ಶಿರಿಯಾರದಲ್ಲಿ ಕಾಡುಕೋಣಗಳ ಹಿಂಡು ಪ್ರತ್ಯಕ್ಷ; ಗ್ರಾಮಸ್ಥರಲ್ಲಿ ಆತಂಕ

ಉಡುಪಿ: ಬ್ರಹ್ಮಾವರ ತಾಲೂಕಿನ ಶಿರಿಯಾರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬುಧವಾರ ಕಾಡುಕೋಣಗಳ ಹಿಂಡು ಪ್ರತ್ಯಕ್ಷವಾಗಿದ್ದು, ಗ್ರಾಮಸ್ಥರಲ್ಲಿ ಆತಂಕಕ್ಕೆ ಕಾರಣವಾಗಿದೆ.

ಅರಣ್ಯ ಪ್ರದೇಶದಿಂದ ಆಗಾಗ ನಾಡಿನತ್ತ ಬರುತ್ತಿರುವ ಕಾಡುಕೋಣಗಳು ಕೃಷಿ ಬೆಳೆಗಳಿಗೆ ಹಾನಿ ಉಂಟುಮಾಡುತ್ತಿವೆ. ಈ ಬಾರಿ ಹಗಲು ಹೊತ್ತಿನಲ್ಲೇ ಕಾಡುಕೋಣಗಳ ಹಿಂಡು ಗ್ರಾಮದಲ್ಲಿ ನಿರ್ಭಯವಾಗಿ ಸಂಚರಿಸಿದ್ದು, ಸ್ಥಳೀಯರು ಮೊಬೈಲ್‌ಗಳಲ್ಲಿ ಅದರ ದೃಶ್ಯಗಳನ್ನು ಸೆರೆಹಿಡಿದಿದ್ದಾರೆ.

ಈ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿವೆ.

ಕಾಡುಕೋಣಗಳ ನಿರಂತರ ಹಾವಳಿಯಿಂದ ಜೀವ ಹಾಗೂ ಆಸ್ತಿಗೆ ಅಪಾಯ ಉಂಟಾಗುವ ಭೀತಿ ಎದುರಾಗಿದ್ದು, ಸಮಸ್ಯೆ ನಿಯಂತ್ರಣಕ್ಕೆ ಅರಣ್ಯ ಇಲಾಖೆ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.