ಬೆಂಗಳೂರು : ಸಾಮಾಜಿಕ ಜಾಲತಾಣಗಳಲ್ಲಿ ಪರಿಚಯವಾಗುವ ಅಪರಿಚಿತರನ್ನು ಅತಿಯಾಗಿ ನಂಬಿದರೆ ಎಂತಹ ದುಬಾರಿ ಬೆಲೆ ತೆರಬೇಕಾಗಬಹುದು ಎಂಬುದಕ್ಕೆ ಬೆಂಗಳೂರಿನಲ್ಲಿ ನಡೆದಿರುವ ಈ ಘಟನೆ ಮತ್ತೊಂದು ಎಚ್ಚರಿಕೆಯ ಗಂಟೆಯಾಗಿದೆ. ಫೇಸ್‌ಬುಕ್‌ನಲ್ಲಿ ಪರಿಚಯವಾದ ವ್ಯಕ್ತಿಯೊಬ್ಬನನ್ನು ನಂಬಿದ ವಿಚ್ಛೇದಿತ ಮಹಿಳೆ, ಉಡುಗೊರೆ ಹಾಗೂ ಪ್ರೀತಿಯ ನಾಟಕಕ್ಕೆ ಮರುಳಾಗಿ ಬರೋಬ್ಬರಿ ₹1.75 ಕೋಟಿ ಕಳೆದುಕೊಂಡಿದ್ದಾರೆ.
ಯಶವಂತಪುರ ನಿವಾಸಿಯಾಗಿರುವ ಮಹಿಳೆಗೆ ಫೇಸ್‌ಬುಕ್‌ನಲ್ಲಿ ವ್ಯಕ್ತಿಯೊಬ್ಬ ಪರಿಚಯವಾಗಿದ್ದು, ತಾನು ಯುನೈಟೆಡ್ ಕಿಂಗ್‌ಡಮ್ (ಯುಕೆ)ನಲ್ಲಿ ಉದ್ಯೋಗದಲ್ಲಿದ್ದೇನೆ ಎಂದು ಹೇಳಿ ಸ್ನೇಹ ಬೆಳೆಸಿದ್ದಾನೆ. ಬಳಿಕ ಇಬ್ಬರೂ ವಾಟ್ಸಾಪ್‌ನಲ್ಲಿ ನಿರಂತರ ಸಂಪರ್ಕದಲ್ಲಿದ್ದು, ಮಹಿಳೆಯ ವಿಶ್ವಾಸವನ್ನು ಸಂಪೂರ್ಣವಾಗಿ ಗಳಿಸಿದ್ದಾನೆ.
ಕೆಲ ದಿನಗಳ ನಂತರ ಯುಕೆಯಿಂದ ಚಿನ್ನಾಭರಣ, ವಜ್ರಾಭರಣ ಹಾಗೂ ದುಬಾರಿ ಸೀರೆಗಳನ್ನು ಉಡುಗೊರೆಯಾಗಿ ಕಳುಹಿಸುತ್ತಿದ್ದೇನೆ ಎಂದು ಹೇಳಿದ ಆತ, ಗಿಫ್ಟ್‌ಗಳ ಫೋಟೋಗಳು ಹಾಗೂ ನಕಲಿ ಕೊರಿಯರ್ ರಸೀದಿಯನ್ನೂ ಕಳುಹಿಸಿ ಮಹಿಳೆಯನ್ನು ನಂಬಿಸಿದ್ದಾನೆ.
ನಂತರ ದೆಹಲಿ ಕಸ್ಟಮ್ಸ್‌ನಲ್ಲಿ ಉಡುಗೊರೆಗಳು ತಡೆಹಿಡಿಯಲ್ಪಟ್ಟಿದ್ದು, ಅವುಗಳನ್ನು ಬಿಡುಗಡೆ ಮಾಡಲು ಹಣ ಪಾವತಿಸಬೇಕಾಗಿದೆ ಎಂದು ಹೇಳಿ ವಂಚನೆಗೆ ಚಾಲನೆ ನೀಡಿದ್ದಾನೆ. ತನ್ನ ಬಳಿ ಭಾರತೀಯ ಕರೆನ್ಸಿ ಇಲ್ಲ, ಭಾರತಕ್ಕೆ ಬಂದ ಬಳಿಕ ಹಣ ಹಿಂದಿರುಗಿಸುತ್ತೇನೆ ಎಂದು ನಂಬಿಸಿ ಮಹಿಳೆಯಿಂದ ಹಣ ಪಡೆದುಕೊಳ್ಳಲು ಆರಂಭಿಸಿದ್ದಾನೆ.
ಇದಾದ ಬಳಿಕ ಕಸ್ಟಮ್ಸ್ ಅಧಿಕಾರಿಯ ಸೋಗಿನಲ್ಲಿ ಮತ್ತೊಬ್ಬ ವ್ಯಕ್ತಿ ಕರೆ ಮಾಡಿ ವಿವಿಧ ಶುಲ್ಕಗಳ ಹೆಸರಿನಲ್ಲಿ ಹಣ ಪಾವತಿಸುವಂತೆ ಸೂಚಿಸಿದ್ದಾನೆ. ಮಹಿಳೆ ಆರ್‌ಟಿಜಿಎಸ್ ಸೇರಿದಂತೆ ವಿವಿಧ ಮಾರ್ಗಗಳ ಮೂಲಕ ಹಣ ವರ್ಗಾವಣೆ ಮಾಡಿದ್ದು, ಕೆಲವು ಸಂದರ್ಭಗಳಲ್ಲಿ ಆರೋಪಿಗಳು ಖುದ್ದಾಗಿ ಬಂದು ಹಣವೂ ಪಡೆದುಕೊಂಡಿದ್ದಾರೆ ಎನ್ನಲಾಗಿದೆ.
ಹೀಗೆ ಹಂತ ಹಂತವಾಗಿ ಹಣ ಪಡೆದುಕೊಂಡ ವಂಚಕರು, ಮಹಿಳೆಯಿಂದ ಒಟ್ಟು ₹1.75 ಕೋಟಿ ಕಸಿದುಕೊಂಡಿದ್ದಾರೆ. ನಂತರ ಅನುಮಾನಗೊಂಡ ಮಹಿಳೆ ಯುಕೆ ವ್ಯಕ್ತಿಯನ್ನು ಸಂಪರ್ಕಿಸಲು ಯತ್ನಿಸಿದಾಗ ಆತನ ಮೊಬೈಲ್ ಸ್ವಿಚ್ ಆಫ್ ಆಗಿದ್ದು, ತಾನು ಸೈಬರ್ ವಂಚಕರ ಬಲೆಗೆ ಬಿದ್ದಿರುವುದು ಗೊತ್ತಾಗಿದೆ.
ಈ ಸಂಬಂಧ ಉತ್ತರ ಸೈಬರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಮಾಹಿತಿ ತಂತ್ರಜ್ಞಾನ ಕಾಯ್ದೆ ಹಾಗೂ ಭಾರತೀಯ ನ್ಯಾಯ ಸಂಹಿತೆ (BNS) ಸೆಕ್ಷನ್ 318ರ ಅಡಿಯಲ್ಲಿ ಪ್ರಕರಣ ದಾಖಲಿಸಿರುವ ಪೊಲೀಸರು ಆರೋಪಿಗಳ ಪತ್ತೆಗೆ ತನಿಖೆ ಮುಂದುವರಿಸಿದ್ದಾರೆ.
ಸೈಬರ್ ತಜ್ಞರ ಪ್ರಕಾರ, ವಿದೇಶದಿಂದ ಉಡುಗೊರೆ ಕಳುಹಿಸುವುದಾಗಿ ಹೇಳಿ ಕಸ್ಟಮ್ಸ್ ಶುಲ್ಕ, ತೆರಿಗೆ ಅಥವಾ ಕ್ಲಿಯರೆನ್ಸ್ ಶುಲ್ಕದ ಹೆಸರಿನಲ್ಲಿ ಹಣ ಕೇಳುವುದು ಸಾಮಾನ್ಯ ಸೈಬರ್ ವಂಚನೆಯ ವಿಧಾನವಾಗಿದೆ. ಇಂತಹ ಕರೆಗಳು ಅಥವಾ ಸಂದೇಶಗಳ ಬಗ್ಗೆ ಸಾರ್ವಜನಿಕರು ಎಚ್ಚರಿಕೆ ವಹಿಸಬೇಕೆಂದು ಪೊಲೀಸರು ಮನವಿ ಮಾಡಿದ್ದಾರೆ.















