ನವದೆಹಲಿ: ಹಬ್ಬದ ಸೀಸನ್ ಆರಂಭಕ್ಕೂ ಮುನ್ನವೇ ಸಾಮಾನ್ಯ ಗ್ರಾಹಕರಿಗೆ ಬೆಲೆ ಏರಿಕೆಯ ಬಿಸಿ ತಟ್ಟುವ ಸಾಧ್ಯತೆ ಹೆಚ್ಚಿದೆ. ಟೂತ್‌ಪೇಸ್ಟ್, ಡಿಟರ್ಜೆಂಟ್, ವಾಲ್ ಪೇಂಟ್, ಟೈರ್ ಸೇರಿದಂತೆ ಹಲವು ದಿನನಿತ್ಯದ ಬಳಕೆಯ ವಸ್ತುಗಳ ಬೆಲೆಗಳನ್ನು ಹೆಚ್ಚಿಸಲು ಪ್ರಮುಖ ಕಂಪನಿಗಳು ಸಜ್ಜಾಗಿವೆ. ಪಶ್ಚಿಮ ಏಷ್ಯಾದಲ್ಲಿನ ಉದ್ವಿಗ್ನತೆ ಮತ್ತು ಕಚ್ಚಾ ವಸ್ತುಗಳ ಬೆಲೆ ಏರಿಕೆ ಇದಕ್ಕೆ ಪ್ರಮುಖ ಕಾರಣ ಎಂದು ಕಂಪನಿಗಳು ತಿಳಿಸಿವೆ.
ಬ್ಲೂಮ್ಬರ್ಗ್ ವರದಿ ಪ್ರಕಾರ, ಹಿಂದೂಸ್ತಾನ್ ಯೂನಿಲಿವರ್ (HUL), ಏಷ್ಯನ್ ಪೇಂಟ್ಸ್, ಹ್ಯಾವೆಲ್ಸ್, ಡೋಡ್ಲಾ ಡೈರಿ ಸೇರಿದಂತೆ ಕನಿಷ್ಠ ಎಂಟು ಪ್ರಮುಖ ಕಂಪನಿಗಳು ಸತತ ಎರಡನೇ ತ್ರೈಮಾಸಿಕದಲ್ಲೂ ಉತ್ಪನ್ನಗಳ ಬೆಲೆ ಹೆಚ್ಚಿಸುವ ಬಗ್ಗೆ ಸುಳಿವು ನೀಡಿವೆ. ಅಮೆರಿಕ–ಇರಾನ್ ನಡುವಿನ ಉದ್ವಿಗ್ನತೆಯಿಂದ ಕಚ್ಚಾ ತೈಲ ಹಾಗೂ ಇತರ ಮೂಲವಸ್ತುಗಳ ಬೆಲೆ ಏರಿಕೆಯಾಗಿದ್ದು, ಉತ್ಪಾದನಾ ವೆಚ್ಚ ಹೆಚ್ಚಿದೆ. ಇದರ ಪರಿಣಾಮವನ್ನು ಗ್ರಾಹಕರ ಮೇಲೆಯೇ ವರ್ಗಾಯಿಸಲು ಕಂಪನಿಗಳು ಮುಂದಾಗಿವೆ.
ವಿಮ್, ಸರ್ಫ್ ಎಕ್ಸೆಲ್ ಸೇರಿದಂತೆ ಹಲವು ಉತ್ಪನ್ನಗಳು ದುಬಾರಿ
ಹಿಂದೂಸ್ತಾನ್ ಯೂನಿಲಿವರ್ ಲಿಮಿಟೆಡ್ (HUL) ಮುಂದಿನ ಕೆಲ ತಿಂಗಳುಗಳಲ್ಲಿ ಡಿಟರ್ಜೆಂಟ್‌ಗಳು ಹಾಗೂ ಪಾತ್ರೆ ತೊಳೆಯುವ ಉತ್ಪನ್ನಗಳ ಬೆಲೆಯನ್ನು ಹಂತ ಹಂತವಾಗಿ ಹೆಚ್ಚಿಸುವುದಾಗಿ ತಿಳಿಸಿದೆ. ಕಂಪನಿಯ ವಿಮ್, ಸರ್ಫ್ ಎಕ್ಸೆಲ್, ರಿನ್, ವೀಲ್ ಸೇರಿದಂತೆ ಹಲವು ಜನಪ್ರಿಯ ಬ್ರ್ಯಾಂಡ್‌ಗಳ ಬೆಲೆ ಏರಿಕೆಯಾಗುವ ಸಾಧ್ಯತೆ ಇದೆ.
ಕಂಪನಿಯ ಮುಖ್ಯ ಹಣಕಾಸು ಅಧಿಕಾರಿ ನಿರಂಜನ್ ಗುಪ್ತಾ ಅವರ ಪ್ರಕಾರ, ಕಚ್ಚಾ ತೈಲ ಆಧಾರಿತ ಉತ್ಪನ್ನಗಳ ಬೆಲೆ ಏರಿಕೆಯಿಂದ ಉತ್ಪಾದನಾ ವೆಚ್ಚ ಹೆಚ್ಚಾಗಿದ್ದು, ಅದನ್ನು ಸರಿದೂಗಿಸಲು ಬೆಲೆ ಪರಿಷ್ಕರಣೆ ಅನಿವಾರ್ಯವಾಗಿದೆ.
ಪೇಂಟ್, ಸೋಪ್, ಟೂತ್‌ಪೇಸ್ಟ್, ತುಪ್ಪವೂ ದುಬಾರಿ
ಏಷ್ಯನ್ ಪೇಂಟ್ಸ್, ಡೋಡ್ಲಾ ಡೈರಿ ಸೇರಿದಂತೆ ಇತರ ಕಂಪನಿಗಳೂ ಬೆಲೆ ಹೆಚ್ಚಳದ ಯೋಜನೆ ರೂಪಿಸುತ್ತಿವೆ. ಇದರಿಂದ ಮನೆಗಳಿಗೆ ಬಣ್ಣ, ಸೋಪ್, ಟೂತ್‌ಪೇಸ್ಟ್, ತುಪ್ಪ, ಬೆಣ್ಣೆ ಸೇರಿದಂತೆ ಹಲವು ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುವ ಸಾಧ್ಯತೆ ಇದೆ.
ರಕ್ಷಾಬಂಧನ, ನವರಾತ್ರಿ, ದಸರಾ ಹಾಗೂ ದೀಪಾವಳಿ ಹಬ್ಬಗಳ ಅವಧಿಯಲ್ಲಿ ಕಂಪನಿಗಳ ವಾರ್ಷಿಕ ಮಾರಾಟದ ದೊಡ್ಡ ಪಾಲು ನಡೆಯುವುದರಿಂದ, ಈ ಅವಧಿಯಲ್ಲೇ ಬೆಲೆ ಹೆಚ್ಚಳ ಜಾರಿಗೆ ತರಲು ಕಂಪನಿಗಳು ಮುಂದಾಗಿವೆ.
ಬೇಡಿಕೆ ಸ್ಥಿರ, ಹಣದುಬ್ಬರ ಹೆಚ್ಚಳದ ಆತಂಕ
ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಗ್ರಾಹಕರ ಬೇಡಿಕೆ ಇನ್ನೂ ಸ್ಥಿರವಾಗಿದೆ. ಭಾರತೀಯ ಚಿಲ್ಲರೆ ವ್ಯಾಪಾರಿಗಳ ಸಂಘದ ಸಮೀಕ್ಷೆಯ ಪ್ರಕಾರ, ಜೂನ್ ತಿಂಗಳಲ್ಲಿ ಚಿಲ್ಲರೆ ಮಾರಾಟ ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇ.6ರಷ್ಟು ಹೆಚ್ಚಾಗಿದೆ.
ಆದರೆ ಜೂನ್‌ನಲ್ಲಿ ಚಿಲ್ಲರೆ ಹಣದುಬ್ಬರವು ಒಂದೂವರೆ ವರ್ಷಗಳ ಬಳಿಕ ಮೊದಲ ಬಾರಿಗೆ ಭಾರತೀಯ ರಿಸರ್ವ್ ಬ್ಯಾಂಕ್‌ನ ಶೇ.4 ಗುರಿಯನ್ನು ಮೀರಿದೆ. ಆಹಾರ ಧಾನ್ಯಗಳಷ್ಟೇ ಅಲ್ಲದೆ, ದಿನನಿತ್ಯದ ಬಳಕೆಯ ವಸ್ತುಗಳ ಬೆಲೆ ಏರಿಕೆಯಾಗುತ್ತಿರುವುದು ಸರ್ಕಾರ ಹಾಗೂ ಆರ್‌ಬಿಐಗೆ ಹೊಸ ಸವಾಲಾಗಿ ಪರಿಣಮಿಸಿದೆ. ಹಬ್ಬದ ಸೀಸನ್‌ನಲ್ಲಿ ಬೆಲೆ ಏರಿಕೆ ಮುಂದುವರಿದರೆ ಸಾಮಾನ್ಯ ಗ್ರಾಹಕರ ಜೇಬಿನ ಮೇಲಿನ ಹೊರೆ ಮತ್ತಷ್ಟು ಹೆಚ್ಚುವ ಸಾಧ್ಯತೆ ಇದೆ.















