ಮಿಷನ್ ಏಡ್ಸ್ ಸುರಕ್ಷಾ ಮೊಬಿಲೈಸೇಷನ್ ಅಭಿಯಾನವನ್ನು ಸಮರ್ಪಕವಾಗಿ ಅನುಷ್ಟಾನ ಮಾಡಿ: ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ್

ಉಡುಪಿ: ಸರಕಾರ ಹೆಚ್.ಐ.ವಿ ಸೋಂಕಿನ ಬಗ್ಗೆ ಅರಿವು ಮೂಡಿಸುವುದು ಹಾಗೂ ಹೆಚ್.ಐ.ವಿ ಸೋಂಕಿನ ಬಗ್ಗೆ ತಿಳಿದಿಲ್ಲದ ಜನರನ್ನು ಗುರುತಿಸಿ, ಚಿಕಿತ್ಸೆ ನೀಡಲು ಅನುಕೂಲವಾಗುವಂತೆ ಮಿಷನ್ ಏಡ್ಸ್ ಸುರಕ್ಷಾ ಮೊಬಿಲೈಸೇಷನ್ ಅಭಿಯಾನವನ್ನು ಆರಂಭಿಸಿದ್ದು, ಇದು ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ್ ಅಧಿಕಾರಿಗಳಿಗೆ ಕರೆ ನೀಡಿದರು.

ಅವರು ಮಂಗಳವಾರ ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದ ಮೊದಲನೇ ಮಹಡಿ ಸಭಾಂಗಣದಲ್ಲಿ, “ಜಿಲ್ಲಾ ಫಸ್ಟ್ 95 ಸಮಿತಿ” ಹಾಗೂ “ಜಿಲ್ಲಾ ಜಂಟಿ ಕಾರ್ಯಪಡೆ ಸಭೆಯ ಅದ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.

ಭಾರತದಲ್ಲಿ ಹೆಚ್.ಐ.ವಿ. ಸೋಂಕಿನ ಹರಡುವಿಕೆಯನ್ನು ನಿಯಂತ್ರಿಸುವ ಉದ್ದೇಶದಿಂದ ಮೊಬಿಲೈಸೇಷನ್ ಫಾರ್ ಏಡ್ಸ್ ಸುರಕ್ಷಾ (ಎಂ.ಎ.ಎಸ್) ಕಾರ್ಯಕ್ರಮವನ್ನು ಜಾರಿಗೆ ತರಲಾಗಿದ್ದು, 2027ರ ಡಿಸೆಂಬರ್ 1ರ ವಿಶ್ವ ಏಡ್ಸ್ ದಿನದೊಳಗೆ ಜಿಲ್ಲೆಯಲ್ಲಿ ಹೆಚ್.ಐ.ವಿ ಸಾಂಕ್ರಾಮಿಕವನ್ನು ಪರಿಣಾಮಕಾರಿಯಾಗಿ ನಿಯಂತ್ರಿಸುವುದು ಗುರಿ ಹೊಂದಲಾಗಿದೆ. ಈ ಕಾರ್ಯಕ್ರಮವು 95-95-99 ಗುರಿಗಳನ್ನು ಪರಿಣಾಮಕಾರಿಯಾಗಿ ಸಾಧಿಸುವತ್ತ ಕೇಂದ್ರಿಕರಿಸಿದ್ದು, ಅಭಿಯಾನವು 2026 ಡಿಸೆಂಬರ್‌ವರೆಗೆ ಚಾಲ್ತಿಯಲ್ಲಿರಲಿದ್ದು ಕಾರ್ಯಕ್ರಮವನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡುವಂತೆ ತಿಳಿಸಿದರು.

ಜಿಲ್ಲೆಯಲ್ಲಿ 5790 ಹೆಚ್.ಐ.ವಿ ಸೋಂಕಿತರು ಜೀವನ ನಡೆಸುತ್ತಿದ್ದಾರೆ ಎಂದು ಅಂದಾಜಿಸಲಾಗಿದ್ದು, ಪ್ರಸ್ತುತ ಜಿಲ್ಲೆಯಲ್ಲಿ 4691 ಜನರು ಮಾತ್ರ ತಮ್ಮ ಹೆಚ್.ಐ.ವಿ ಸ್ಥಿತಿಯನ್ನು ತಿಳಿದುಕೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು 1141 ಜನರಿಗೆ ಹೆಚ್.ಐ.ವಿ ಸೋಂಕು ಇದ್ದರೂ ಅವರು ತಮ್ಮ ಹೆಚ್.ಐ.ವಿ ಸ್ಥಿತಿಯನ್ನು ಇನ್ನೂ ತಿಳಿದುಕೊಂಡಿಲ್ಲ ಅವರನ್ನು ಪತ್ತೆ ಹಚ್ಚಿ ಚಿಕಿತ್ಸೆ ನೀಡಬೇಕಾಗಿರುತ್ತದೆ. ಇವರನ್ನು ಪತ್ತೆ ಹಚ್ಚಲು ಸರಕಾರ ನಾನಾ ಉಪಕ್ರಮಗಳನ್ನು ಕೈಗೊಂಡಿದೆ.

ಜನಸಾಮಾನ್ಯರಲ್ಲಿ ಈ ಕಾರ್ಯಕ್ರಮದ ಬಗ್ಗೆ ಹೆಚ್ಚು ಹೆಚ್ಚು ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರ ಜೊತೆಗೆ ಅವರುಗಳೆ ಸ್ವಯಂ ಪ್ರೇರಿತರಾಗಿ ಹೆಚ್.ಐ.ವಿ ಪರೀಕ್ಷೆಗೆ ಸಂಬoಧಿಸಿದ ಕ್ಯೂ ಆರ್ ಕೋಡ್ ಸ್ಕಾö್ಯನ್ ಮಾಡಿ ಅಲ್ಲಿ ನೀಡುವ ಪ್ರಶ್ನೆಗಳಿಗೆ ಉತ್ತರಿಸಿ, ಸಂಶಯ ಬಂದಲ್ಲಿ ಹೆಚ್.ಐ.ವಿ ಪರೀಕ್ಷೆಗಳನ್ನು ಮಾಡಿಸಿಕೊಳ್ಳುವಂತೆ ಉತ್ತೇಜನ ಮಾಡಬೇಕೆಂದರು.

ಯುವ ಸಮುದಾಯವು ಹೆಚ್ಚಿರುವ ಶಾಲಾ-ಕಾಲೇಜುಗಳಲ್ಲಿ ಏಡ್ಸ್ ರೋಗದ ನಿಯಂತ್ರಣ, ಹರಡುವಿಕೆ, ಗುರುತಿಸುವಿಕೆ ಹಾಗೂ ಚಿಕಿತ್ಸೆಯ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂದ ಅವರು, ಸಂಘ-ಸoಸ್ಥೆಗಳು, ಯುವಕ ಸಂಘಗಳು ಹಾಗೂ ಎನ್.ಜಿ.ಓ ಗಳ ಸಹಯೋಗದೊಂದಿಗೆ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಮುಂದಾಗಬೇಕು ಎಂದರು.

ಸಭೆಯಲ್ಲಿ ಜಿಲ್ಲಾ ಏಡ್ಸ್ ರೋಗ ನಿಯಂತ್ರಣಾಧಿಕಾರಿ ಡಾ. ಚಿದಾನಂದ ಸಂಜು, ಜಿಲ್ಲಾ ಸರ್ಜನ್ ಡಾ. ಹೆಚ್.ಅಶೋಕ್, ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿ ಡಾ. ಜ್ಯೋತ್ಸ್ನಾ ಬಿ.ಕೆ ಹಾಗೂ ಮತ್ತಿತರರು ಉಪಸ್ಥಿತರಿದ್ದರು.