ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ 14ನೇ ಆರೋಪಿಯಾಗಿರುವ ಪ್ರದೋಷ್ ಸಲ್ಲಿಸಿರುವ 11 ಪುಟಗಳ ಮಾಫಿ ಸಾಕ್ಷಿ (ಕ್ಷಮಾದಾನ) ಅರ್ಜಿ ಪ್ರಕರಣಕ್ಕೆ ಹೊಸ ತಿರುವು ನೀಡಿದೆ. ತಾನು ಮಾಡಿದ ತಪ್ಪಿಗೆ ಪಶ್ಚಾತ್ತಾಪ ವ್ಯಕ್ತಪಡಿಸಿರುವ ಪ್ರದೋಷ್, ದರ್ಶನ್ ಪರಿಚಯವಾದ ದಿನದಿಂದ ಜೈಲು ಪಾಲಾಗುವವರೆಗಿನ ಘಟನೆಗಳನ್ನು ನ್ಯಾಯಾಲಯದ ಮುಂದೆ ವಿವರಿಸಿದ್ದಾನೆ.
ಸಿಸಿಎಚ್-59 ನ್ಯಾಯಾಲಯಕ್ಕೆ ಸಲ್ಲಿಸಿರುವ ಅರ್ಜಿಯಲ್ಲಿ ಪ್ರಕರಣದ ಹಲವು ಪ್ರಮುಖ ಸಂಗತಿಗಳನ್ನು ಪ್ರದೋಷ್ ಉಲ್ಲೇಖಿಸಿದ್ದಾನೆ. 2003ರಿಂದ ಜಯನಗರದ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಕ್ರಿಕೆಟ್ ಆಡುತ್ತಿದ್ದ ಸಂದರ್ಭ ದರ್ಶನ್ ಪರಿಚಯವಾಗಿತ್ತು ಎಂದು ಆತ ಹೇಳಿಕೊಂಡಿದ್ದಾನೆ.
‘ಪವಿತ್ರಾಗೆ ಅಶ್ಲೀಲ ಮೆಸೇಜ್ ಕಳುಹಿಸುತ್ತೀಯಾ?’
2024ರ ಜೂನ್ 8ರಂದು ದರ್ಶನ್ ಮನೆಗೆ ತೆರಳಿದ್ದ ಪ್ರದೋಷ್, ಬಳಿಕ ದರ್ಶನ್ ಜೊತೆ ‘ಸ್ಟೋನಿ ಬ್ರೂಕ್ಸ್’ ರೆಸ್ಟೋರೆಂಟ್‌ಗೆ ತೆರಳಿದ್ದಾಗಿ ಅರ್ಜಿಯಲ್ಲಿ ತಿಳಿಸಿದ್ದಾನೆ. ಮಧ್ಯಾಹ್ನ 3 ಗಂಟೆ ಸುಮಾರಿಗೆ ಪವನ್ ರೆಸ್ಟೋರೆಂಟ್‌ಗೆ ಬಂದು ದರ್ಶನ್‌ಗೆ ಮೊಬೈಲ್‌ನಲ್ಲಿ ಏನೋ ತೋರಿಸಿದ ಬಳಿಕ ದರ್ಶನ್ ಕೋಪಗೊಂಡಿದ್ದರು. ನಂತರ ಪವಿತ್ರಾ ಗೌಡಗೆ ಕರೆ ಮಾಡಿ ಮಾತನಾಡಿದ ದರ್ಶನ್, ಆಕೆಯ ನಿವಾಸದ ಕಡೆಗೆ ಕಾರು ಚಲಾಯಿಸುವಂತೆ ಸೂಚಿಸಿದ್ದರು ಎಂದು ಪ್ರದೋಷ್ ಹೇಳಿದ್ದಾನೆ.
ಸಂಜೆ 4.30ರ ಸುಮಾರಿಗೆ ಪವಿತ್ರಾ ಗೌಡ ನಿವಾಸ ತಲುಪಿದ ಬಳಿಕ ದರ್ಶನ್ ಹಾಗೂ ಪವಿತ್ರಾ ಗೌಡ ಒಂದೇ ಕಾರಿನಲ್ಲಿ ಆರ್‌ಆರ್ ನಗರದ ಪಟ್ಟಣಗೆರೆ ಶೆಡ್‌ಗೆ ತೆರಳಿದ್ದರು. ಅಲ್ಲಿ ರೇಣುಕಾಸ್ವಾಮಿ ತಲೆಬಾಗಿಸಿಕೊಂಡು ಕುಳಿತಿದ್ದ. ಆತನ ಸುತ್ತ ರಾಘವೇಂದ್ರ, ಪವನ್, ನಾಗರಾಜ್ ಹಾಗೂ ನಂದೀಶ್ ಇದ್ದರು ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.
ಪ್ರದೋಷ್ ಹೇಳಿಕೆ ಪ್ರಕಾರ, ದರ್ಶನ್ ರೇಣುಕಾಸ್ವಾಮಿಯನ್ನು ಪ್ರಶ್ನಿಸಿ ಹಲ್ಲೆ ನಡೆಸಿದ್ದರು. ಬಳಿಕ ಇತರ ಆರೋಪಿಗಳೂ ಆತನ ಮೇಲೆ ಹಲ್ಲೆ ನಡೆಸಿದರು. ರೇಣುಕಾಸ್ವಾಮಿಯ ಮೇಲೆ ನಡೆದ ಹಲ್ಲೆಯನ್ನು ನಿಲ್ಲಿಸುವಂತೆ ತಾನು ದರ್ಶನ್ ಹಾಗೂ ಇತರರಲ್ಲಿ ಮನವಿ ಮಾಡಿದ್ದರೂ ಅವರು ಕೇಳಲಿಲ್ಲ ಎಂದು ಪ್ರದೋಷ್ ತಿಳಿಸಿದ್ದಾನೆ.
ಶವ ವಿಲೇವಾರಿ, ಹಣದ ವಹಿವಾಟಿನ ಬಗ್ಗೆಯೂ ಉಲ್ಲೇಖ
ಪ್ರದೋಷ್ ಅರ್ಜಿಯಲ್ಲಿ ರೇಣುಕಾಸ್ವಾಮಿ ಮೃತದೇಹವನ್ನು ಶೆಡ್‌ನಿಂದ ಸಾಗಿಸಿ ವಿಲೇವಾರಿ ಮಾಡಿದ್ದ ಬಗ್ಗೆ ಹಾಗೂ ಬಳಿಕ ಕೆಲವರು ಪೊಲೀಸರಿಗೆ ಶರಣಾಗಲು ಮುಂದಾದ ಬಗ್ಗೆ ವಿವರಿಸಿದ್ದಾನೆ.
ಇನ್ಸ್‌ಪೆಕ್ಟರ್ ವಿನಯ್‌ಗೆ ಕರೆ ಮಾಡಿ ಘಟನೆ ಬಗ್ಗೆ ತಿಳಿಸಿದಾಗ, ಪ್ರಕರಣ ಗಂಭೀರವಾಗಿರುವುದರಿಂದ ಯಾರನ್ನಾದರೂ ಶರಣಾಗುವಂತೆ ಮಾಡುವಂತೆ ಸಲಹೆ ನೀಡಿದ್ದರು ಎಂದು ಪ್ರದೋಷ್ ಹೇಳಿಕೊಂಡಿದ್ದಾನೆ. ಬಳಿಕ ರಾಘವೇಂದ್ರ, ನಂದೀಶ್ ಮತ್ತು ಪವನ್ ಶರಣಾಗಲು ಒಪ್ಪಿಕೊಂಡಿದ್ದರು ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.
ಇದರ ನಡುವೆ ಮೃತದೇಹ ಸಾಗಾಟ, ಸಾಕ್ಷ್ಯಗಳನ್ನು ನಾಶಪಡಿಸುವುದು ಹಾಗೂ ಪೊಲೀಸರಿಗೆ ಶರಣಾಗುವವರಿಗೆ ಹಣ ನೀಡುವ ಸಂಬಂಧ 30 ಲಕ್ಷ ರೂ. ಹಣವನ್ನು ಹೇಗೆ ಹೊಂದಿಸಲಾಯಿತು ಮತ್ತು ಯಾರಿಗೆ ಎಷ್ಟು ಹಣ ನೀಡಲಾಯಿತು ಎಂಬ ವಿವರಗಳನ್ನೂ ಪ್ರದೋಷ್ ಅರ್ಜಿಯಲ್ಲಿ ಉಲ್ಲೇಖಿಸಿದ್ದಾನೆ ಎಂದು ತಿಳಿದುಬಂದಿದೆ.
‘ಸತ್ಯ ಹೇಳಲು ಮಾಫಿ ಸಾಕ್ಷಿಯಾಗುತ್ತಿದ್ದೇನೆ’
ತಾನು ಹಲ್ಲೆ ತಡೆಯಲು ಪ್ರಯತ್ನಿಸಿದ್ದಾಗಿ ಹೇಳಿಕೊಂಡಿರುವ ಪ್ರದೋಷ್, ಪ್ರಕರಣದಲ್ಲಿ ಭಾಗಿಯಾಗಿದ್ದಕ್ಕೆ ತೀವ್ರ ಪಶ್ಚಾತ್ತಾಪವಿದೆ ಎಂದು ಅರ್ಜಿಯಲ್ಲಿ ತಿಳಿಸಿದ್ದಾರೆ. ನಡೆದ ಘಟನೆಯ ಬಗ್ಗೆ ನ್ಯಾಯಾಲಯದ ಮುಂದೆ ಸತ್ಯವನ್ನು ಹೇಳುವ ಉದ್ದೇಶದಿಂದ ಮಾಫಿ ಸಾಕ್ಷಿಯಾಗಲು ಮುಂದಾಗಿರುವುದಾಗಿ ಅವರು ತಿಳಿಸಿದ್ದಾರೆ.
ಪ್ರದೋಷ್ ಸಲ್ಲಿಸಿರುವ ಈ 11 ಪುಟಗಳ ಅರ್ಜಿಯಲ್ಲಿ ಮಾಡಿರುವ ಆರೋಪಗಳು ಹಾಗೂ ಹೇಳಿಕೆಗಳನ್ನು ನ್ಯಾಯಾಲಯ ಪರಿಗಣಿಸಲಿದ್ದು, ಮುಂದಿನ ವಿಚಾರಣೆಯಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತಷ್ಟು ಬೆಳವಣಿಗೆಗಳು ನಡೆಯುವ ಸಾಧ್ಯತೆಯಿದೆ.















