ಅಂತರಾಷ್ಟ್ರೀಯ ಕ್ರಿಕೆಟ್ ಗೆ ಗುಡ್‌ಬೈ ಹೇಳಿದ ಅಜಿಂಕ್ಯ ರಹಾನೆ!

ಮುಂಬೈ: ಭಾರತದ ಅನುಭವಿ ಬ್ಯಾಟರ್ ಹಾಗೂ ಮಾಜಿ ನಾಯಕ ಅಜಿಂಕ್ಯ ರಹಾನೆ ಎಲ್ಲಾ ಮಾದರಿಯ ಕ್ರಿಕೆಟ್‌ಗೆ ಅಧಿಕೃತವಾಗಿ ನಿವೃತ್ತಿ ಘೋಷಿಸಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್ ಸೇರಿದಂತೆ ತಮ್ಮ ವೃತ್ತಿಪರ ಕ್ರಿಕೆಟ್ ಪಯಣಕ್ಕೆ ತೆರೆ ಎಳೆದಿರುವ ರಹಾನೆ, ಸಾಮಾಜಿಕ ಜಾಲತಾಣದ ಮೂಲಕ ಈ ಮಹತ್ವದ ನಿರ್ಧಾರವನ್ನು ಪ್ರಕಟಿಸಿದ್ದಾರೆ.

ಭಾರತ ತಂಡದ 278ನೇ ಟೆಸ್ಟ್ ಆಟಗಾರರಾಗಿರುವ ರಹಾನೆ, ಇನ್‌ಸ್ಟಾಗ್ರಾಂನಲ್ಲಿ ವಿಡಿಯೋ ಸಂದೇಶ ಹಂಚಿಕೊಂಡು “Cap 278 Signing Off” ಎಂಬ ಶೀರ್ಷಿಕೆಯೊಂದಿಗೆ ತಮ್ಮ ನಿವೃತ್ತಿಯನ್ನು ಘೋಷಿಸಿದರು.

ಭಾವನಾತ್ಮಕ ಸಂದೇಶದಲ್ಲಿ ಮಾತನಾಡಿದ 36 ವರ್ಷದ ರಹಾನೆ, “ಜೀವನದ ಪ್ರತಿಯೊಂದಕ್ಕೂ ಒಂದು ಆರಂಭ ಮತ್ತು ಅಂತ್ಯ ಇರುತ್ತದೆ. ಸರಿಯಾದ ಸಮಯ ಬಂದಾಗ ಅದನ್ನು ಗೌರವಿಸಿ ಮುಂದುವರಿಯಬೇಕು. ನನ್ನ ಬ್ಯಾಟಿಂಗ್‌ನಲ್ಲಿ ನಾನು ಯಾವಾಗಲೂ ಸಮಯಕ್ಕೆ ಮಹತ್ವ ನೀಡಿದ್ದೆ. ಈಗ ನನ್ನ ಕ್ರಿಕೆಟ್ ಜೀವನಕ್ಕೂ ವಿದಾಯ ಹೇಳಲು ಇದೇ ಸರಿಯಾದ ಸಮಯ ಎಂದು ಭಾವಿಸಿದ್ದೇನೆ” ಎಂದು ಹೇಳಿದ್ದಾರೆ.

“ಚಿಕ್ಕ ವಯಸ್ಸಿನಿಂದಲೇ ಭಾರತದ ಕ್ಯಾಪ್ ಧರಿಸಿ ದೇಶವನ್ನು ಪ್ರತಿನಿಧಿಸುವುದೇ ನನ್ನ ದೊಡ್ಡ ಕನಸಾಗಿತ್ತು. ಆ ಕನಸು ನನಸಾಗಿದ್ದು ನನ್ನ ಜೀವನದ ಅತ್ಯಂತ ಹೆಮ್ಮೆಯ ಕ್ಷಣ. ದೇಶ ಮತ್ತು ತಂಡಕ್ಕೆ ಯಾವಾಗಲೂ ಮೊದಲ ಆದ್ಯತೆ ನೀಡಿ ಸಂಪೂರ್ಣ ಪ್ರಾಮಾಣಿಕತೆಯಿಂದ ಆಡಿದ್ದೇನೆ” ಎಂದು ರಹಾನೆ ಹೇಳಿದ್ದಾರೆ.

ಇದೇ ವೇಳೆ, “ರಣಜಿ ಟ್ರೋಫಿಯಿಂದ ಆರಂಭವಾದ ನನ್ನ ಪಯಣದಲ್ಲಿ ಕಳೆದ 20 ವರ್ಷಗಳಲ್ಲಿ ಭಾರತೀಯ ಕ್ರಿಕೆಟ್ ಬೆಳೆದ ರೀತಿಯನ್ನು ನೋಡುವುದು ಹೆಮ್ಮೆಯ ವಿಷಯ. ಭಾರತೀಯ ಕ್ರಿಕೆಟಿಗನಾಗಿ ನನ್ನ ಅಧ್ಯಾಯ ಮುಗಿದಿರಬಹುದು. ಆದರೆ ಕ್ರಿಕೆಟ್ ಜೊತೆಗಿನ ನನ್ನ ಸಂಬಂಧ ಎಂದಿಗೂ ಮುಗಿಯುವುದಿಲ್ಲ. ಮುಂದಿನ ಪೀಳಿಗೆಯ ಆಟಗಾರರಿಗೆ ಮಾರ್ಗದರ್ಶನ ನೀಡುವ ಮೂಲಕ ಕ್ರಿಕೆಟ್‌ಗೆ ನನ್ನ ಕೊಡುಗೆಯನ್ನು ಮುಂದುವರಿಸುತ್ತೇನೆ” ಎಂದು ತಿಳಿಸಿದ್ದಾರೆ.

ಭಾರತ ಪರ ಹಲವು ಸ್ಮರಣೀಯ ಇನ್ನಿಂಗ್ಸ್‌ಗಳನ್ನು ಆಡಿರುವ ಅಜಿಂಕ್ಯ ರಹಾನೆ, ಟೆಸ್ಟ್ ಕ್ರಿಕೆಟ್‌ನಲ್ಲಿ ತಂಡದ ಪ್ರಮುಖ ಆಧಾರಸ್ತಂಭರಾಗಿದ್ದರು. ಆಸ್ಟ್ರೇಲಿಯಾ ನೆಲದಲ್ಲಿ ಭಾರತ ದಾಖಲಿಸಿದ್ದ ಐತಿಹಾಸಿಕ ಟೆಸ್ಟ್ ಸರಣಿ ಗೆಲುವಿನಲ್ಲಿ ನಾಯಕನಾಗಿ ತಂಡವನ್ನು ಮುನ್ನಡೆಸಿದ್ದ ರಹಾನೆ ಅವರ ಕೊಡುಗೆ ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಸದಾ ಸ್ಮರಣೀಯವಾಗಿರಲಿದೆ.