ಸಹೋದರಿಗೆ ವಿಡಿಯೋ ಕರೆ ಮಾಡಿ 25 ವರ್ಷದ ಯುವಕ ಆತ್ಮಹತ್ಯೆ; ತನಿಖೆ ಆರಂಭ

ಮೂಡುಬಿದಿರೆ: ತಾಲೂಕಿನ ಬೆಳುವಾಯಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಾಣಿಲ್‌ನಲ್ಲಿ 25 ವರ್ಷದ ಯುವಕ ಮೃತಪಟ್ಟಿರುವ ಘಟನೆ ಶುಕ್ರವಾರ ಮುಂಜಾನೆ ನಡೆದಿದೆ. ಮೃತರನ್ನು ಬೆಳ್ತಂಗಡಿ ತಾಲೂಕಿನ ಕಾಜೂರು ಮೂಲದ ಅಬುಸಾಲಿ ಇಸ್ಮಾಯಿಲ್ ಅವರ ಪುತ್ರ ಸಯ್ಯದ್ ಅನ್ವರ್ (25) ಎಂದು ಗುರುತಿಸಲಾಗಿದೆ.

ಪೊಲೀಸ್ ಮೂಲಗಳ ಪ್ರಕಾರ, ಅನ್ವರ್ ಅವರು ಪತ್ನಿ ಹಾಗೂ ಎರಡು ವರ್ಷದ ಮಗುವಿನೊಂದಿಗೆ ಬೆಳುವಾಯಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ದಂಪತಿಗಳ ನಡುವೆ ಆಗಾಗ್ಗೆ ಭಿನ್ನಾಭಿಪ್ರಾಯ ಉಂಟಾಗುತ್ತಿತ್ತು ಎನ್ನಲಾಗಿದ್ದು, ಈ ಸಂಬಂಧ ಈ ಹಿಂದೆ ಪೊಲೀಸರಿಗೆ ದೂರು ಕೂಡ ದಾಖಲಾಗಿತ್ತು ಎಂದು ತಿಳಿದುಬಂದಿದೆ.

ಮೀನು ಸಾಗಣೆ ವಾಹನದ ಚಾಲಕರಾಗಿ ಕೆಲಸ ಮಾಡುತ್ತಿದ್ದ ಅನ್ವರ್ ಅವರು ಕೆಲ ಸಮಯದಿಂದ ಕೆಲಸವಿಲ್ಲದೆ ಮನೆಯಲ್ಲಿದ್ದರು ಎನ್ನಲಾಗಿದೆ. ಘಟನೆಗೆ ಎರಡು ದಿನಗಳ ಮುನ್ನ ಬೆಂಗಳೂರಿನಿಂದ ವಾಪಸ್ ಬಂದಿದ್ದರು ಎಂದು ವರದಿಯಾಗಿದೆ. ಗುರುವಾರ ದಂಪತಿಗಳ ನಡುವೆ ಮತ್ತೆ ಜಗಳ ನಡೆದಿದ್ದು, ಬಳಿಕ ಪತ್ನಿ ಮಗುವಿನೊಂದಿಗೆ ತನ್ನ ತವರು ಮನೆಗೆ ತೆರಳಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆಗೂ ಮುನ್ನ ಅನ್ವರ್ ಅವರು ಸಹೋದರಿಗೆ ವಿಡಿಯೋ ಕರೆ ಮಾಡಿ ಕುಟುಂಬದ ವಿಚಾರವಾಗಿ ತೊಂದರೆಯಾಗುತ್ತಿದೆ ಎಂದು ತಿಳಿಸಿದ್ದರು ಎನ್ನಲಾಗಿದೆ. ಇದರಿಂದ ಆತಂಕಗೊಂಡ ಕುಟುಂಬಸ್ಥರು ಬಾಡಿಗೆ ಮನೆಗೆ ತೆರಳಿದಾಗ ಅನ್ವರ್ ಯಾವುದೇ ಪ್ರತಿಕ್ರಿಯೆ ನೀಡದಿರುವುದು ಕಂಡುಬಂದಿದೆ.

ಮೂಡುಬಿದಿರೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರಿಸಿದ್ದಾರೆ.