ಉಡುಪಿ: ಕರ್ನಾಟಕ ಲೋಕಸೇವಾ ಆಯೋಗದಲ್ಲಿ (ಕೆಪಿಎಸ್ ಸಿ) ಒಂದರ ಹಿಂದೆ ಒಂದರಂತೆ ಹಗರಣಗಳು ಬೆಳಕಿಗೆ ಬರುತ್ತಿರುವುದು ಉದ್ಯೋಗಾಕಾಂಕ್ಷಿ ಯುವಕರಲ್ಲಿ ಆತಂಕ ಮೂಡಿಸಿದ್ದು, ಸರ್ಕಾರ ಕೂಡಲೇ ಮಧ್ಯಪ್ರವೇಶಿಸಿ ಪಾರದರ್ಶಕ ತನಿಖೆ ನಡೆಸಬೇಕು ಎಂದು ಮಾಜಿ ಸಚಿವ ವಿ. ಸುನಿಲ್ ಕುಮಾರ್ ಒತ್ತಾಯಿಸಿದರು.
ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಪಿಎಸ್ಸಿ ಅಧ್ಯಕ್ಷರೇ ನೇಮಕಾತಿ ಅಕ್ರಮದಲ್ಲಿ ಭಾಗಿಯಾಗಿರುವ ಆರೋಪಗಳು ಕೇಳಿಬಂದಿದ್ದು, ನೇಮಕಾತಿಗೆ ಕೋಟ್ಯಂತರ ರೂಪಾಯಿ ಹಣ ಪಡೆದಿರುವ ಕುರಿತು ಧ್ವನಿಮುದ್ರಿಕೆಗಳು ಬಹಿರಂಗವಾಗಿವೆ ಎಂದು ಆರೋಪಿಸಿದರು.
ಈ ವಿಷಯವನ್ನು ವಿಧಾನಸಭೆಯಲ್ಲೂ ಪ್ರಸ್ತಾಪಿಸಿದ್ದರೂ, ಸರ್ಕಾರ ನಿಯಮಾವಳಿ ಸುಧಾರಣೆ ಅಥವಾ ವ್ಯವಸ್ಥೆ ಶುದ್ಧೀಕರಣಕ್ಕೆ ಯಾವುದೇ ಕ್ರಮ ಕೈಗೊಂಡಿಲ್ಲ. ಸಾವಿರಾರು ನೇಮಕಾತಿಗಳು ನಡೆಯಲಿರುವ ಸಂದರ್ಭದಲ್ಲಿ ಇಂತಹ ಬೆಳವಣಿಗೆಗಳು ಅಭ್ಯರ್ಥಿಗಳಲ್ಲಿ ಅನುಮಾನ ಹಾಗೂ ಆತಂಕ ಹೆಚ್ಚಿಸಿವೆ. ಸರ್ಕಾರದ ಮೌನವು ಅನುಮಾನಕ್ಕೆ ಎಡೆಮಾಡಿಕೊಟ್ಟಿದ್ದು, ಮುಖ್ಯಮಂತ್ರಿ ಯುವಕರಲ್ಲಿ ವಿಶ್ವಾಸ ಮೂಡಿಸುವಂತೆ ಸ್ಪಷ್ಟನೆ ನೀಡಬೇಕು ಎಂದು ಆಗ್ರಹಿಸಿದರು.
ಮಾಜಿ ಸಚಿವ ಸಿ.ಟಿ. ರವಿಗೆ ನೋಟಿಸ್ ನೀಡಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ರಾಜ್ಯದಲ್ಲಿ ದರೋಡೆ, ಕೊಲೆ, ಪೊಲೀಸರ ಮೇಲಿನ ಹಲ್ಲೆಗಳಂತಹ ಗಂಭೀರ ಪ್ರಕರಣಗಳತ್ತ ಗಮನ ಹರಿಸಬೇಕಾದ ಗೃಹ ಇಲಾಖೆ, ಫೇಸ್ಬುಕ್ ಪೋಸ್ಟ್ಗಳು ಮತ್ತು ಭಾಷಣಗಳನ್ನು ಪರಿಶೀಲಿಸುವುದನ್ನೇ ಆದ್ಯತೆಯನ್ನಾಗಿ ಮಾಡಿಕೊಂಡಿದೆ ಎಂದು ಟೀಕಿಸಿದರು.
ಕಾಂಗ್ರೆಸ್ ಕಾರ್ಯಕರ್ತರ ಸಾಮಾಜಿಕ ಜಾಲತಾಣದ ಅವಹೇಳನಕಾರಿ ಪೋಸ್ಟ್ಗಳ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲಾಗುತ್ತಿಲ್ಲ. ಬಿಜೆಪಿ ಹಾಗೂ ಹಿಂದೂ ಸಂಘಟನೆಗಳನ್ನು ಮಾತ್ರ ಗುರಿಯಾಗಿಸಲಾಗುತ್ತಿದೆ ಎಂದು ಆರೋಪಿಸಿದ ಅವರು, ಪ್ರಚೋದನೆ ನೀಡಿದವರ ವಿರುದ್ಧ ಕಾನೂನು ಕ್ರಮ ಜರುಗಿಸಲಿ, ಆದರೆ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕಬಾರದು ಎಂದರು.
‘ಸಂಸತ್ತಿನ ಚರ್ಚೆಯಲ್ಲಿ ಭಾಗವಹಿಸಲಿ’ಲೋಕಸಭಾ ಅಧಿವೇಶನದ ಕುರಿತು ಮಾತನಾಡಿದ ಅವರು, ಕಾಂಗ್ರೆಸ್ಗೆ ಪ್ರಜಾಪ್ರಭುತ್ವ ವ್ಯವಸ್ಥೆ, ಸಂವಿಧಾನ ಮತ್ತು ಸಂಸತ್ತಿನ ಚರ್ಚೆಗಳ ಮೇಲೆ ನಂಬಿಕೆ ಇಲ್ಲದಂತಾಗಿದೆ ಎಂದು ಟೀಕಿಸಿದರು.
ಸಂಸತ್ತಿನಲ್ಲಿ ಚರ್ಚೆಯಲ್ಲಿ ಭಾಗವಹಿಸಿದರೆ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು. ಚರ್ಚೆ ಬಿಟ್ಟು ನಿರಂತರ ಚಳವಳಿಯ ಮಾರ್ಗ ಹಿಡಿದರೆ ಪ್ರಯೋಜನವಿಲ್ಲ. ಕಾನೂನು ರೂಪಿಸುವ ವೇದಿಕೆಯಲ್ಲಿ ಉತ್ತಮ ಕಾನೂನುಗಳನ್ನು ತರಲು ಬಿಜೆಪಿ ಬದ್ಧವಾಗಿದೆ ಎಂದು ಹೇಳಿದರು.
‘ಶಾಂತಿಯುತ ಹೋರಾಟಕ್ಕೆ ಸರ್ಕಾರ ಸಿದ್ಧ’ಇ–20 ಪೆಟ್ರೋಲ್ ವಿರುದ್ಧದ ಹೋರಾಟದ ಕುರಿತು ಪ್ರತಿಕ್ರಿಯಿಸಿದ ಅವರು, ನೈಜ ಬೇಡಿಕೆಗಳ ಕುರಿತು ಶಾಂತಿಯುತವಾಗಿ ಚರ್ಚಿಸಲು ಸರ್ಕಾರ ಸಿದ್ಧವಿದೆ. ಆದರೆ ಚಳವಳಿಯ ಹೆಸರಿನಲ್ಲಿ ಅರಾಜಕತೆ, ಸೈನಿಕರ ಮೇಲೆ ಕಲ್ಲುತೂರಾಟ ಅಥವಾ ಪೊಲೀಸರ ಮೇಲಿನ ಹಲ್ಲೆಯನ್ನು ಯಾವುದೇ ಕಾರಣಕ್ಕೂ ಸಮರ್ಥಿಸಲು ಸಾಧ್ಯವಿಲ್ಲ. ಇಂತಹ ಪ್ರಕರಣಗಳಲ್ಲಿ ಕೇಂದ್ರ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದು ಹೇಳಿದರು.
‘ಅಕ್ಕಿ ಕಾಳಸಂತೆ ಆರೋಪದ ಸತ್ಯ ಹೊರಬರಲಿ’ಪಡಿತರ ಅಕ್ಕಿ ಕಾಳಸಂತೆಯಲ್ಲಿ ಬಿಜೆಪಿ ನಾಯಕರು ಭಾಗಿಯಾಗಿದ್ದಾರೆ ಎಂಬ ಸಚಿವ ಪ್ರಿಯಾಂಕ್ ಖರ್ಗೆ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಆರೋಪದ ಸಂಪೂರ್ಣ ಸತ್ಯ ಹೊರಬರಲಿ. ತಪ್ಪಿತಸ್ಥರ ಪರವಾಗಿ ಬಿಜೆಪಿ ಸಮರ್ಥನೆ ಮಾಡುವುದಿಲ್ಲ ಎಂದರು.
ಈ ಕುರಿತು ಕಮಿಷನರ್ ಈಗಾಗಲೇ ವರದಿ ಸಲ್ಲಿಸಿದ್ದರೂ ಸರ್ಕಾರ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದ ಅವರು, ಬರ ಪರಿಸ್ಥಿತಿ ಅಧ್ಯಯನಕ್ಕಾಗಿ ಹಾಸನ, ಚಿಕ್ಕಮಗಳೂರು ಹಾಗೂ ಶೃಂಗೇರಿ ಭಾಗಗಳಿಗೆ ಪ್ರವಾಸ ಕೈಗೊಳ್ಳುವುದಾಗಿ ತಿಳಿಸಿದರು.
ರಾಜ್ಯ ಸರ್ಕಾರ ಮೂರು ವರ್ಷಗಳಲ್ಲಿ ಪ್ರಕೃತಿ ವಿಕೋಪಗಳಿಗೆ ಎಷ್ಟು ಅನುದಾನ ನೀಡಿದೆ ಎಂಬುದನ್ನು ಸ್ಪಷ್ಟಪಡಿಸಬೇಕು. 2023ರ ಬಳಿಕ ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಿಗೆ ಸಮರ್ಪಕ ಅನುದಾನ ಲಭಿಸಿಲ್ಲ. ಸುರಂಗ ಮಾರ್ಗ, ಟೌನ್ಶಿಪ್ ಹಾಗೂ ಇತರ ಯೋಜನೆಗಳಿಗೆ ಸಾವಿರಾರು ಕೋಟಿ ರೂಪಾಯಿ ವೆಚ್ಚ ಮಾಡುವ ಸರ್ಕಾರ, ಬರ ಪರಿಹಾರದ ವಿಚಾರದಲ್ಲಿ ಮಾತ್ರ ಕೇಂದ್ರ ಸರ್ಕಾರವನ್ನು ದೂರಬಾರದು ಎಂದು ಹೇಳಿದರು.
ಬರಪೀಡಿತ ರಾಜ್ಯಗಳಿಗೆ ಕೇಂದ್ರ ಸರ್ಕಾರ ಅಧ್ಯಯನ ತಂಡವನ್ನು ಕಳುಹಿಸಿ, ನಿಗದಿತ ಮಾನದಂಡಗಳ ಪ್ರಕಾರ ಅನುದಾನ ಬಿಡುಗಡೆ ಮಾಡುತ್ತದೆ ಎಂದು ಸುನಿಲ್ ಕುಮಾರ್ ತಿಳಿಸಿದರು.















