ಉಡುಪಿ: ಸರಕಾರ ಪರಿಶಿಷ್ಟ ಜಾತಿ ಹಾಗೂ ಪಂಗಡದವರ ಕಲ್ಯಾಣ ಅಭಿವೃದ್ಧಿಗೆ ಜಾರಿಗೆ ತಂದಿರುವ ಯೋಜನೆಗಳು, ಕಾರ್ಯಕ್ರಮಗಳು, ವಿಶೇಷ ಕಾಯ್ದೆಗಳನ್ನು ನಿಯಮಾನುಸಾರ ಅನುಷ್ಠಾನಗೊಳಿಸಿ, ಅರ್ಹ ಫಲಾನುಭವಿಗಳಿಗೆ ಅನುಕೂಲ ಮಾಡಿಕೊಡಬೇಕೆಂದು ಜಿಲ್ಲಾಧಿಕಾರಿ ಸ್ವರೂಪ ಟಿ. ಕೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಅವರು ಇಂದು ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ನಡೆದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನಾಂಗದವರ ಹಿತ ರಕ್ಷಣಾ ಹಾಗೂ ಕುಂದು ಕೊರತೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಸರ್ವಾಂಗೀಣ ಅಭಿವೃದ್ಧಿಗಾಗಿ ಅನೇಕ ಯೋಜನೆಗಳು, ಕಾರ್ಯಕ್ರಮಗಳು, ವಿಶೇಷ ಕಾಯಿದೆಗಳು ಹಾಗೂ ಅನುದಾನಗಳನ್ನು ಒದಗಿಸುವುದು ಸೇರಿದಂತೆ ಮತ್ತಿತರ ಸೌಲಭ್ಯಗಳನ್ನು ಜಾರಿಗೆ ತಂದಿದೆ. ಇವುಗಳು ಪ್ರತಿಯೊಬ್ಬ ಅರ್ಹ ಫಲಾನುಭವಿಗಳು ಇದೆ ಲಾಭ ಪಡೆಯುವಂತೆ ನೋಡಿಕೊಳ್ಳುವುದು ಅಧಿಕಾರಿಗಳ ಆದ್ಯ ಕರ್ತವ್ಯವಾಗಿದೆ ಎಂದರು.
ಜಿಲ್ಲೆಯ ತಾಲೂಕುಗಳಲ್ಲಿ ಲಭ್ಯವಿರುವ ಡಿ.ಸಿ ಮನ್ನಾ ಜಾಗವನ್ನು ಗುರುತಿಸಿ, ಅರ್ಹ ಭೂ ರಹಿತ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನರಿಗೆ ಹಂಚಿಕೆ ಮಾಡಲು ತಾಲೂಕಿನ ತಹಶೀಲ್ದಾರರುಗಳು ಕ್ರಮವಹಿಸಬೇಕೆಂದರು. ಜಿಲ್ಲೆಯಲ್ಲಿರುವ ದೇವಸ್ಥಾನಗಳ ವ್ಯವಸ್ಥಾಪನ ಸಮಿತಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಸದಸ್ಯರುಗಳನ್ನು ನೇಮಕ ಮಾಡಿಕೊಳ್ಳಬೇಕು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನಾಂಗದವರಿಗೆ ಸರಕಾರಿ ಯೋಜನೆಯ ಸೌಲಭ್ಯಗಳಿಗೆ ಆಯ್ಕೆಯಾಗಿ ಸ್ವ-ಉದ್ಯೋಗ ಕೈಗೊಳ್ಳಲು ಆರ್ಥಿಕ ನೆರವನ್ನು ನೀಡಲು ಬ್ಯಾಂಕ್‌ಗಳಿಗೆ ವಿವಿಧ ಇಲಾಖೆಗಳಿಂದ ಶಿಫಾರಸ್ಸು ಮಾಡಿ, ಅರ್ಜಿಗಳನ್ನು ಕಳುಹಿಸಿದಾಗ ಅವರುಗಳ ಆರ್ಥಿಕ ನೆರವುಗಳನ್ನು ನೀಡಲು ಸತಾಯಿಸದೇ ಅರ್ಜಿಗಳನ್ನು ಆದ್ಯತೆಯ ಮೇಲೆ ಪರಿಶೀಲಿಸಿ ಸ್ವಂತ ಉದ್ಯೋಗ ಕೈಗೊಂಡು ಸ್ವಾವಲಂಭಿಗಳಾಗಿ ಜೀವಿಸಲು ಅನುಕೂಲ ಮಾಡಿಕೊಡಬೇಕು. ಈ ಬಗ್ಗೆ ಲೀಡ್ ಬ್ಯಾಂಕ್ ಅಧಿಕಾರಿಗಳು ಕ್ರಮವಹಿಸಬೇಕೆಂದು ಸೂಚನೆ ನೀಡಿದರು.
ಸರಕಾರವು ಪರಿವಾರ ನಾಯಕ ಜಾತಿಯನ್ನು ಪರಿಶಿಷ್ಟ ಪಂಗಡವಾಗಿ ಪರಿಗಣಿಸಿ, ಅಧಿಸೂಚನೆ ಹೊರಡಿಸಿದ್ದು, ಕೆಲವರು ಪರಿವಾರ ನಾಯಕ ಪರಿಶಿಷ್ಟ ಪಂಗಡ ಜಾತಿ ಪ್ರಮಾಣ ಪತ್ರವನ್ನು ಪಡೆದು ಕೊಂಡಿದ್ದು, ಇನ್ನೂ ಕೆಲವರು ಜಾತಿ ಪ್ರಮಾಣ ಪತ್ರಕ್ಕಾಗಿ ಅರ್ಜಿ ಸಲ್ಲಿಸಿದರೂ ನೀಡುತ್ತಿಲ್ಲ ಎಂಬ ದೂರುಗಳು ಕೇಳಿ ಬರುತ್ತಿವೆ. ತಹಶೀಲ್ದಾರ್ ಗಳು ಅರ್ಜಿಗಳನ್ನು ನಿಯಮಾನುಸಾರ ಪರಿಶೀಲಿಸಿ, ಅರ್ಹರಿಗೆ ಜಾತಿ ಪ್ರಮಾಣ ಪತ್ರ ಲಭಿಸುವಂತೆ ನೋಡಿಕೊಳ್ಳಬೇಕು ಎಂದರು.
ಉಡುಪಿ ನಗರಸಭೆ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ 4350 ಕ್ಕೂ ಹೆಚ್ಚು ಜನರಿಗೆ ಆರೋಗ್ಯ ವಿಮೆಯ ಹೆಲ್ತ್ ಕಾರ್ಡ್ಗಳನ್ನು ವಿತರಿಸಲಾಗಿದೆ. ಆರೋಗ್ಯ ವಿಮೆಯು ಹೆಚ್.ಡಿ.ಎಫ್.ಸಿ ಕಂಪನಿಗೆ ನೀಡಲಾಗಿದ್ದು, ಕೆಲವು ತಾಂತ್ರಿಕ ತೊಂದರೆ ಸೇರಿದಂತೆ ಮತ್ತಿತರ ಕಾರಣಗಳಿಂದ ಈ ಯೋಜನೆಗಳ ಲಾಭವನ್ನು ಸರಿಯಾಗಿ ಪಡೆಯಲು ಆಗುತ್ತಿಲ್ಲ. ಈ ಬಗ್ಗೆ ಕ್ರಮವಹಿಸಬೇಕೆಂದು ನಗರಸಭೆ ಆಯುಕ್ತರಿಗೆ ಸೂಚನೆ ನೀಡಿದ ಅವರು, ಪ್ರಸ್ತುತ ಮುಂದಿನ ಸಾಲಿನಲ್ಲಿ ವಿಮಾ ಹೆಲ್ತ್ ಕಾರ್ಡ್ಗಳನ್ನು ಕೊಡುವಾಗ ಸರಿಯಾದ ಕಂಪನಿಗಳಿಗೆ ನೀಡುವಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದರು.
ಉಡುಪಿ ತಾಲೂಕಿನ ಲ್ಯಾಂಪ್ಸ್ ಸೊಸೈಟಿಯು ಕಳೆದ 50 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದೆ. ಲ್ಯಾಂಪ್ಸ್ ಸೊಸೈಟಿಗಳಲ್ಲಿ ಕೊರಗ ಸಮುದಾಯದವರಿಗೂ ಉದ್ಯೋಗಾವಕಾಶಗಳನ್ನು ನೀಡಬೇಕೆಂಬ ದೂರುಗಳು ಕೇಳಿ ಬರುತ್ತಿವೆ. ಈ ಬಗ್ಗೆ ಮುಂಬರುವ ದಿನಗಳಲ್ಲಿ ಉದ್ಯೋಗಕ್ಕೆ ನೇಮಕ ಮಾಡಿಕೊಳ್ಳುವಾಗ ಕೊರಗ ಸಮುದಾಯದವರಿಗೆ ಆದ್ಯತೆಯ ಮೇಲೆ ನೇಮಕಾತಿಗೆ ಮಾಡಿಕೊಳ್ಳಲು ಅವಕಾಶ ಕಲ್ಪಿಸಬೇಕು ಎಂದರು.
ಸರಕಾರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರು ವಾಸಿಸುವ ಕಾಲೋನಿಗಳಲ್ಲಿ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲು ಅನುದಾನವನ್ನು ಸರಕಾರ ಮೀಸಲಿರಿಸಿರುತ್ತದೆ. ಆದರೆ ಸರಕಾರದ ನಿಯಮಾನುಸಾರ ಅವರ ಕಾಲೋನಿಗಳಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳದೇ ಇತರರು ವಾಸಿಸುವ ಪ್ರದೇಶದಲ್ಲಿ ಕೈಗೊಳ್ಳಲಾಗುತ್ತಿದೆ ಎಂಬ ದೂರುಗಳು ಕೇಳಿ ಬರುತ್ತಿವೆ. ಒಂದೊಮ್ಮೆ ಉಲ್ಲಂಘಿಸಿ, ಕಾಮಗಾರಿ ಕೈಗೊಂಡಲ್ಲಿ ಅಂತವರ ಮೇಲೆ ನಿಯಮನುಸಾರ ಕ್ರಮ ಕೈಗೊಳ್ಳಲಾಗುವುದು ಎಂದರು.
ಮಲ್ಪೆ ಭಾಗದಲ್ಲಿ ನೂರಾರು ಎಸ್.ಸಿ/ ಎಸ್.ಟಿ ಕುಟುಂಬಗಳು ವಾಸಿಸುತ್ತಿವೆ. ಅವರ ಜೀವನೋಪಾಯಕ್ಕಾಗಿ ಬೀಚ್‌ಗಳಲ್ಲಿ ವಾಣಿಜ್ಯ ಚಟುವಟಿಕೆಗಳನ್ನು ಕೈಗೊಳ್ಳಲು ಪ್ರವಾಸೋದ್ಯಮ ಇಲಾಖೆಯ ಅಂಗಡಿ ಕೋಣೆಗಳನ್ನು ಏಲಂ ಮಾಡುವಾಗ ಎಸ್.ಸಿ./ ಎಸ್.ಟಿ ಸಮುದಾಯದವರಿಗೂ ನಿಯಮಾನುಸಾರ ಮೀಸಲಾತಿ ಕಲ್ಪಿಸುವ ಬಗ್ಗೆ, ವಾಟರ್ ಸ್ಪೋರ್ಟ್, ಪ್ರವಾಸಿ ದೋಣಿ ಸೇರಿದಂತೆ ಮತ್ತಿತರ ಪ್ರವಾಸೋದ್ಯಮ ಚಟುವಟಿಕೆಗಳ ಟೆಂಡರ್‌ಗಳಲ್ಲಿಯೂ ಮೀಸಲಾತಿ ಕಲ್ಪಿಸಲು ಬೇಡಿಕೆ ಇದೆ. ಮುಂಬರುವ ದಿನಗಳಲ್ಲಿ ಇದನ್ನು ಪರಿಗಣಿಸಿ, ಅವಕಾಶ ಕಲ್ಪಿಸಬೇಕು ಎಂದರು.
ಗ್ರಾಮ ಪಂಚಾಯಿತಿ ಶೇ. 25 ರ ಮೀಸಲಿರಿಸಿರುವ ಅನುದಾನದಲ್ಲಿ ಎಸ್.ಸಿ./ ಎಸ್.ಟಿ ಸಮುದಾಯದವರಿಗೆ ಶವ ಸಂಸ್ಕಾರ ನೆರವೇರಿಸಲು 5000 ರೂ. ನೀಡಲಾಗುತ್ತಿತ್ತು. ಆದರೆ ಇದು ಸಾಕಾಗುತ್ತಿಲ್ಲ. ಈ ಮೊತ್ತವನ್ನು 15000 ರೂ.ಗಳಿಗೆ ಹೆಚ್ಚಿಸಬೇಕೆಂದು ಕೇಳಿ ಬರುತ್ತಿದೆ. ಈ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಸೂಚನೆ ನೀಡಿದರು.
ಸಭೆಯಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಮುಖಂಡರುಗಳು, ನಿವೇಶನ ರಹಿತ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಜನಾಂಗದವರಿಗೆ ಡಿ. ಸಿ ಮನ್ನಾ ಜಮೀನು ಹಂಚಿಕೆ ಮಾಡುವಂತೆ, ಪರಿಸರ ವಿರೋಧಿ ಗುಡಿ ಕೈಗಾರಿಕೆಯ ಪರವಾನಿಗೆ ರದ್ದುಪಡಿಸುವಂತೆ, ಎಸ್.ಸಿ/ ಎಸ್. ಟಿ ಅನುದಾನ ದುರುಪಯೋಗ ಆಗದಂತೆ, ಕಾಮಗಾರಿ ಟೆಂಡರ್ ಕರೆಯುವಾಗ ಮೀಸಲಾತಿ ಕಲ್ಪಿಸುವ ಬಗ್ಗೆ, ಅಂಬೇಡ್ಕರ್ ಭವನ ನಿರ್ಮಾಣ ಮಾಡುವ ಬಗ್ಗೆ, ಕಾಲೋನಿಗಳ ಜನರಿಗೆ ಫ್ಯಾಕ್ಟರಿಗಳಿಂದ ಹೊರ ಸೂಸುವ ತ್ಯಾಜ್ಯದಿಂದ ಆಗುವ ಅನಾನುಕೂಲದ ಬಗ್ಗೆ, ನಿವೇಶನ ಮಂಜೂರು ಮಾಡುವ ಬಗ್ಗೆ ಸೇರಿದಂತೆ ಮತ್ತಿತರ ಕುಂದು ಕೊರತೆಗಳ ಮನವಿಗಳ ಬಗ್ಗೆ ಚರ್ಚಿಸಲಾಯಿತು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್, ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಮ್ ಶಂಕರ್, ಡಿ. ಎಫ್. ಓ ರುಥ್ರೇನ್ ಪಿ, ಸಹಾಯಕ ಕಮಿಷನರ್ ರಶ್ಮಿ, ಹೆಚ್ಚುವರಿ ಪೊಲೀಸ್ ವರಿಷ್ಟಾಧಿಕಾರಿ ಸುಧಾಕರ್ ನಾಯಕ್, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕಿ ಅನಿತಾ ಮಡ್ಲುರು, ಜಿಲ್ಲಾ ಮಟ್ಟದ ಅಧಿಕಾರಿಗಳು, ತಾಲೂಕು ತಹಶೀಲ್ದಾರ್ ಗಳು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಮುಖಂಡರು ಹಾಗೂ ಮತ್ತಿತರರು ಉಪಸ್ಥಿತರಿದ್ದರು.















