ಇನ್ನು LPG ಸಿಲಿಂಡರ್‌ಗಾಗಿ ದಿನಗಟ್ಟಲೆ ಕಾಯಬೇಕಿಲ್ಲ,3- 4 ಗಂಟೆಗಳೊಳಗೆ ಡೆಲಿವರಿಯಾಗುತ್ತೆ ಈ ಸಿಲಿಂಡರ್, ಇಂಡಿಯನ್ ಆಯಿಲ್‌ನಿಂದ ಹೊಸ ಸೇವೆ!

ಇಂಡಿಯನ್ ಆಯಿಲ್ ತನ್ನ ‘ಇಂಡೇನ್ ಎಕ್ಸ್‌ಟ್ರಾ ಲೈಟ್ ನೌ’ ಸೇವೆಯನ್ನು ಪರಿಚಯಿಸಿದ್ದು, ಇದರಡಿ ಬುಕಿಂಗ್ ಮಾಡಿದ ಬಳಿಕ 3ರಿಂದ 4 ಗಂಟೆಗಳೊಳಗೆ LPG ಸಿಲಿಂಡರ್‌ ಅನ್ನು ಮನೆ ಬಾಗಿಲಿಗೆ ತಲುಪಿಸುವ ವ್ಯವಸ್ಥೆ ಕಲ್ಪಿಸಲಾಗಿದೆ.

10 ಕೆ.ಜಿ. ಹಗುರವಾದ ಸಿಲಿಂಡರ್

‘ಇಂಡೇನ್ ಎಕ್ಸ್‌ಟ್ರಾ ಲೈಟ್ ನೌ’ ಅಡಿಯಲ್ಲಿ 10 ಕೆ.ಜಿ. ತೂಕದ ಸಂಯೋಜಿತ LPG ಸಿಲಿಂಡರ್ ನೀಡಲಾಗುತ್ತದೆ. ಸಾಮಾನ್ಯ ಉಕ್ಕಿನ ಸಿಲಿಂಡರ್‌ಗಳಿಗೆ ಹೋಲಿಸಿದರೆ ಇದು ಹಗುರವಾಗಿದ್ದು, ಎತ್ತಲು ಮತ್ತು ಸಾಗಿಸಲು ಸುಲಭವಾಗಿದೆ.

ಈ ಸಿಲಿಂಡರ್ ತುಕ್ಕು ಹಿಡಿಯದ ವಸ್ತುಗಳಿಂದ ತಯಾರಿಸಲಾಗಿದ್ದು, ಪಾರದರ್ಶಕ ವಿನ್ಯಾಸ ಹೊಂದಿದೆ. ಹೀಗಾಗಿ ಸಿಲಿಂಡರ್ ಒಳಗೆ ಎಷ್ಟು ಅನಿಲ ಉಳಿದಿದೆ ಎಂಬುದನ್ನು ಹೊರಗಿನಿಂದಲೇ ಸುಲಭವಾಗಿ ಗಮನಿಸಬಹುದಾಗಿದೆ.

ಸಣ್ಣ ಕುಟುಂಬಗಳು ಅಥವಾ ಕಡಿಮೆ ಪ್ರಮಾಣದಲ್ಲಿ LPG ಬಳಸುವ ಗ್ರಾಹಕರಿಗೆ ಈ ಸಿಲಿಂಡರ್ ಹೆಚ್ಚು ಅನುಕೂಲಕರವಾಗಲಿದೆ ಎಂದು ಕಂಪನಿ ತಿಳಿಸಿದೆ.

ಬುಕಿಂಗ್ ಮಾಡುವುದು ಹೇಗೆ?

ಹೊಸ ಸಂಪರ್ಕ ಅಥವಾ LPG ಮರುಪೂರಣವನ್ನು ಡಿಜಿಟಲ್ ವೇದಿಕೆಗಳ ಮೂಲಕ ಬುಕ್ ಮಾಡಬಹುದಾಗಿದೆ. IndianOil ONE ಆ್ಯಪ್, ಇಂಡಿಯನ್ ಆಯಿಲ್ ಗ್ರಾಹಕ ಪೋರ್ಟಲ್ ಹಾಗೂ WhatsApp ಮೂಲಕವೂ ಬುಕಿಂಗ್ ಸೌಲಭ್ಯವಿದೆ.

ಇಂಡಿಯನ್ ಆಯಿಲ್‌ನ WhatsApp ಸಂಖ್ಯೆಯಾದ 7588888824 ಮೂಲಕವೂ LPG ಸೇವೆಗಳಿಗೆ ಸಂಬಂಧಿಸಿದಂತೆ ಬುಕಿಂಗ್ ಮಾಡಬಹುದು ಎಂದು ತಿಳಿಸಲಾಗಿದೆ.

ಏನೆಲ್ಲಾ ಪ್ರಯೋಜನ?

  • ಬುಕಿಂಗ್ ಮಾಡಿದ 3ರಿಂದ 4 ಗಂಟೆಗಳಲ್ಲಿ ಡೆಲಿವರಿ
  • 10 ಕೆ.ಜಿ. ಹಗುರವಾದ ಸಿಲಿಂಡರ್
  • ಎತ್ತಲು ಮತ್ತು ಸಾಗಿಸಲು ಸುಲಭ
  • ಸಿಲಿಂಡರ್‌ನಲ್ಲಿರುವ ಗ್ಯಾಸ್ ಪ್ರಮಾಣವನ್ನು ಹೊರಗಿನಿಂದಲೇ ನೋಡಬಹುದು
  • ಡಿಜಿಟಲ್ ಬುಕಿಂಗ್ ಮತ್ತು ಟ್ರ್ಯಾಕಿಂಗ್ ಸೌಲಭ್ಯ
  • ಹೊಸ ಸಂಪರ್ಕ ಪಡೆಯಲು ಸರಳ ಪ್ರಕ್ರಿಯೆ
  • ಸುರಕ್ಷಿತ ಹಾಗೂ ಅನುಕೂಲಕರ ಬಳಕೆ

ಎಲ್ಲೆಲ್ಲಿ ಲಭ್ಯ?

ಕಂಪನಿಯ ಪ್ರಕಾರ, ‘ಇಂಡೇನ್ ಎಕ್ಸ್‌ಟ್ರಾ ಲೈಟ್ ನೌ’ ಸೇವೆಯು ಇಂಡಿಯನ್ ಆಯಿಲ್‌ನ ಇಂಡೇನ್ ವಿತರಕ ಜಾಲ ಹಾಗೂ ಆಯ್ದ ಚಿಲ್ಲರೆ ಮಾರಾಟ ಮಳಿಗೆಗಳ ಮೂಲಕ ಲಭ್ಯವಿರಲಿದೆ.

ತುರ್ತು ಅಗತ್ಯವಿರುವ ಗ್ರಾಹಕರಿಗೆ ವೇಗವಾಗಿ LPG ವಿತರಿಸುವುದು, ಸೇವೆಯ ಗುಣಮಟ್ಟ ಹೆಚ್ಚಿಸುವುದು ಮತ್ತು ಆಧುನಿಕ LPG ಸೇವೆಗಳನ್ನು ಒದಗಿಸುವುದು ಈ ಯೋಜನೆಯ ಪ್ರಮುಖ ಉದ್ದೇಶವಾಗಿದೆ.

ಅಂದರೆ, ಬೆಳಗ್ಗೆ 7 ಗಂಟೆಗೆ ಸಿಲಿಂಡರ್ ಬುಕ್ ಮಾಡಿದರೆ, ಲಭ್ಯತೆ ಹಾಗೂ ಬೇಡಿಕೆಗೆ ಅನುಗುಣವಾಗಿ ಬೆಳಗ್ಗೆ 10ರಿಂದ 11 ಗಂಟೆಯೊಳಗೆ ಸಿಲಿಂಡರ್ ಮನೆಗೆ ತಲುಪುವ ವ್ಯವಸ್ಥೆ ಇರಲಿದೆ ಎಂದು ಕಂಪನಿ ತಿಳಿಸಿದೆ.