ಲಿನಲ್ಲಿ ಗುದ್ದಿ ರಸ ತೆಗೆದು ಕಷಾಯ ತಯಾರಿಸಲಾಗುತ್ತದೆ.
ಈ ಕಷಾಯವು ಕೆಮ್ಮು, ಕಫ, ಜ್ವರ, ಹುಳಬಾಧೆ ಸೇರಿದಂತೆ ವಿವಿಧ ಸಮಸ್ಯೆಗಳಿಗೆ ಉಪಯುಕ್ತವಾಗಿದ್ದು, ಜೀರ್ಣಕ್ರಿಯೆಗೂ ಸಹಕಾರಿ ಎಂಬುದು ಜನಪದ ನಂಬಿಕೆಯಾಗಿದೆ. ಮಳೆಗಾಲದಲ್ಲಿ ದೇಹವನ್ನು ಆರೋಗ್ಯಕರವಾಗಿಟ್ಟುಕೊಳ್ಳುವ ಉದ್ದೇಶದಿಂದ ಹಿರಿಯರು ಈ ಆಚರಣೆಯನ್ನು ರೂಪಿಸಿಕೊಂಡಿದ್ದರು ಎಂದು ಬನ್ನಂಜೆ ಬಾಬು ಅಮೀನ್ ವಿವರಿಸಿದರು.
ಆಟಿ ಅಮಾವಾಸ್ಯೆಯನ್ನು ಕರ್ನಾಟಕದ ಇತರ ಭಾಗಗಳಲ್ಲಿ ಭೀಮನ ಅಮಾವಾಸ್ಯೆ ಅಥವಾ ಕರ್ಕಾಟಕ ಅಮಾವಾಸ್ಯೆ ಎಂದೂ ಕರೆಯಲಾಗುತ್ತದೆ. ತುಳುನಾಡಿನ ಗ್ರಾಮೀಣ ಬದುಕು, ಪ್ರಕೃತಿ ಮತ್ತು ಆರೋಗ್ಯ ಪರಂಪರೆಯೊಂದಿಗೆ ಬೆಸೆದುಕೊಂಡಿರುವ ಈ ಆಚರಣೆ ಇಂದಿಗೂ ಜನರ ನಡುವೆ ತನ್ನ ಮಹತ್ವವನ್ನು ಉಳಿಸಿಕೊಂಡಿದೆ.















