ಕಾಲೇಜು ವಿದ್ಯಾರ್ಥಿಗಳ ಮೇಲೆ ಪೊಲೀಸರ ದಿಢೀರ್ ಡ್ರಗ್ ಟೆಸ್ಟ್; ಒಬ್ಬ ವಿದ್ಯಾರ್ಥಿ ಪಾಸಿಟಿವ್!

ಮಂಗಳೂರು: ಯುವಜನರಲ್ಲಿ ಮಾದಕ ವಸ್ತುಗಳ ಬಳಕೆಯನ್ನು ತಡೆಗಟ್ಟುವ ಉದ್ದೇಶದಿಂದ ಮಂಗಳೂರು ನಗರ ಪೊಲೀಸರು ಕಾಲೇಜು ವಿದ್ಯಾರ್ಥಿಗಳ ಮೇಲೆ ದಿಢೀರ್ ಡ್ರಗ್ ಪರೀಕ್ಷೆ ನಡೆಸಿದ್ದಾರೆ. ಕೋಟೆಕಾರ್ ಬೀರಿ ಹಾಗೂ ಕೊಣಾಜೆಯ ಬಂಟ್ಸ್ ಭವನದ ಸಮೀಪ ನಡೆದ ಈ ಕಾರ್ಯಾಚರಣೆಯಲ್ಲಿ ಒಟ್ಟು 159 ವಿದ್ಯಾರ್ಥಿಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು, ಈ ಪೈಕಿ ಒಬ್ಬ ವಿದ್ಯಾರ್ಥಿ ಮಾತ್ರ ಡ್ರಗ್ ಪರೀಕ್ಷೆಯಲ್ಲಿ ಪಾಸಿಟಿವ್ ಬಂದಿದ್ದಾನೆ.

ಕಾಲೇಜು ಬಸ್‌ಗಳನ್ನು ತಡೆದು ದಿಢೀರ್ ತಪಾಸಣೆ

ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ಅವರ ಮೇಲ್ವಿಚಾರಣೆಯಲ್ಲಿ ಕಾರ್ಯಾಚರಣೆ ನಡೆದಿದ್ದು, ದಕ್ಷಿಣ ಹಾಗೂ ಕೇಂದ್ರ ಉಪವಿಭಾಗದ ಎಸಿಪಿಗಳು ಕಾರ್ಯಾಚರಣೆಯನ್ನು ಸಮನ್ವಯಗೊಳಿಸಿದರು. ಸಂಜೆ 4.30ರಿಂದ 6 ಗಂಟೆಯವರೆಗೆ ನಡೆದ ಕಾರ್ಯಾಚರಣೆಯಲ್ಲಿ ಖಾಸಗಿ ಹಾಗೂ ಕಾಲೇಜು ಬಸ್‌ಗಳನ್ನು ತಡೆದು ವಿದ್ಯಾರ್ಥಿಗಳನ್ನು ಮಲ್ಟಿ ಡ್ರಗ್ ಟೆಸ್ಟಿಂಗ್ ಕಿಟ್ ಮೂಲಕ ಪರೀಕ್ಷಿಸಲಾಯಿತು.

ಪಾಸಿಟಿವ್ ಬಂದ ವಿದ್ಯಾರ್ಥಿಗೆ ಕೌನ್ಸೆಲಿಂಗ್

ಹಲವು ಕಾಲೇಜುಗಳ ಒಟ್ಟು 159 ವಿದ್ಯಾರ್ಥಿಗಳ ಪೈಕಿ ಒಬ್ಬ ವಿದ್ಯಾರ್ಥಿ ಮಾತ್ರ ಪಾಸಿಟಿವ್ ಬಂದಿರುವುದು ಸಮಾಧಾನಕರ ಸಂಗತಿಯಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ವಿದ್ಯಾರ್ಥಿಗಳಲ್ಲಿ ಡ್ರಗ್ ಸೇವನೆಯ ಪ್ರಮಾಣ ಕಡಿಮೆಯಾಗುತ್ತಿರುವ ಲಕ್ಷಣ ಕಂಡುಬಂದರೂ, ಮಾದಕ ವಸ್ತುಗಳ ಬಳಕೆಯನ್ನು ಸಂಪೂರ್ಣವಾಗಿ ತಡೆಗಟ್ಟಲು ಇನ್ನಷ್ಟು ಕ್ರಮಗಳ ಅಗತ್ಯವಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಡ್ರಗ್ ಪರೀಕ್ಷೆಯಲ್ಲಿ ಪಾಸಿಟಿವ್ ಬಂದ ವಿದ್ಯಾರ್ಥಿಯ ವಿರುದ್ಧ ಅಗತ್ಯ ಕಾನೂನು ಪ್ರಕ್ರಿಯೆ ಪೂರ್ಣಗೊಳಿಸಿದ ಬಳಿಕ ಕೌನ್ಸೆಲಿಂಗ್‌ಗೆ ಕಳುಹಿಸಲಾಗುವುದು. ಪ್ರಕರಣದ ಮುಂದಿನ ಹಂತದ ಮೇಲ್ವಿಚಾರಣೆ ಹಾಗೂ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.