ನವದೆಹಲಿ : EMI ಪಾವತಿ ತಡವಾದ ಕಾರಣ ಬ್ಯಾಂಕ್‌ಗಳು ಅಥವಾ ರಿಕವರಿ ಏಜೆಂಟ್‌ಗಳಿಂದ ಪದೇ ಪದೇ ಕರೆ, ಬೆದರಿಕೆ ಹಾಗೂ ಅವಮಾನಕ್ಕೆ ಒಳಗಾಗುತ್ತಿದ್ದ ಸಾಲಗಾರರಿಗೆ ಭಾರತೀಯ ರಿಸರ್ವ್ ಬ್ಯಾಂಕ್ (RBI) ಮಹತ್ವದ ರಿಲೀಫ್ ನೀಡಿದೆ. ಸಾಲ ವಸೂಲಾತಿ ಪ್ರಕ್ರಿಯೆಯನ್ನು ಹೆಚ್ಚು ಪಾರದರ್ಶಕ ಮತ್ತು ಮಾನವೀಯವಾಗಿಸಲು RBI ಹೊಸ ಮಾರ್ಗಸೂಚಿಗಳನ್ನು ಪ್ರಕಟಿಸಿದ್ದು, 2027ರ ಜನವರಿ 1ರಿಂದ ದೇಶಾದ್ಯಂತ ಜಾರಿಗೆ ಬರಲಿವೆ.
ಬೆಳಗ್ಗೆ 8ರಿಂದ ಸಂಜೆ 7ರವರೆಗೆ ಮಾತ್ರ ಸಂಪರ್ಕ
ಹೊಸ ನಿಯಮದ ಪ್ರಕಾರ, ಬ್ಯಾಂಕ್‌ಗಳು ಮತ್ತು ರಿಕವರಿ ಏಜೆಂಟ್‌ಗಳು ಸಾಮಾನ್ಯವಾಗಿ ಬೆಳಗ್ಗೆ 8 ಗಂಟೆಯಿಂದ ಸಂಜೆ 7 ಗಂಟೆಯವರೆಗೆ ಮಾತ್ರ ಸಾಲಗಾರರನ್ನು ಸಂಪರ್ಕಿಸಬಹುದು. ಈ ಸಮಯದ ಹೊರತಾಗಿ ಕರೆ ಅಥವಾ ಮನೆಗೆ ಭೇಟಿ ನೀಡಬೇಕಾದರೆ ಸಾಲಗಾರರ ಪೂರ್ವಾನುಮತಿ ಅಥವಾ ಮನವಿ ಕಡ್ಡಾಯ.
ಸಾಲ ವಸೂಲಾತಿ ವೇಳೆ ಬೆದರಿಕೆ, ನಿಂದನೀಯ ಅಥವಾ ಅವಮಾನಕಾರಿ ಭಾಷೆ ಬಳಸುವುದು, ಅನಾಮಧೇಯವಾಗಿ ಕರೆ ಮಾಡುವುದು, ಪದೇ ಪದೇ ಕರೆ ಮಾಡಿ ಕಿರುಕುಳ ನೀಡುವುದು ಅಥವಾ ಆಸ್ತಿ ಜಪ್ತಿ ಮಾಡುವ ಬೆದರಿಕೆ ಹಾಕುವುದು ಸಂಪೂರ್ಣ ನಿಷೇಧಿಸಲಾಗಿದೆ.
ವೈಯಕ್ತಿಕ ಮಾಹಿತಿ ಬಹಿರಂಗಪಡಿಸುವಂತಿಲ್ಲ
ಸಾಲಗಾರರ ಫೋಟೋ, ವಿಡಿಯೋ ಅಥವಾ ವೈಯಕ್ತಿಕ ಮಾಹಿತಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿ ಅವಮಾನಿಸುವುದಕ್ಕೂ ಅವಕಾಶವಿಲ್ಲ. ದುಃಖ, ವೈದ್ಯಕೀಯ ತುರ್ತು ಪರಿಸ್ಥಿತಿ ಅಥವಾ ಮದುವೆಯಂತಹ ಸೂಕ್ಷ್ಮ ಸಂದರ್ಭಗಳಲ್ಲಿ ರಿಕವರಿ ಏಜೆಂಟ್‌ಗಳು ಸಂಪರ್ಕಿಸುವುದನ್ನು ತಪ್ಪಿಸಬೇಕು ಎಂದು RBI ಸೂಚಿಸಿದೆ.
ಮನೆಗೆ ಬರುವ ಮುನ್ನ ಮಾಹಿತಿ ಕಡ್ಡಾಯ
ರಿಕವರಿ ಏಜೆಂಟ್‌ಗಳು ಮೊದಲ ಬಾರಿಗೆ ಮನೆಗೆ ಭೇಟಿ ನೀಡುವ ಮೊದಲು ಕನಿಷ್ಠ ಒಂದು ದಿನ ಮುಂಚಿತವಾಗಿ ಮಾಹಿತಿ ನೀಡಬೇಕು. ಏಜೆಂಟ್ ಯಾವ ಸಂಸ್ಥೆಯ ಪರವಾಗಿ ಬಂದಿದ್ದಾರೆ ಎಂಬ ವಿವರವನ್ನು ಬ್ಯಾಂಕ್ ತಿಳಿಸಬೇಕು.
ಭೇಟಿ ವೇಳೆ ಏಜೆಂಟ್‌ಗಳು ತಮ್ಮ ಗುರುತಿನ ಚೀಟಿ (ID Card), ಅಧಿಕಾರ ಪತ್ರ ಹಾಗೂ ಸಂಬಂಧಿತ ನೋಟಿಸ್ ಹೊಂದಿರಬೇಕು. ಜೊತೆಗೆ ಬ್ಯಾಂಕ್ ಮತ್ತು ರಿಕವರಿ ಏಜೆನ್ಸಿಯ ದೂರು ಪರಿಹಾರ ಅಧಿಕಾರಿಯ ಸಂಪರ್ಕ ವಿವರಗಳನ್ನೂ ಒದಗಿಸಬೇಕು.
ರಿಕವರಿ ಕರೆಗಳ ದಾಖಲೆ ಕಡ್ಡಾಯ
ಇನ್ನು ಮುಂದೆ ಸಾಲ ವಸೂಲಾತಿ ಸಂಬಂಧಿಸಿದ ಪ್ರತಿಯೊಂದು ಕರೆಗಳ ದಾಖಲೆಗಳನ್ನು ಬ್ಯಾಂಕ್‌ಗಳು ನಿರ್ವಹಿಸಬೇಕು. ಕರೆ ಮಾಡಿದ ಸಮಯ, ಎಷ್ಟು ಬಾರಿ ಸಂಪರ್ಕಿಸಲಾಗಿದೆ ಎಂಬ ಮಾಹಿತಿಯನ್ನು ದಾಖಲಿಸಿ ಕನಿಷ್ಠ ಆರು ತಿಂಗಳವರೆಗೆ ಸಂರಕ್ಷಿಸಬೇಕು.
ರಿಕವರಿ ಏಜೆನ್ಸಿಗೆ ಕೆಲಸ ನೀಡಿದ್ದರೂ ಜವಾಬ್ದಾರಿಯಿಂದ ಬ್ಯಾಂಕ್ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಏಜೆಂಟ್‌ಗಳ ವರ್ತನೆ ಮೇಲೆ ಬ್ಯಾಂಕ್‌ಗಳು ನಿಗಾ ವಹಿಸಿ, ಅವರಿಗೆ ಸೂಕ್ತ ತರಬೇತಿ ನೀಡುವುದು ಕಡ್ಡಾಯವಾಗಿದೆ.
EMI ಕಟ್ಟದಿದ್ದರೆ ಫೋನ್ ಲಾಕ್ ಮಾಡಬಹುದೇ?
ಹೊಸ ನಿಯಮದಲ್ಲಿ ಡಿಜಿಟಲ್ ಸಾಧನಗಳಿಗೂ ಸ್ಪಷ್ಟ ಮಾರ್ಗಸೂಚಿ ನೀಡಲಾಗಿದೆ. EMI ಪಾವತಿಸದ ಕಾರಣಕ್ಕೆ ಸಾಲದ ಮೂಲಕ ಖರೀದಿಸಿದ ಮೊಬೈಲ್, ಟ್ಯಾಬ್ಲೆಟ್ ಅಥವಾ ಲ್ಯಾಪ್‌ಟಾಪ್ ಅನ್ನು ರಿಮೋಟ್ ಮೂಲಕ ಲಾಕ್ ಮಾಡುವ ವ್ಯವಸ್ಥೆಗೆ ಅವಕಾಶವಿದ್ದರೂ, EMI ತಪ್ಪಿದ ತಕ್ಷಣವೇ ಲಾಕ್ ಮಾಡಲು ಸಾಧ್ಯವಿಲ್ಲ.
- ಸಾಲ 30 ದಿನಗಳಿಗಿಂತ ಹೆಚ್ಚು ಬಾಕಿ ಉಳಿದ ಬಳಿಕ ಮಾತ್ರ ಭಾಗಶಃ ನಿರ್ಬಂಧ ವಿಧಿಸಬಹುದು.
- 60 ದಿನಗಳಿಗೂ ಹೆಚ್ಚು ಬಾಕಿ ಉಳಿದರೆ ಸಂಪೂರ್ಣ ನಿರ್ಬಂಧ ಜಾರಿಗೊಳಿಸಬಹುದು.
- ಆದರೆ ತುರ್ತು ಕರೆಗಳು, SMS ಹಾಗೂ ಉದ್ಯೋಗಕ್ಕೆ ಅಗತ್ಯವಾದ ಮೂಲಭೂತ ಸೇವೆಗಳನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸುವಂತಿಲ್ಲ.
- ಸಂಪರ್ಕಗಳು, ಫೋಟೋಗಳು, ವಿಡಿಯೋಗಳು, ಕರೆ ದಾಖಲೆಗಳು ಹಾಗೂ ಲೊಕೇಶನ್ ಮಾಹಿತಿಯಂತಹ ವೈಯಕ್ತಿಕ ಡೇಟಾವನ್ನು ಈ ತಂತ್ರಜ್ಞಾನ ಮೂಲಕ ಪ್ರವೇಶಿಸುವಂತಿಲ್ಲ.
EMI ಪಾವತಿಸಿದ ಬಳಿಕ ಒಂದು ಗಂಟೆಯೊಳಗೆ ಅನ್‌ಲಾಕ್
ಬಾಕಿ EMI ಪಾವತಿಸಿ ಸಾಲವನ್ನು ಸರಿಪಡಿಸಿದ ನಂತರ ಒಂದು ಗಂಟೆಯೊಳಗೆ ಸಾಧನವನ್ನು ಮರುಸಕ್ರಿಯಗೊಳಿಸಬೇಕು. ಈ ಅವಧಿ ಮೀರಿದರೆ ಪ್ರತಿ ಗಂಟೆಗೆ ₹250 ಪರಿಹಾರ ನೀಡಬೇಕಾಗುತ್ತದೆ. ಆದರೆ ಈ ಪರಿಹಾರಕ್ಕೂ ಬಾಕಿ ಸಾಲದ ಮೊತ್ತಕ್ಕೆ ಸಂಬಂಧಿಸಿದ ಮಿತಿಗಳು ಅನ್ವಯವಾಗುತ್ತವೆ.
ಸಾಲಗಾರರಿಗೆ ಅನಗತ್ಯ ಕಿರುಕುಳ ತಪ್ಪಿಸಿ, ಸಾಲ ವಸೂಲಾತಿ ಪ್ರಕ್ರಿಯೆಯನ್ನು ನ್ಯಾಯಸಮ್ಮತ ಹಾಗೂ ಪಾರದರ್ಶಕಗೊಳಿಸುವುದು RBI ಹೊಸ ನಿಯಮಗಳ ಪ್ರಮುಖ ಉದ್ದೇಶವಾಗಿದೆ.















