ಗ್ರಾಹಕರಿಗೆ ಶಾಕ್ ನೀಡಿದ ವಾಹನ ತಯಾರಕ ಕಂಪನಿಗಳು,ಆಗಸ್ಟ್ 1ರಿಂದ ಬೆಲೆ ಏರಿಕೆಯ ಬಿಸಿ

ನವದೆಹಲಿ: ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವ ಬೆಲೆ ಏರಿಕೆಯ ಹೊರೆ ನಡುವೆಯೇ ಜನರಿಗೆ ಮತ್ತೊಂದು ಆಘಾತ ಎದುರಾಗಿದೆ. ಆಗಸ್ಟ್ 1ರಿಂದ ಹಲವು ವಾಹನ ತಯಾರಕ ಕಂಪನಿಗಳು ತಮ್ಮ ವಾಹನಗಳ ಬೆಲೆ ಹೆಚ್ಚಳಕ್ಕೆ ಮುಂದಾಗಿದ್ದು, ಇದರ ನೇರ ಪರಿಣಾಮ ಗ್ರಾಹಕರ ಮೇಲೆ ಬೀಳಲಿದೆ. ಇದರ ಜೊತೆಗೆ ಟ್ರಾವೆಲ್ಸ್ ಮಾಲೀಕರ ಸಂಘಗಳೂ ಬಾಡಿಗೆ ದರ ಹೆಚ್ಚಿಸುವ ಸೂಚನೆ ನೀಡಿವೆ.

ಜಾಗತಿಕ ಮಟ್ಟದಲ್ಲಿ ಯುದ್ಧದ ಪರಿಣಾಮ, ಹಣದುಬ್ಬರ ಹಾಗೂ ಉಕ್ಕು, ಅಲ್ಯೂಮಿನಿಯಂ, ರಬ್ಬರ್, ಪ್ಲಾಸ್ಟಿಕ್, ಎಲೆಕ್ಟ್ರಾನಿಕ್ ಚಿಪ್‌ಗಳು, ಬ್ಯಾಟರಿಗಳು ಮತ್ತು ವಿವಿಧ ಬಿಡಿಭಾಗಗಳ ಬೆಲೆ ಏರಿಕೆಯಾಗಿರುವುದರಿಂದ ವಾಹನ ಉತ್ಪಾದನಾ ವೆಚ್ಚ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಹಲವು ವಾಹನ ತಯಾರಕ ಕಂಪನಿಗಳು ಹೊಸ ವಾಹನಗಳ ಬೆಲೆ ಪರಿಷ್ಕರಿಸಲು ನಿರ್ಧರಿಸಿವೆ.

ವಾಹನಗಳ ಬೆಲೆ ಏರಿಕೆಯಿಂದ ಸಾಮಾನ್ಯ ಗ್ರಾಹಕರ ಜೊತೆಗೆ ಟ್ರಾವೆಲ್ಸ್ ಉದ್ಯಮಕ್ಕೂ ಹೊರೆ ಹೆಚ್ಚಾಗಲಿದೆ. ಕಾರು, ಟಿಟಿ ಸೇರಿದಂತೆ ವಾಣಿಜ್ಯ ಬಳಕೆಯ ವಾಹನಗಳನ್ನು ಖರೀದಿಸುವ ವೆಚ್ಚ ಹೆಚ್ಚುವುದರಿಂದ ಟ್ರಾವೆಲ್ಸ್ ಸಂಸ್ಥೆಗಳ ಮೇಲೂ ಆರ್ಥಿಕ ಒತ್ತಡ ಉಂಟಾಗಲಿದೆ.

ಈಗಾಗಲೇ ಪೆಟ್ರೋಲ್, ಡೀಸೆಲ್ ಹಾಗೂ ಟೋಲ್ ಶುಲ್ಕ ಏರಿಕೆಯಿಂದ ಸಂಕಷ್ಟದಲ್ಲಿರುವ ಟ್ರಾವೆಲ್ಸ್ ಉದ್ಯಮ, ಹೊಸ ವಾಹನಗಳ ಬೆಲೆ ಹೆಚ್ಚಳದ ಹೊರೆ ತಡೆಯಲು ಪ್ರಯಾಣ ದರ ಹೆಚ್ಚಿಸುವತ್ತ ಚಿಂತನೆ ನಡೆಸಿದೆ. ಕರ್ನಾಟಕ ಟ್ರಾವೆಲ್ಸ್ ಅಸೋಸಿಯೇಷನ್ ಕೂಡ ಪ್ರತಿ ಪ್ರಯಾಣದ ಬಾಡಿಗೆಯಲ್ಲಿ ಹೆಚ್ಚಳ ಮಾಡುವ ಮುನ್ಸೂಚನೆ ನೀಡಿದ್ದು, ಆಗಸ್ಟ್‌ನಿಂದ ಪ್ರಯಾಣವೂ ದುಬಾರಿಯಾಗುವ ಸಾಧ್ಯತೆ ಇದೆ.