ಬೆಂಗಳೂರು : ಖಾಸಗಿ ಶಾಲೆಗಳ ಪ್ರವೇಶ ಪ್ರಕ್ರಿಯೆಯಲ್ಲಿ ಡೊನೇಷನ್ ವಸೂಲಿ ಮತ್ತು ಅಕ್ರಮಗಳಿಗೆ ಕಡಿವಾಣ ಹಾಕಲು ಕರ್ನಾಟಕ ಶಾಲಾ ಶಿಕ್ಷಣ ಇಲಾಖೆ ಕಠಿಣ ಕ್ರಮ ಕೈಗೊಂಡಿದೆ. ಇನ್ನು ಮುಂದೆ ದಾಖಲಾತಿ ವೇಳೆ ಪೋಷಕರಿಂದ ಕಾನೂನುಬಾಹಿರವಾಗಿ ಡೊನೇಷನ್ ಪಡೆದರೆ, ಪಡೆದ ಮೊತ್ತದ 10 ಪಟ್ಟು ದಂಡ ವಿಧಿಸಲಾಗುತ್ತದೆ ಎಂದು ಇಲಾಖೆ ಎಚ್ಚರಿಕೆ ನೀಡಿದೆ.
2025-26ನೇ ಶೈಕ್ಷಣಿಕ ಸಾಲಿನ ದಾಖಲಾತಿ ಮತ್ತು ಶುಲ್ಕ ವಸೂಲಿ ಪ್ರಕ್ರಿಯೆ ಪೂರ್ಣಗೊಂಡ ಬಳಿಕ, ಖಾಸಗಿ ಶಾಲೆಗಳು ತಾವು ನಿಗದಿಪಡಿಸಿರುವ ಶುಲ್ಕದ ಸಂಪೂರ್ಣ ವಿವರಗಳನ್ನು ತಮ್ಮ ವೆಬ್‌ಸೈಟ್ ಹಾಗೂ ಶಿಕ್ಷಣ ಇಲಾಖೆಯ ವೆಬ್‌ಸೈಟ್‌ನಲ್ಲಿ ಕಡ್ಡಾಯವಾಗಿ ಪ್ರಕಟಿಸಬೇಕು ಎಂದು ಸೂಚಿಸಲಾಗಿದೆ. ಈ ಕ್ರಮದಿಂದ ಶುಲ್ಕದ ವಿಷಯದಲ್ಲಿ ಪಾರದರ್ಶಕತೆ ಹೆಚ್ಚಿಸಿ, ಪೋಷಕರ ಮೇಲಿನ ಅನಗತ್ಯ ಆರ್ಥಿಕ ಹೊರೆಯನ್ನು ತಡೆಯುವ ಉದ್ದೇಶ ಹೊಂದಲಾಗಿದೆ.
ಇದರ ಜೊತೆಗೆ, ಶಾಲಾ ಪ್ರವೇಶಕ್ಕೂ ಮುನ್ನ ಮಕ್ಕಳಿಗೆ ಅಥವಾ ಪೋಷಕರಿಗೆ ಯಾವುದೇ ರೀತಿಯ ಪ್ರವೇಶ ಪರೀಕ್ಷೆ, ಸಂದರ್ಶನ ಅಥವಾ ಟೆಸ್ಟ್ ನಡೆಸಿದರೆ ₹25,000 ದಂಡ ವಿಧಿಸಲಾಗುತ್ತದೆ. ಇದೇ ತಪ್ಪನ್ನು ಪುನರಾವರ್ತಿಸಿದರೆ ಪ್ರತಿ ಬಾರಿ ₹50,000 ದಂಡ ವಿಧಿಸಲಾಗುವುದು ಎಂದು ಇಲಾಖೆ ಸ್ಪಷ್ಟಪಡಿಸಿದೆ.
ಖಾಸಗಿ ಶಾಲೆಗಳ ಪ್ರವೇಶ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ತರಲು ಮತ್ತು ಪೋಷಕರ ಹಿತಾಸಕ್ತಿಯನ್ನು ಕಾಪಾಡಲು ಶಿಕ್ಷಣ ಇಲಾಖೆಯ ಈ ಕ್ರಮ ಮಹತ್ವದ್ದಾಗಿದೆ.















