ಉಡುಪಿ: ಪೋದಾರ್ ಅಂತರಾಷ್ಟ್ರೀಯ ಶಾಲೆಯಲ್ಲಿ ಕ್ರೀಡಾಸ್ಫೂರ್ತಿಗೆ ಸಾಕ್ಷಿಯಾದ ಕ್ರಾಸ್ ಕಂಟ್ರಿ ರೇಸ್

ಉಡುಪಿ: ಪೋದಾರ್ ಅಂತರಾಷ್ಟ್ರೀಯ ಶಾಲೆ, ಉಡುಪಿಯ ವಾರ್ಷಿಕ ಕ್ರೀಡಾಕೂಟದ ಅಂಗವಾಗಿ ಆಗಸ್ಟ್ 1ರಂದು ಶಾಲಾ ಆವರಣದಲ್ಲಿ ಕ್ರಾಸ್ ಕಂಟ್ರಿ ರೇಸ್‍ಅನ್ನು ಉತ್ಸಾಹಭರಿತವಾಗಿ ಆಯೋಜಿಸಲಾಯಿತು.

“Run for Health, Run for Future” (ಆರೋಗ್ಯಕ್ಕಾಗಿ ಓಡಿ, ಉತ್ತಮ ಭವಿಷ್ಯಕ್ಕಾಗಿ ಓಡಿ) ಎಂಬ ಧ್ಯೇಯವಾಕ್ಯದೊಂದಿಗೆ ನಡೆದ ಈ ಓಟದ ಸ್ಪರ್ಧೆಯು ವಿದ್ಯಾರ್ಥಿಗಳಲ್ಲಿ ಆರೋಗ್ಯಕರ ಜೀವನಶೈಲಿ, ದೈಹಿಕ ಸದೃಢತೆ ಹಾಗೂ ಕ್ರೀಡಾಸ್ಫೂರ್ತಿಯನ್ನು ಬೆಳೆಸುವ ಉದ್ದೇಶವನ್ನು ಹೊಂದಿತ್ತು. ಬೆಳಿಗ್ಗೆ 9 ಗಂಟೆಗೆ ಆರಂಭವಾದ ಸ್ಪರ್ಧೆಯಲ್ಲಿ ಕಿರಿಯ ಹಾಗೂ ಹಿರಿಯ ವಿಭಾಗದ ಬಾಲಕ ಮತ್ತು ಬಾಲಕಿಯರು ಅಪಾರ ಉತ್ಸಾಹದಿಂದ ಭಾಗವಹಿಸಿ ತಮ್ಮ ಸಾಮರ್ಥ್ಯ, ಆತ್ಮವಿಶ್ವಾಸ ಹಾಗೂ ಕ್ರೀಡಾ ಮನೋಭಾವವನ್ನು ಪ್ರದರ್ಶಿಸಿದರು.

ವಿದ್ಯಾರ್ಥಿಗಳಿಗಾಗಿ ಸ್ಪರ್ಧೆಯನ್ನು ನಾಲ್ಕು ಪ್ರತ್ಯೇಕ ವಿಭಾಗಗಳಲ್ಲಿ ಆಯೋಜಿಸಲಾಗಿತ್ತು. 5ರಿಂದ 8ನೇ ತರಗತಿಯ ವಿದ್ಯಾರ್ಥಿಗಳಿಗೆ ಕಿರಿಯ ಬಾಲಕ ಮತ್ತು ಬಾಲಕಿಯರ ವಿಭಾಗ ಹಾಗೂ 9 ಮತ್ತು 10ನೇ ತರಗತಿಯ ವಿದ್ಯಾರ್ಥಿಗಳಿಗೆ ಹಿರಿಯ ಬಾಲಕ ಮತ್ತು ಬಾಲಕಿಯರ ವಿಭಾಗಗಳಲ್ಲಿ ಸ್ಪರ್ಧೆ ನಡೆಯಿತು.

ಶಾಲಾ ಆವರಣದಿಂದ ಆರಂಭಗೊಂಡ ಓಟವು ಪರಂಪಳ್ಳಿ ಚರ್ಚ್ ಮಾರ್ಗವಾಗಿ ಬೊಬ್ಬೆಕಟ್ಟೆ ದೈವಸ್ಥಾನದವರೆಗೆ ಸಾಗಿತು. ಅಲ್ಲಿಂದ ಪುನಃ ಶಾಲಾ ಆವರಣಕ್ಕೆ ಮರಳುವ ಮೂಲಕ ಸ್ಪರ್ಧೆ ಯಶಸ್ವಿಯಾಗಿ ಮುಕ್ತಾಯಗೊಂಡಿತು.

ಶಾಲೆಯ ಅಂತರ್ ತರಗತಿಗಳ ನಡುವೆ ನಡೆದ ಈ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳು ಸಹಿಷ್ಣುತೆ, ಶಿಸ್ತು, ಕ್ರೀಡಾಸ್ಫೂರ್ತಿ ಹಾಗೂ ಆತ್ಮವಿಶ್ವಾಸವನ್ನು ಮೆರೆದರು. ಕಾರ್ಯಕ್ರಮಕ್ಕೆ ಶಾಲೆಯ ಪ್ರಾಂಶುಪಾಲರಾದ ಶ್ರೀಮತಿ ನೇತ್ರಾ ಹೆಚ್ ಅವರು ಧ್ವಜಾರೋಹಣ ಮಾಡುವ ಮೂಲಕ ಚಾಲನೆ ನೀಡಿದರು. ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಮಣಿಪಾಲ ಪೋಲಿಸ್ ಠಾಣೆಯ ಸಹಾಯಕ ಉಪನಿರೀಕ್ಷಕರಾದ ಮನೋಹರ್ ಎ.ಕೆ. ಅವರು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.

ದೈಹಿಕ ಶಿಕ್ಷಕರಾದ ಸಂಗಮೇಶ್, ಶಾಲಾ ಸಂಯೋಜಕರು ಹಾಗೂ ಶಿಕ್ಷಕ-ಶಿಕ್ಷಕೇತರ ಸಿಬ್ಬಂದಿಯವರು ಉಪಸ್ಥಿತರಿದ್ದು, ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುವುದರೊಂದಿಗೆ ಕಾರ್ಯಕ್ರಮದ ಸುಗಮ ನಿರ್ವಹಣೆಗೆ ಸಹಕರಿಸಿದರು.

ಶಿಕ್ಷಕರ ಮಾರ್ಗದರ್ಶನ ಹಾಗೂ ಎಲ್ಲರ ಸಹಕಾರದಿಂದ ಕ್ರಾಸ್ ಕಂಟ್ರಿ ರೇಸ್ ಕಾರ್ಯಕ್ರಮವು ಶಿಸ್ತುಬದ್ಧವಾಗಿ ಮತ್ತು ಯಶಸ್ವಿಯಾಗಿ ನೆರವೇರಿತು.