ಪ್ರಕಾಶ್ ರಾಜ್ ಅವರೇ ಅಧಿಕ‌ ಪ್ರಸಂಗ ನಿಲ್ಲಿಸಿ, ಇಲ್ಲದಿದ್ದರೆ ಮೀನುಗಳಿಗೆ ಆಹಾರವಾಗಬಹುದು- ಶಾಸಕ ಯಶ್ ಪಾಲ್ ಸುವರ್ಣ ಎಚ್ಚರಿಕೆ

ಉಡುಪಿ: ‘ಕಾಕ್ರೋಚ್’ ಹಾಗೂ ಕಾಂಗ್ರೆಸ್ ಬೆಂಬಲಿತರು ದೇಶದಲ್ಲಿ ಅರಾಜಕತೆ ಸೃಷ್ಟಿಸುತ್ತಿದ್ದು, ಗೂಂಡಾ ಸಂಸ್ಕೃತಿ ಮತ್ತು ದೇಶವಿರೋಧಿ ನೀತಿಯನ್ನು ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿ ಉಡುಪಿ ಜಿಲ್ಲಾ ಬಿಜೆಪಿ ವತಿಯಿಂದ ನಗರದ ಜಟ್ಕಾ ಸ್ಟ್ಯಾಂಡ್ ಬಳಿ ಮಂಗಳವಾರ ಪ್ರತಿಭಟನೆ ನಡೆಸಲಾಯಿತು.

ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಹಾಗೂ ‘ಕಾಕ್ರೋಚ್’ ಪಾರ್ಟಿ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆಯ ವೇಳೆ ವಿಪಕ್ಷ ನಾಯಕರ ‘ಜಿರಲೆ’ ಭಾವಚಿತ್ರಕ್ಕೆ ರಾಸಾಯನಿಕ ಸಿಂಪಡಿಸಿ, ಕಲ್ಲಿನಿಂದ ಜಜ್ಜುವ ಮೂಲಕ ಪ್ರತಿಭಟನೆ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಯಶಪಾಲ್ ಎ. ಸುವರ್ಣ, ಕಾಂಗ್ರೆಸ್, ‘ಕಾಕ್ರೋಚ್’ ಹಾಗೂ ಎಸ್‌ಡಿಪಿಐ ಸೇರಿದಂತೆ ರಾಷ್ಟ್ರವಿರೋಧಿ ಶಕ್ತಿಗಳ ಬೆಂಬಲದಿಂದ ನಡೆಯುತ್ತಿರುವ ಪ್ರತಿಭಟನೆಗಳು ವಿದ್ಯಾರ್ಥಿಗಳ ಹಿತಾಸಕ್ತಿಗಾಗಿ ಅಲ್ಲ, ದೇಶದಲ್ಲಿ ಅರಾಜಕತೆ ಸೃಷ್ಟಿಸುವ ಉದ್ದೇಶದಿಂದ ನಡೆಯುತ್ತಿವೆ ಎಂದು ಆರೋಪಿಸಿದರು.

ಜಂತರ್ ಮಂತರ್‌ನಲ್ಲಿ ನಡೆದ ಪ್ರತಿಭಟನೆಯಲ್ಲಿ ಹೆಚ್ಚಿನವರು ವಿದ್ಯಾರ್ಥಿಗಳಲ್ಲ. ಮುಂದಿನ ದಿನಗಳಲ್ಲಿ ಈ ಪ್ರತಿಭಟನೆಗಳ ಹಿಂದಿರುವ ಸತ್ಯ ಬಹಿರಂಗವಾಗಲಿದೆ ಎಂದು ಅವರು ಹೇಳಿದರು. ಸದಾ ನಶೆಯಲ್ಲಿ‌ ತೇಲುತ್ತಿರುವ ರಾಹುಲ್ ಗಾಂಧಿ, ವಿದ್ಯಾರ್ಥಿಗಳ ತಲೆಯಲ್ಲಿ ಬಿಷಬೀಜ ಬಿತ್ತುವ ಮೂಲಕ ರಾಜಕೀಯ ಬೆಳೆ ಬೇಯಿಸಿಕೊಳ್ಳುತ್ತಿದ್ದಾರೆ ಎಂದು ತೀವ್ರ ವಾಗ್ದಾಳಿ ನಡೆಸಿದರು.

ಕಾಂಗ್ರೆಸ್ ಸಮಾಜದಲ್ಲಿ ಉದ್ವಿಗ್ನತೆ ಉಂಟುಮಾಡುವ ರಾಜಕೀಯ ಮಾಡುತ್ತಿದೆ ಎಂದು ಆರೋಪಿಸಿದರು. ನಟ ಪ್ರಕಾಶ್ ರಾಜ್ ಅವರೇ ಉಡುಪಿಗೆ ಬಂದು ಅಧಿಕ ಪ್ರಸಂಗ ಮಾಡುವುದು ನಿಲ್ಲಿಸಿ, ಇಲ್ಲದಿದ್ದರೆ ನೀವು ಮೀನುಗಳಿಗೆ ಆಹಾರವಾಗಬಹುದು ಎಂದು ಎಚ್ಚರಿಕೆ ನೀಡಿದರು.

ಮಣಿಪಾಲದ 7 ಫ್ಯಾಕಲ್ಟಿ ವಿರುದ್ಧ ಕ್ರಮಕ್ಕೆ ಆಗ್ರಹಮಣಿಪಾಲದಲ್ಲಿ ಏಳು ಮಂದಿ ಫ್ಯಾಕಲ್ಟಿಗಳು ವಿದ್ಯಾರ್ಥಿಗಳನ್ನು ಪ್ರತಿಭಟನೆಗೆ ಪ್ರಚೋದಿಸಿದ್ದಾರೆ ಎಂದು ಆರೋಪಿಸಿದ ಅವರು ವಿದ್ಯಾರ್ಥಿಗಳಿಗೆ ಗಾಂಜಾ ಪೂರೈಕೆ ಮಾಡುತ್ತಿದ್ದಾರೆ ಎಂಬ ಆರೋಪವನ್ನೂ ಮಾಡಿದರು.

ಈ ಕುರಿತು ಪೊಲೀಸರು ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕು. ತಪ್ಪಿತಸ್ಥರ ವಿರುದ್ಧ ಕ್ರಮವಾಗದಿದ್ದರೆ ಬಿಜೆಪಿ ಹೋರಾಟ ನಡೆಸಲಿದೆ ಎಂದು ಎಚ್ಚರಿಕೆ ನೀಡಿದರು.